ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆರೋಗ್ಯ ವಿಮಾ ಯೋಜನೆಯನ್ನು ಮುಂದಿನ ಲೋಕಸಭೆ ಚುನಾವಣೆಗೆ ಮುನ್ನ ಜಾರಿ ಮಾಡಲು ನಿರ್ಧರಿಸಿರುವ ಕೇಂದ್ರ ಸರಕಾರ, ಇದಕ್ಕಾಗಿ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ. ಆಗಸ್ಟ್ 15ರಂದು ಯೋಜನೆ ಅನುಷ್ಠಾನ ಮಾಡಬೇಕು ಎಂಬುದು ಸರ್ಕಾರದ ಅಭಿಲಾಷೆಯಾಗಿದೆ. ಈಗಾಗಲೇ ಫಲಾನುಭವಿಗಳು ಹಾಗೂ ಐಟಿ ಮೂಲಸೌಕರ್ಯಗಳನ್ನು ಸಿದ್ಧಪಡಿಸಿ ಕೊಳ್ಳಲಾಗಿದೆ. ಆದರೆ, ಆಸ್ಪತ್ರೆಗಳು ಮತ್ತು ವಿಮಾ ಕಂಪೆನಿಗಳನ್ನು ಒಪ್ಪಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸರಕಾರದ ವಿಮಾ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಂದು ಭೂಷಣ್, “”ಖಾಸಗಿ ಆಸ್ಪತ್ರೆಗಳೊಂದಿಗೆ ಕೈಜೋಡಿಸದೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಅಂತಹ ವ್ಯವಸ್ಥೆ ಸರಕಾರದ ಬಳಿಯೂ ಇಲ್ಲ. ಆ.15ರ ಹೊತ್ತಿಗೆ ಯೋಜನೆ ಯಶಸ್ವಿಯಾಗಿ ಚಾಲನೆಗೊಳ್ಳಲಿದೆ. ಇದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಯನ್ನು ಸರಕಾರ ಮಾಡಿಕೊಳ್ಳುತ್ತಿದೆ” ಎಂದಿದ್ದಾರೆ.