ಚಿಲಿಂಬಿ: ದೇಶದ ಭದ್ರತೆ, ಸಮಗ್ರ ಅಭಿವೃದ್ಧಿಗಾಗಿ ಮತ್ತು ಭಾರತವನ್ನು ಬಲಿಷ್ಠ ದೇಶವಾಗಿಸಲು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಅವರ ನೇತೃತ್ವ ದಲ್ಲಿ ಮತ್ತೂಮ್ಮೆ ಪ್ರಚಂಡ ಬಹುಮತದ ಸರಕಾರ ಬಂದಲ್ಲಿ ಭಾರತ ವಿಶ್ವಕ್ಕೆ ಗುರುವಾಗಲಿದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದರು.
ನಗರದ ಚಿಲಿಂಬಿಗುಡ್ಡೆಯ ಶ್ರೀ ರಾಮಾಂಜನೇಯ ಯುವಕ ಮಂಡಲದ ಸಭಾಂಗಣದಲ್ಲಿ ನಡೆದ 24ನೇ ವಾರ್ಡ್‌ನ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಂಗಳವಾರ ಮಾತನಾಡಿದರು.
1996ರಿಂದ ದ.ಕ. ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿದೆ. ಹಾಲಿ ಸಂಸದ, ಬಿಜೆಪಿ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರು ಈಗಾಗಲೇ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಿಸಿದ್ದಾರೆ. ದ.ಕ. ಜಿಲ್ಲೆಗೆ ಅವರು ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ ದ.ಕ. ಜಿಲ್ಲೆಯಿಂದ ದೊಡ್ಡ ಮಟ್ಟಿನ ಅಪೇಕ್ಷೆ ಇಡಲಾಗಿದೆ. ಜನಸಾಮಾನ್ಯರಿಂದ ಹಿಡಿದು ಸೈನಿಕರವರೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ ಏಕೈಕ ಪ್ರಧಾನಿ ಮೋದಿ. ಅವರು ಮತ್ತೂಮ್ಮೆ ಪ್ರಧಾನಿಯಾಗಬೇಕಾದರೆ ಈ ಜಿಲ್ಲೆಯ ಜನತೆ ನಳಿನ್ ಕುಮಾರ್ ಅವರನ್ನು ಮೂರನೇ ಬಾರಿಗೆ ಗೆಲ್ಲಿಸಿ ಸಂಸತ್‌ಗೆ ಕಳುಹಿಸಬೇಕು ಎಂದರು.
ಮತದಾನ ನಮ್ಮ ಪರಮ ಕರ್ತವ್ಯ ವಾಗಿದ್ದು, ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ತಿಳಿಸಿದರು.
ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿ, ಪ್ರಧಾನಿ ಮೋದಿಯವರು ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಜತೆಗೆ ದೇಶದಲ್ಲಿ ಭಯೋತ್ಪಾದನೆ ನಿಗ್ರಹ ಮಾಡು ವಲ್ಲಿಯೂ ಸತತ ಪ್ರಯತ್ನಗಳನ್ನು ಮಾಡು ತ್ತಿದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿ ಕೂಡ ಚೌಕಿದಾರನಾಗಿ, ಭಾರತವನ್ನು ಯಶಸ್ವಿ ಯಾಗಿ ಮುನ್ನಡೆಸಿ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಹಾಗಾಗಿ ದ.ಕ. ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಮತ ಪಡೆದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರು ಗೆಲ್ಲುತ್ತಾರೆ. ದೇಶದಲ್ಲಿ 300ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗುತ್ತಾರೆ ಎಂದು ಹೇಳಿದರು.
ಪಕ್ಷದ ಪ್ರಮುಖರಾದ ರಾಮಚಂದ್ರ ಬೈಕಂಪಾಡಿ, ಜನಾರ್ದನ ಕುಡ್ವ, ರಮೇಶ್ ಕಂಡೆಟ್ಟು, ಉಮಾನಾಥ ಅಮೀನ್, ವಾಸುದೇವ್, ಗುರು ಪ್ರಸಾದ್, ಉಮೇಶ್ ಶೆಟ್ಟಿ, ಸಚಿನ್ ರಾಜ್‌ಗೋಪಾಲ್ ರೈ, ಸಂತೋಷ್ ಉಳ್ಳಾಲ್, ಪಕ್ಷದ ಸ್ಥಳೀಯ ಮುಖಂಡರಾದ ಗುರುದತ್, ಸುನಂದಾ, ಸುರೇಖಾ ಹೆಗ್ಡೆ, ಚಂದ್ರಾವತಿ, ಲೋಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು. ರಾಜ್‌ಗೋಪಾಲ್ ರೈ ಸ್ವಾಗತಿಸಿದರು. ವಾರ್ಡ್ ಅಧ್ಯಕ್ಷ ಸುರೇಶ್ ಕುಮಾರ್ ವಂದಿಸಿದರು.