Advertisement

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

05:31 PM May 18, 2024 | Team Udayavani |

ಮುಂಬಯಿ: ‘ಪ್ರಧಾನಿ ಮೋದಿ ನಮ್ಮ ಶಿವಸೇನೆಯನ್ನು ‘ನಕಲಿ’ ಸೇನಾ ಎಂದು ಕರೆಯುತ್ತಾರೆ, ನಾಳೆ ಅವರು ಆರ್‌ಎಸ್‌ಎಸ್ ಅನ್ನು ಕೂಡ ನಕಲಿ ಸಂಘ ಎಂದು ಕರೆಯಬಹುದು ಎಂದು ಮಾಜಿ ಸಿಎಂ, ಶಿವಸೇನಾ(ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಶನಿವಾರ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಮುಂಬೈನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್ ಸಿಪಿ(ಎಸ್ ಪಿ) ನಾಯಕ ಶರದ್ ಪವಾರ್ ಅವರೊಂದಿಗೆ ಇಂಡಿಯಾ ಮೈತ್ರಿಕೂಟದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಖರ್ಗೆ ಮಾತನಾಡಿ ‘ಪ್ರಧಾನಿ ಮೋದಿ ತಮ್ಮ ಚುನಾವಣ ಭಾಷಣಗಳ ಮೂಲಕ ಜನರನ್ನು ಪ್ರಚೋದಿಸುತ್ತಿದ್ದಾರೆ ಮತ್ತು ಸಮಾಜವನ್ನು ಒಡೆಯುತ್ತಿದ್ದಾರೆ. ಮೋದಿಯವರಿಗಿಂತ ಮೊದಲು ಯಾವ ಪ್ರಧಾನಿಯೂ ಜನರನ್ನು ಪ್ರಚೋದಿಸುವ ಕೆಲಸ ಮಾಡಿಲ್ಲ. ಅವರು ಪದೇ ಪದೇ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಆದರೆ ಪ್ರಜಾಪ್ರಭುತ್ವದ ತತ್ವಗಳಿಗೆ ಬದ್ಧರಾಗಿಲ್ಲ’ ಎಂದು ಆರೋಪಿಸಿದರು.

ಕಾಂಗ್ರೆಸ್ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಬುಲ್ಡೋಜ್ ಮಾಡುತ್ತದೆ ಮತ್ತು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ 370 ನೇ ವಿಧಿಯನ್ನು ಮರುಸ್ಥಾಪಿಸುತ್ತದೆ ಎಂದಿರುವ ಪ್ರಧಾನಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖರ್ಗೆ ” ನಾವು ಯಾರ ಮೇಲೂ ಬುಲ್ಡೋಜರ್ ಬಳಸಿಲ್ಲ. ಕಾಂಗ್ರೆಸ್ ಎಂದಿಗೂ ಮಾಡದ ಅಥವಾ ಕಾರ್ಯಗತಗೊಳಿಸಲು ಅಸಾಧ್ಯವಾದ ವಿಷಯಗಳ ಬಗ್ಗೆ ಜನರಿಗೆ ಸುಳ್ಳು ಹೇಳುವ ಮತ್ತು ಪ್ರಚೋದಿಸುವ ಅಭ್ಯಾಸವನ್ನು ಮೋದಿ ಹೊಂದಿದ್ದಾರೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿದ್ದೇವೆಯೋ ಅದನ್ನು ಕಾರ್ಯಗತಗೊಳಿಸುತ್ತೇವೆ” ಎಂದು ತಿರುಗೇಟು ನೀಡಿದರು.

ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಸ್ತುತ ಜಿಎಸ್‌ಟಿ ಬದಲಿಗೆ ಸರಳ, ಏಕ ದರದ ಜಿಎಸ್‌ಟಿಯನ್ನು ಜಾರಿಗೆ ತರಲಿದೆ ಎಂದರು. “ನಾವು ಆಹಾರ ಭದ್ರತಾ ಕಾಯ್ದೆಯನ್ನು ಪರಿಚಯಿಸಿದ್ದೇವೆ, ಆದರೆ ಪ್ರಧಾನಿ ಮೋದಿ ಉಚಿತ ಪಡಿತರ ಪೂರೈಕೆಯ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ” ಎಂದು ಖರ್ಗೆ ಆರೋಪಿಸಿದರು.

Advertisement

‘ಇಂಡಿಯಾ ಮೈತ್ರಿ ಕೂಟದ ಸರ್ಕಾರವು ಅಧಿಕಾರ ವಹಿಸಿಕೊಂಡ ಜೂನ್ 4 ರಿಂದ ಅಚ್ಚೇ ದಿನ್ ಬರಲಿದೆ’ ಎಂದು ಠಾಕ್ರೆ ಹೇಳಿದರು.

ನೀರುದ್ಯೋಗದಂತಹ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನಮ್ಮ ರ‍್ಯಾಲಿಯಲ್ಲಿ ಪಾಕಿಸ್ಥಾನದ ಧ್ವಜಗಳನ್ನು ಹಾರಿಸುತ್ತಿದೆ ಎಂದು ಠಾಕ್ರೆ ಆರೋಪಿಸಿದರು.

ಅಧಿಕಾರಕ್ಕೆ ಬಂದ ನಂತರ, ದೇಶದ ಎಲ್ಲಾ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವುದು ಇಂಡಿಯಾ ಬ್ಲಾಕ್ ಸರ್ಕಾರದ ಕರ್ತವ್ಯವಾಗಿದೆ ಎಂದು ಶರದ್ ಪವಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next