Advertisement

Fake doctors: ನಕಲಿ ವೈದ್ಯರಿಗೆ 1 ಲಕ್ಷ ರೂ. ದಂಡ, 3 ವರ್ಷ ಜೈಲು!: ಸಚಿವ ದಿನೇಶ್‌

11:22 PM Jul 22, 2024 | Team Udayavani |

ವಿಧಾನ ಪರಿಷತ್‌: ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು ನೋಂದಣಿ ಇಲ್ಲದೆ ಖಾಸಗಿ ವೈದ್ಯಕೀಯ ಸಂಸ್ಥೆ ನಡೆಸುತ್ತಿರುವವರಿಗೆ ಅಪರಾಧ ನಿರ್ಣಯವಾದ ಅನಂತರ 3 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ತಿಪ್ಪಣ್ಣ ಕಮಕನೂರು, ಕಲಬುರಗಿಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ನೂರಾರು ಸಾವುಗಳು ಸಂಭವಿಸುತ್ತಿವೆ. ಸರಕಾರ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಉತ್ತರಿಸಿದ ಸಚಿವರು, ನೂರಾರು ಸಾವು ಸಂಭವಿಸಿಲ್ಲ. ಭಯ ಹುಟ್ಟಿಸಬೇಡಿ. ನಕಲಿ ವೈದ್ಯರ ಹಾವಳಿ ನಿಜ. ಅದರ ವಿರುದ್ಧ ಕ್ರಮ ಕೂಡ ಜರಗಿಸಲಾಗುತ್ತಿದೆ ಎಂದರು.

ನೀಲಿ, ಹಸುರು ಫ‌ಲಕ
ಇನ್ನು ಅಲೋಪತಿ ವೈದ್ಯರು ತಮ್ಮ ನರ್ಸಿಂಗ್‌ ಹೋಂ, ಆಸ್ಪತ್ರೆಗಳ ಮುಂದೆ ನೀಲಿ ಬಣ್ಣದ, ಆಯುಷ್‌ ವೈದ್ಯರು ಹಸುರು ಬಣ್ಣದ ಫ‌ಲಕ ಅಳವಡಿಸುವುದು ಕಡ್ಡಾಯ. ಇದರಿಂದ ಅಲೋಪತಿ ವೈದ್ಯರು ಮತ್ತು ಆಯುಷ್‌ ವೈದ್ಯರನ್ನು ಕಂಡು ಹಿಡಿಯುವುದು ಸುಲಭವಾಗಲಿದೆ ಎಂದು ಸಚಿವರು ವಿವರಿಸಿದರು.

ನಕಲಿ ವೈದ್ಯರಿಗೆ ಯಾವ ಬಣ್ಣ?
ನಕಲಿ ವೈದ್ಯರಿಗೆ ಯಾವ ಬಣ್ಣ ಎಂದು ಪ್ರಶ್ನಿಸಿದ ಸಭಾಪತಿ ಹೊರಟ್ಟಿ, ಅವರಿಗೆ ಕೆಂಪು ಬಣ್ಣ ಹಾಕಿ ಎಂದರು. ತಮ್ಮ ಸಲಹೆ ಸ್ವೀಕರಿಸುವುದಾಗಿ ಹೇಳಿದ ಸಚಿವ ದಿನೇಶ್‌, ನಾಟಿ ವೈದ್ಯ ಪದ್ಧತಿಯವರು ಆಯುಷ್‌ ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅವರ ಬಳಿ ಚಿಕಿತ್ಸೆ ಪಡೆದ ಅನಂತರ ಅನಾಹುತಗಳಾಗಿವೆ. ನಮ್ಮ ಜನಪ್ರತಿನಿಧಿಗಳೇ ನಾಟಿ ವೈದ್ಯರ ಪರವಾಗಿ ವಕಾಲತ್ತು ವಹಿಸುತ್ತಾರೆ. ಅವರಲ್ಲಿ ಚೆನ್ನಾಗಿ ಕಲಿತು ಚಿಕಿತ್ಸೆ ಕೊಡುವವರೂ ಇದ್ದಾರೆ. ಅವರನ್ನೂ ಒಂದು ಕಾರ್ಯವ್ಯಾಪ್ತಿಗೆ ತರಬೇಕಿದೆ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next