ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ನಾಗರಿಕರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಅಭಿಯಾನಕ್ಕೆ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನೈಋತ್ಯ ರೈಲ್ವೆ ವ್ಯಾಪ್ತಿಯ ಮೈಸೂರು ಹುಬ್ಬಳ್ಳಿ, ಬೆಂಗಳೂರು ವಿಭಾಗಗಳ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಮುಕ್ತ ನಿಲ್ದಾಣವನ್ನಾಗಿಸುವುದು ಹಾಗೂ ಜನರಿಗೆ ಸ್ವಚ್ಛತಾ ಅರಿವು ಮೂಡಿಸುವ ಕಾರ್ಯಕ್ರಮ ಆರಂಭಿಸಲಾಗಿದೆ. ನಿಲ್ದಾಣಗಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವ ವಿಷಯದಲ್ಲಿ 68 ವಿಭಾಗಗಲ್ಲಿ ಮೈಸೂರು 4ನೇ ಸ್ಥಾನದಲ್ಲಿದೆ.
ಮೈಸೂರು ದೇಶದಲ್ಲಿಯೇ ಸ್ವಚ್ಛತಾ ನಗರ ಎಂಬ ಪ್ರಶಸ್ತಿಯನ್ನು ಈಗಾಗಲೇ ಪಡೆದುಕೊಂಡಿದೆ. ಅಲ್ಲದೆ ನೈಋತ್ಯ ರೈಲ್ವೆಯ ಮೂರು ವಿಭಾಗಗಳಲ್ಲಿ ಮೈಸೂರು ವಿಭಾಗ ಸ್ವಚ್ಛತೆ ಕಾಪಾಡುವಲ್ಲಿ ಮುಂದಿದೆ. ಹೀಗಾಗಿ ಇಲ್ಲಿ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಕೈಗೊಳ್ಳಲು ಸಾಧ್ಯವಿದೆ. ಆದ್ದರಿಂದ ಈ ಅಭಿಯಾನವನ್ನು ಮೈಸೂರಿನಿಂದಲೇ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಭಿಯಾನದ ಅಂಗವಾಗಿ ವಿಭಾಗದಲ್ಲಿರುವ ನಿಲ್ದಾಣಗಳಲ್ಲಿ ಎನ್‌ಜಿಒ, ಚಾರಿಟೆಬಲ್ ಇನ್‌ಸ್ಟಿಟ್ಯೂಷನ್, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದ್ದಾರೆ. ಬಳಿಕ ನಿಲ್ದಾಣದಲ್ಲಿ ಸ್ವಚ್ಛತೆ ಕುರಿತು ಕಾರ್ಯಾಗಾರ ನಡೆಯಲಿದೆ ಎಂದರು.
ಬಯೋ ಟಾಯ್ಲೆಟ್: ಸೆ.18 ರಂದು ಬಯೋ ಟಾಯ್ಲೆಟ್ ಬಳಕೆ ಮಾಡುವಂತೆ ಅರಿವು ಮೂಡಿಸುವುದು, ರೈಲ್ವೆ ಇಲಾಖೆಯ ಶಾಲೆ, ಕಾಲೋನಿ, ಆಸ್ಪತ್ರೆ, ಕಚೇರಿಗಳು ಅತಿಥಿಗೃಹ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕ ಬೇಡಿ ಎಂಬ ಸೂಚನೆ ಫಲಕ ಅಳವಡಿಸಲಾಗುವುದು. ಸೆ.19 ರಂದು ಸ್ವಚ್ಛ ನಿಲ್ದಾಣ ಪರಿಕಲ್ಪನೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು. ಇದೇ ರೀತಿ ಸ್ವಚ್ಛ ಆಹಾರ, ಸ್ವಚ್ಛ ಪರಿಸರ, ಸ್ವಚ್ಛ ರೈಲು ಸ್ವಚ್ಛ ಕಚೇರಿ, ಸ್ವಚ್ಛ ನೀರು ಬಳಕೆ, ಸ್ವಚ್ಛ ಶೌಚಾಲಯ ಕಾರ್ಯಕ್ರಮಗಳನ್ನು ಸೆ. 16ರಿಂದ 14 ದಿನ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮೈಸೂರು ನಿಲ್ದಾಣದ ಸುಂದರೀಕರಣ ಕಾಮಗಾರಿಯು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಬೇರೆ ವಿಭಾಗಗಳಿಗೆ ಹೋಲಿಕೆ ಮಾಡಿದರೆ ಮೈಸೂರು ವಿಭಾಗದಲ್ಲಿ ಕಾಮಗಾರಿಗಳು ಶೀಘ್ರಗತಿಯಲ್ಲಿ ನಡೆಯುತ್ತಿವೆ ಎಂದು ಶ್ಲಾ ಸಿದರು. ಇದಕ್ಕೂ ಮುನ್ನ ರೈಲ್ವೆ ಸಿಬ್ಬಂದಿ ಹಾಗೂ ನೆರೆದಿದ್ದ ನಾಗರಿಕರು ಸ್ವಚ್ಛತೆ ಪ್ರತಿಜ್ಞೆ ಸ್ವೀಕರಿಸಿದರು. ಡಿಆರ್‌ಎಂ ಅಪರ್ಣ ಗರ್ಗ್ ಇತರರಿದ್ದರು.