Advertisement

ಮೋದಿ ಹತ್ಯೆ ಸಂಚು: ಮಾವೋ ಚಿಂತಕ ವರವರ ರಾವ್‌ ಬಂಧನ

03:48 PM Aug 28, 2018 | udayavani editorial |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಹತ್ಯೆಯ ಸಂಚಿನ ಭಾಗವಾಗಿರುವುದಾಗಿ ಆರೋಪಿಸಲ್ಪಟ್ಟಿರುವ ಮಾವೋ ಸಿದ್ಧಾಂತಿ, ಕ್ರಾಂತಿಕಾರಿ ಬರಹಗಾರ, ಪಿ ವರವರ ರಾವ್‌ ಅವರನ್ನು ಇಂದು ಪುಣೆ ಪೊಲೀಸರು ಹೈದರಾಬಾದಿನಲ್ಲಿ ಬಂಧಿಸಿರುವುದಾಗಿ ರಾವ್‌ ಅವರ ಕುಟುಂಬಕ್ಕೆ ನಿಕಟವಿರುವ ಮೂಲಗಳು ತಿಳಿಸಿವೆ.

Advertisement

ಗಾಂಧಿನಗರದಲ್ಲಿನ ರಾವ್‌ ಮತ್ತು ನಗರದ ವಿವಿಧ ಭಾಗಗಳಲ್ಲಿರುವ ಇತರ ಏಳು ಮಂದಿಯ ನಿವಾಸಗಳನ್ನು ಇಂದು ಪೊಲೀಸರು ಸುಮಾರು ಎಂಟು ತಾಸುಗಳ ಕಾಲ ಜಾಲಾಡಿದ್ದಾರೆ. ಈ ಏಳು ಮಂದಿಯ ಪೈಕಿ ಇಬ್ಬರು ಪತ್ರಕರ್ತರಾಗಿದ್ದು ಒಬ್ಬರು ವಿಶ್ವವಿದ್ಯಾಲಯದ ಇಂಗ್ಲಿಷ್‌ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯದ ಪ್ರೊಫೆಸರ್‌ ಆಗಿದ್ದಾರೆ. 

ಪತ್ರಕರ್ತರಲ್ಲಿ ಒಬ್ಬರಾಗಿದ್ದು ಬಂಧಿತರಾಗಿರುವ ತೇಕುಲ ಕ್ರಾಂತಿ ಅವರ ಲ್ಯಾಪ್‌ ಟಾಪ್‌ ಮತ್ತು ಇತರ ಹಲವಾರು ದಾಖಲೆ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಇವುಗಳು ತೇಕುಲ ಅವರಿಗೆ ಮಾವೋ ಪಕ್ಷದೊಂದಿಗಿರುವ ನಂಟನ್ನು ಬಯಲು ಮಾಡಿವೆ. 

78ರ ಹರೆಯದ ವರವರ ರಾವ್‌ ಅವರನ್ನು ಬಿಗಿ ಭದ್ರತೆಯಲ್ಲಿ ಸಿಕಂದರಾಬಾದ್‌ ನಲ್ಲಿನ ಗಾಂಧಿ ಆಸ್ಪತ್ರೆಗೆ ಒಯ್ದು ಅಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರನ್ನು ಇಂದು ಸಂಜೆ ಹೈದರಾಬಾದ್‌ ನ್ಯಾಯಾಲಯದಲ್ಲಿ ಹಾಜರುಪಡಿಸಿ ಬಳಿಕ ಪುಣೆಗೆ ತರುವ ಸಾಧ್ಯತೆ ಇದೆ.

ರಾವ್‌ ಅವರ ಬಂಧನವಾಗುತ್ತಲೇ ಅವರ ಅನೇಕ ಹಿಂಬಾಲಕರು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಅವರ ನಿವಾಸದಲ್ಲಿ ಜಮಾಯಿಸಿ, ಬಂಧನವನ್ನು ವಿರೋಧಿಸಿ ಫ‌ಲಕಗಳನ್ನು ಹಿಡಿದು ಘೋಷಣೆ ಕೂಗಿದರು. 

Advertisement

ಮಾವೋ ಸಹಾನುಭೂತಿಯ ರೋಣ ಜೇಕಬ್‌ ವಿಲ್ಸನ್‌ ಎಂಬಾತನ ಮನೆಯಲ್ಲಿ ಪೊಲೀಸರಿಗೆ ಪತ್ರವೊಂದು ಸಿಕ್ಕಿತ್ತು. ಅದರಲ್ಲಿ ಎಂ-4 ರೈಫ‌ಲ್‌ ಮತ್ತು ನಾಲ್ಕು ಲಕ್ಷ ಸುತ್ತು ಮದ್ದುಗುಂಡು ಖರೀದಿಗೆ 8 ಕೋಟಿ ರೂ.ಗಳ ಅಗತ್ಯವಿದೆ ಎಂದು ಬರೆದಿತ್ತು.

ಈ ಪತ್ರದಲ್ಲಿ ರಾಜೀವ್‌ ಗಾಂಧಿ ಹತ್ಯೆ ರೀತಿಯ ಇನ್ನೊಂದು ಪ್ರಕರಣ ಸಾಧ್ಯತೆಯನ್ನು ಚರ್ಚಿಸಲಾಗಿತ್ತು ಎಂದು ಪೊಲೀಸರು ಸ್ಥಳೀಯ ಕೋರ್ಟಿಗೆ ಕಳೆದ ಜೂನ್‌ 8ರಂದು ಹೇಳಿದ್ದರು. ರೋಣ ವಿಲ್ಸನ್‌ ಮಾತ್ರವಲ್ಲದೆ ಅವರೊಂದಿಗೆ ನಂಟು ಹೊಂದಿದ್ದ ಇತರ ಐವರನ್ನೂ ಪೊಲೀಸರು ಆ ಸಂದರ್ಭದಲ್ಲಿ ಬಂಧಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next