Advertisement
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ತನ್ನ ಪ್ರತಿ ಮಾತಿನಲ್ಲೂ ಕಾಂಗ್ರೆಸನ್ನು ತೀಕ್ಷ್ಣವಾಗಿ ತಿವಿದಿದ್ದಾರೆ. 70 ವರ್ಷಗಳ ಅನಂತರವೂ ದೇಶ ಇದೇ ರೀತಿ ಇರಲು ನೀವೇ ಕಾರಣ ಎಂದು ಹೇಳುತ್ತಲೇ, ಎನ್‌ಡಿಎ ಸರಕಾರ ತಂದ ಬದಲಾವಣೆಗಳನ್ನೂ ಪಟ್ಟಿ ಮಾಡಿದ್ದಾರೆ. ಮೋದಿ ಮಾತು ಆರಂಭಿಸಿದ್ದೇ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಶಾಯರಿ ಉಲ್ಲೇಖೀಸಿ.
Related Articles
Advertisement
ಪಕ್ಷದೊಳಗೇ ಪ್ರಜಾಪ್ರಭುತ್ವವಿಲ್ಲ: ಡಿಸೆಂಬರ್‌ನಲ್ಲಿ ನಡೆದಿದ್ದು ಚುನಾವಣೆಯೋ ಅಥವಾ ಕಾಂಗ್ರೆಸ್ ಅಧ್ಯಕ್ಷರ ಪಟ್ಟಾಭಿಷೇಕವೋ? ಒಬ್ಬ ಯುವಕ ಧ್ವನಿ ಎತ್ತಿದರು. ಆದರೆ ಅವರನ್ನು ನಿರ್ಲಕ್ಷಿಸಲಾಯಿತು ಎಂದು ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಆರಿಸಿದ ರೀತಿಯ ಬಗ್ಗೆ ಕಿಡಿಕಾರಿದರು. ಪಕ್ಷದೊಳಗೇ ಪ್ರಜಾಪ್ರಭುತ್ವವನ್ನು ಆಚರಿಸುವುದಿಲ್ಲ. ಇನ್ನು ದೇಶದ ಕಥೆಯೇನಾದೀತು ಎಂದರು. ಈ ಸಂದರ್ಭದಲ್ಲೇ ಔರಂಗಜೇಬ್ ಅವರ ಪಟ್ಟಾಭಿಷೇಕದ ಬಗ್ಗೆಯೂ ಉಲ್ಲೇಖೀಸಿದರು. ಅಲ್ಲದೆ ಕಾಂಗ್ರೆಸ್‌ನಂತೆ ಬಿಜೆಪಿ ಆಡಳಿತ ನಡೆಸಿಲ್ಲ. ಕೆಲಸ ರೀತಿಯನ್ನು ದೇಶದಲ್ಲಿ ಎನ್‌ಡಿಎ ಸರಕಾರ ಬದಲಿಸಿತು ಎಂದಿರುವ ಅವರು, ಎನ್‌ಡಿಎ ಸರಕಾರದ ಯೋಜನೆಗಳು ಹಾಗೂ ಸಾಧನೆಗಳನ್ನು ಪ್ರಸ್ತಾವಿಸಿದರು.
ಗುರಿಕಾರರು ನಾವು: ರಾಜ್ಯಸಭೆಯಲ್ಲಿನ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮೋದಿ ಸರ್ಕಾರ ನೇಮ್ ಚೇಂಜರ್ ಸರಕಾರ ಎಂಬ ಟೀಕೆಗೆ ಪ್ರತಿಕ್ರಿಯೆ ನೀಡಿದ ಮೋದಿ “ನಮ್ಮ ಸರಕಾರ ನೇಮ್ ಚೇಂಜರ್ ಅಥವಾ ಗೇಮ್ ಚೇಂಜರ್ ಅಲ್ಲ, ನಮ್ಮದೇನಿದ್ದರೂ ಏಮ್ ಚೇಸರ್ (ಗುರಿಯನ್ನು ಬೆಂಬತ್ತುವ) ಸರಕಾರ ಎಂದು ಹೇಳಿದರು.ಆದರೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷ ತಡೆದಿರುವ ತ್ರಿವಳಿ ತಲಾಖ್ ಮಸೂದೆಯ ಬಗ್ಗೆ ಕಟುವಾಗಿಯೇ ಮಾತನಾಡಿದರು. ಒಬ್ಬ ಹಿಂದೂ ಪುರುಷ ಎರಡು ವಿವಾಹವಾದರೆ ಆತನನ್ನು ಖುಷಿಯಾಗಿ ಜೈಲಿಗೆ ಕಳುಹಿಸುತ್ತೀರಿ, ಆದರೆ ಅದೇ ಮುಸ್ಲಿಂ ವ್ಯಕ್ತಿ ಎರಡು ಮದುವೆಯಾದರೆ ಆತನನ್ನು ರಕ್ಷಿಸಬೇಕು ಎಂದು ಹೇಳುತ್ತೀರಿ. ಇದು ಯಾವ ನ್ಯಾಯ ಎಂದು ಕಾಂಗ್ರೆಸ್‌ಗೆ ತಿವಿದರು.
ರೇಣುಕಾ ನಗೆಯೂ… ರಾಮಾಯಣವೂ..!: ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಜೋರಾಗಿ ನಕ್ಕಾಗ ರಾಮಾಯಣದಲ್ಲಿನ ಸಂದರ್ಭಕ್ಕೆ ಹೋಲಿಸಿದ ಸನ್ನಿವೇಶವೂ ರಾಜ್ಯಸಭೆಯಲ್ಲಿ ನಡೆಯಿತು. ಮೋದಿ ಮಾತನಾಡುತ್ತಿರುವ ವೇಳೆ ರೇಣುಕಾ ಚೌಧರಿ ದೊಡ್ಡ ಧ್ವನಿಯಲ್ಲಿ ನಕ್ಕಿದ್ದಕ್ಕೆ ಸಭಾಪತಿ ವೆಂಕಯ್ಯ ನಾಯ್ಡು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಸಭಾಪತಿಯವರೇ, ರೇಣುಕಾಜೀಯವರಿಗೆ ಏನನ್ನೂ ಹೇಳಬೇಡಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ರಾಮಾಯಣ ಸೀರಿಯಲ್ ಅನಂತರ ಇಂಥಾ ನಗು ಕೇಳುವ ಸೌಭಾಗ್ಯ ನಮಗೆ ಲಭಿಸಿದೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಮೆಚ್ಚಿ ಸ್ವಾಗತಿಸಿದ್ದು ಕಂಡುಬಂತು.
ಸರ್ದಾರ್ ಪ್ರಧಾನಿಯಾಗಬೇಕಿತ್ತುಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ನೆನಪಿಸಿಕೊಂಡರು. ಇದು ಖುಷಿ ವಿಚಾರವೇ. ಆದರೆ, ದೇಶದ ಮೊದಲ ಪ್ರಧಾನಿಯಾಗಬೇಕಾಗಿದ್ದವರು ಪಟೇಲರು. ಆಗ ಅವರೇನಾದರೂ ಪ್ರಧಾನಿಯಾಗಿದ್ದಿದ್ದರೆ ಕಾಶ್ಮೀರದ ಸಮಸ್ಯೆ ಇರುತ್ತಲೇ ಇರಲಿಲ್ಲ. ಅದು ಸಂಪೂರ್ಣವಾಗಿ ಭಾರತದ್ದೇ ಆಗಿರುತ್ತಿತ್ತು.