Advertisement

ಕಣಿವೆ ರಾಜ್ಯಕ್ಕೆ ಮೋದಿ ಅಭಯ

02:19 AM Aug 09, 2019 | sudhir |

ಹೊಸದಿಲ್ಲಿ: “ಭಾರತದ ಮುಕುಟ ಮಣಿಯಾದ ಜಮ್ಮು- ಕಾಶ್ಮೀರದ ರಕ್ಷಣೆ ಮತ್ತು ಅಭಿವೃದ್ಧಿಯೇ ನಮ್ಮ ಸರಕಾರದ ಹೊಸ ಜವಾಬ್ದಾರಿ. ಅದೇ ನಮ್ಮ ಗುರಿ. ಅಲ್ಲಿ ಶಾಂತಿ ಸ್ಥಾಪಿಸುವ ಮೂಲಕ ವಿಶ್ವಶಾಂತಿಗೆ ಪ್ರೇರಣೆ ನೀಡುವುದೇ ನಮ್ಮ ಆಶಯ. ಇದಕ್ಕೆ ಎಲ್ಲರೂ ಕೈ ಜೋಡಿಸೋಣ. ರಾಜಕೀಯ ಭಿನ್ನಮತ ಮರೆಯೋಣ. ಕಾಶ್ಮೀರದ ಪ್ರಗತಿಯೊಂದಿಗೆ ದೇಶದ ಪ್ರಗತಿಯನ್ನೂ ಸಾಧಿಸಲು ನಾವೆಲ್ಲರೂ ಕೈ ಜೋಡಿಸೋಣ’.

Advertisement

-ಇದು ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು- ಕಾಶ್ಮೀರ ಸಹಿತ ಇಡೀ ದೇಶದ ಜನತೆಗೆ ನೀಡಿದ ಕರೆ.

ಕಣಿವೆ ರಾಜ್ಯದ ವಿಶೇಷ ಸ್ಥಾನ ಮಾನಕ್ಕೆ ಅವಕಾಶ ಕೊಟ್ಟಿದ್ದ ಸಂವಿ ಧಾನದ 370ನೇ ವಿಧಿ ಹಾಗೂ ಅದರ ಅಡಿಯಲ್ಲಿನ 35ಎ ಪರಿಚ್ಛೇದ ರದ್ದು ಗೊಳಿಸಿದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಗುರುವಾರ ರಾತ್ರಿ ಮಾತ ನಾಡಿದ ಅವರು, ಸರಕಾರದ ಕ್ರಮದ ಹಿಂದಿನ ಯೋಜನೆ, ಆಲೋಚನೆ, ಗುರಿ ಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದರು. ವಿಶೇಷ ಸ್ಥಾನ ಮಾನ ಹಿಂಪಡೆದದ್ದು ಮೋದಿ ಸರಕಾರ ಮಾಡಿದ ಅತೀ ದೊಡ್ಡ ಪ್ರಮಾದ ಎಂದು ಬೊಬ್ಬಿಡುತ್ತಿದ್ದವರ ಕಣ್ಣು ತೆರೆಸುವ ಪ್ರಯತ್ನ ಮಾಡಿದರು.

ಕಾಶ್ಮೀರ ಕುರಿತಂತೆ ತಮ್ಮ ಸರಕಾರ ತೆಗೆದುಕೊಂಡ ಕ್ರಮದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟ ಅವರು, ಕಾಶ್ಮೀರಿಗರ ಆತ್ಮವಿಶ್ವಾಸವನ್ನು ಹೆಚ್ಚಿ ಸಲು ಪ್ರಯತ್ನಿಸಿದರು. “ನಿಮ್ಮ ಜತೆ ನಾವಿ ದ್ದೇವೆ. ಭಯಪಡಬೇಡಿ’ ಎಂಬ ಅಭಯ ಹಸ್ತವನ್ನು ಅಲ್ಲಿನ ಜನತೆಗೆ ನೀಡಿದರು. ಜತೆಗೆ ದೇಶದ ಇತರ ಭಾಗಗಳ ಜನತೆಗೆ, ಉದ್ಯಮಿ ಗಳಿಗೆ ಕಾಶ್ಮೀರದ ಅಭಿವೃದ್ಧಿಗೆ ಕೈ ಜೋಡಿಸುವಂತೆ ಕಳಕಳಿಯ ಮನವಿ ಮಾಡಿದರು.

370ನೇ ವಿಧಿಯಿಂದ ಕೇವಲ ಭಯೋತ್ಪಾದಕರಿಗೆ, ಪ್ರತ್ಯೇಕತಾವಾದಿಗಳಿಗೆ ಲಾಭವಾಯಿತಷ್ಟೇ. ಇದರಿಂದಾಗಿಯೇ 42 ಸಾವಿರ ಮಂದಿ ಪ್ರಾಣಕೊಟ್ಟರು. ಐತಿಹಾಸಿಕ ನಿರ್ಧಾರದ ಮೂಲಕ ಈಗ ವಿಧಿ ಮರೆಯಾಗಿದೆ. ಇನ್ನು ಮುಂದೆ ದೇಶದ ಇತರ ನಾಗರಿಕರಂತೆ ಇಲ್ಲಿನ 1.5 ಕೋಟಿ ಜನರಿಗೂ ಎಲ್ಲ ಸೌಲಭ್ಯಗಳು ಸಿಗಲಿವೆ ಎಂದು ಮೋದಿ ಅಭಯ ನೀಡಿದರು.

Advertisement

ಚಿತ್ರೋದ್ಯಮ, ಉದ್ಯಮಿಗಳಿಗೆ ಕರೆ: ಕಾಶ್ಮೀರವು ಅತ್ಯಂತ ಸುಂದರ ತಾಣಗಳ ತವರು. ಈ ಹೆಗ್ಗಳಿಕೆಯನ್ನು ಸಾರ್ಥಕ ಗೊಳಿಸಬೇಕಿದೆ. ಅದನ್ನು ವಿಶ್ವ ಪ್ರವಾಸಿ ತಾಣಗಳಲ್ಲೊಂದಾಗಿಸಬೇಕಿದೆ. ಅದಕ್ಕೆ ಬಾಲಿ ವುಡ್‌ ಸಹಿತ ಸಮಸ್ತ ಭಾರತೀಯ ಚಿತ್ರೋದ್ಯಮವೂ ಕೈ ಜೋಡಿಸಬೇಕು. ಲಡಾಖ್‌ನಲ್ಲಿ ಅನೇಕ ಔಷಧೀಯ ಗುಣಗಳ ಸಸ್ಯ ಪ್ರಬೇಧವಿದೆ. ಅವುಗಳಿಂದ ಹರ್ಬಲ್‌ ಉತ್ಪನ್ನಗಳನ್ನಾಗಿಸಿ ವಿಶ್ವ ಮಾರುಕಟ್ಟೆಯಲ್ಲಿ ಮಾರಲು ಎಲ್ಲ ಉದ್ಯಮಿಗಳು ಮುಂದೆ ಬರಬೇಕಿದೆ. ತಂತ್ರಜ್ಞಾನ ಪಂಡಿತರು, ಕಂಪೆನಿಗಳು, ಕಣಿವೆ ರಾಜ್ಯದಲ್ಲಿನ ತಂತ್ರಜ್ಞಾನ ಪ್ರತಿಭೆಗಳನ್ನು ಬಳಸಿಕೊಳ್ಳುವ ಆಲೋಚನೆ ಮಾಡುವಂತಾಗಲಿ. ಲಡಾಖ್‌ ಅನ್ನು, ಆಧ್ಯಾತ್ಮಿಕ, ಸಾಹಸ ಕ್ರೀಡೆಗಳ, ಇಕೋ ಟೂರಿಸಂಗಳ ತಾಣವಾಗಿಸಲು ಸಹಕರಿಸಬೇಕು ಎಂದರು.

ಕ್ರೀಡಾ ಪ್ರತಿಭೆಗಳಿಗೆ ಸಕಾಲ: ಕಣಿವೆ ರಾಜ್ಯವು ಅಪಾರವಾದ ಕ್ರೀಡಾ ಪ್ರತಿಭೆಗಳನ್ನು ಒಳಗೊಂಡಿದೆ. ಅವರ ಅಭಿವೃದ್ಧಿಗಾಗಿ ನಮ್ಮ ಸರಕಾರ ಶ್ರಮಿಸಲಿದೆ. ಜಮ್ಮು ಕಾಶ್ಮೀರ, ಲಡಾಖ್‌ಗಳಲ್ಲಿ ಕ್ರೀಡಾಂಗಣಗಳು ತಲೆ ಎತ್ತಲಿವೆ. ಎಲ್ಲ ಕ್ರೀಡೆಗಳ ಅಭಿವೃದ್ಧಿಗೆ ಸಂಘ-ಸಂಸ್ಥೆಗಳು ಅಸ್ತಿತ್ವಕ್ಕೆ ಬರಲಿವೆ.
ಜನರ ಹಕ್ಕು ಜನರಿಗೆ: ಪಾಕಿಸ್ಥಾನದ ಷಡ್ಯಂತ್ರಗಳನ್ನು ಕಣಿವೆ ರಾಜ್ಯದ ಕೆಲವರು ಪ್ರೋತ್ಸಾಹಿಸುತ್ತಾರೆ. ಆದರೆ ಅವರಿಗೆ ಒಂದು ಮಾತು ನೆನಪಿರಲಿ. ಭಾರತೀಯ ಸಂವಿಧಾನವನ್ನು ಗೌರವಿಸುವ ಎಲ್ಲರಿಗೂ ಉತ್ತಮ ಜೀವನ ನಡೆಸುವ ಹಕ್ಕಿದೆ. ಅದನ್ನು ಅವರಿಗೆ ನೀಡಲಾಗುತ್ತದೆ.

ವಿಪಕ್ಷಗಳಿಗೆ ಕರೆ: ಕೇಂದ್ರ ಸರಕಾರದ ನಡೆಯನ್ನು ಕೆಲವರು ವಿರೋಧಿಸುತ್ತಿದ್ದಾರೆ. ಈ ಕ್ರಮದಿಂದ ಕಣಿವೆ ರಾಜ್ಯದಲ್ಲಿ ಮುಂದೆ ಏನು ಅನಾಹುತವಾಗುತ್ತೋ ಎಂಬ ಭೀತಿ ಅವರಲ್ಲಿದೆ. ಅದನ್ನು ನಾನು ಗೌರವಿಸುತ್ತೇವೆ. ಆದರೆ ಅವರು ಭಯ ಪಡುವ ಬದಲು, ಟೀಕಿಸುವ ಬದಲು ದೇಶದ ಏಳ್ಗೆಯ ಬಗ್ಗೆ ಯೋಚಿಸಬೇಕು.

ಬಕ್ರೀದ್‌ ಶುಭಾಶ‌ಯ: ಇಡೀ ವಿಶ್ವವೇ ಸೋಮವಾರ ಬಕ್ರೀದ್‌ ಆಚರಣೆಗೆ ತಯಾರಿ ನಡೆಸಿದೆ. ಕಣಿವೆ ರಾಜ್ಯದ ಮುಸ್ಲಿಂ ಸಮುದಾಯವೂ ಅದೇ ಆಶಯದಲ್ಲಿದೆ. ಆದರೆ ಸುತ್ತಲಿನ ಬಿಗುವಿನ ವಾತಾವರಣ ಅದಕ್ಕೆ ಅಡ್ಡಿಯಾಗದು ಎಂಬ ಭರವಸೆ ನೀಡುತ್ತೇನೆ. ಎಲ್ಲರಿಗೂ ಈದ್‌ ಶುಭಾಶಯಗಳು.

ಹುತಾತ್ಮರ ಕನಸು ನನಸು: ಜಮು ಕಾಶ್ಮೀರ ಭಾರತದ ಮುಕುಟ. ಅದನ್ನು ರಕ್ಷಿಸಲು ಅನೇಕ ವೀರರು ಪ್ರಾಣತ್ಯಾಗ ಮಾಡಿದ್ದಾರೆ. ಪೂಂಚ್‌ ಜಿಲ್ಲೆಯ ಮೌಲ್ವಿ ಗುಲಾಂದೀನ್‌ ಪಾಕಿಸ್ಥಾನದ ಮಸಲತ್ತಿನಿಂದ ಸಾವಿಗೀಡಾದರು. ಅವರಿಗೆ ಅಶೋಕ ಚಕ್ರ ಪ್ರದಾನ ಮಾಡಲಾಯಿತು. ಕರ್ನಲ್‌ ಸೋನಂ ವಾಚುಂ ಹುತಾತ್ಮರಾದರು. ಅವರಿಗೆ ಮಹಾವೀರ ಚಕ್ರ ಪ್ರದಾನ ಮಾಡಲಾಯಿತು. ಇತ್ತೀಚೆಗೆ ಹುತಾತ್ಮರಾದ ಔರಂಗಜೇಬ್‌ರ ಇಬ್ಬರು ಸಹೋದರರು ಇಂದು ಸೇನೆಗೆ ಭರ್ತಿಯಾಗಿ ದೇಶ ಸೇವೆಗೆ ಸಿದ್ಧರಾಗಿದ್ದಾರೆ. ಆತಂಕಕಾರರ ಜತೆಗೆ ಹೋರಾಡುತ್ತಾ ಅಧಿಕಾರಿಗಳು, ಜನರನ್ನು ಕಳೆದುಕೊಂಡಿದ್ದೇವೆ. ಇಂಥವರ ಪಟ್ಟಿ ದೊಡ್ಡದಿದೆ. ಅವರೆಲ್ಲರ ಕನಸು ಒಂದೇ ಆಗಿತ್ತು. ಅದು ಶಾಂತಿಯುತ ಕಾಶ್ಮೀರ. ಅವರ ಕನಸುಗಳನ್ನು ನಾವು ಈಡೇರಿಸುತ್ತೇವೆ.

ಭದ್ರತಾ ಪಡೆಗಳಿಗೆ ಸೆಲ್ಯೂಟ್‌: ಕಾಶ್ಮೀರವನ್ನು ಕಣ್ಣಲ್ಲಿ ಕಣ್ಣಿಟ್ಟು ಹಗಲಿರುಳೂ ಕಾಯುತ್ತಿರುವ ಸಾವಿರಾರು ಯೋಧರಿಗೆ, ಪೊಲೀಸರಿಗೆ ನನ್ನ ನಮನ. ನಿಮ್ಮೆಲ್ಲರ ಸಹಕಾರದಿಂದಲೇ ಕಾಶ್ಮೀರ ಅಭಿವೃದ್ಧಿಯಾಗಲಿದೆ.
ಹೊಸ ಕಾಶ್ಮೀರ, ಹೊಸ ಲಡಾಖ್‌ ಕಟ್ಟೋಣ: ಕಾಶ್ಮೀರದಲ್ಲಿ ನೆಲೆಸುವ ಶಾಂತಿ, ವಿಶ್ವಶಾಂತಿಗೆ ಪ್ರೇರಣೆಯಾಗಲಿ. ಹೊಸ ಜಮ್ಮು ಕಾಶ್ಮೀರ, ಹೊಸ ಲಡಾಖ್‌ನಿಂದ ಹೊಸ ಭಾರತ ನಿರ್ಮಿಸೋಣ. ಇನ್ನು ಕಾಶ್ಮೀರ ಪ್ರಾಂತ್ಯದಲ್ಲಿ ಅರಾಜಕತೆ ಇರುವುದಿಲ್ಲ. ಅಲ್ಲಿ ಮುಕ್ತ ಚುನಾವಣೆಗಳು ನಡೆಯುತ್ತವೆ. ಹಿಂದೆಲ್ಲ ಹೇಗೆ ಅಲ್ಲಿ ಶಾಸಕರು, ಮುಖ್ಯಮಂತ್ರಿ, ಸರಕಾರ ಆಯ್ಕೆಯಾಗುತ್ತಿದ್ದವೋ ಹಾಗೆಯೇ ಮುಂದೆಯೂ ಆಯ್ಕೆಯಾಗುತ್ತದೆ. ಆದರೆ ಎಲ್ಲವೂ ಜನರ ಆಸ್ಥೆಯಂತೆ ನಡೆಯುತ್ತದೆ. ಕಾಶ್ಮೀರಿ ಗರು, ತಮ್ಮ ಆಯ್ಕೆಯ ಜನಪ್ರತಿನಿಧಿಗಳನ್ನು ನಿರ್ಭೀತರಾಗಿ ಆಯ್ಕೆ ಮಾಡಬಹುದು.

ಕಾಶ್ಮೀರಕ್ಕೆ ಸ್ವಾಯತ್ತತೆ ಸಿಗಲಿದೆ: ಇಂದು ನಾವು ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ್ದೇವೆ. ರಾಜ್ಯವು ಪ್ರಗತಿಪಥದತ್ತ ಸಾಗಿದರೆ, ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ಹಿಂಪಡೆದು ಸ್ವಾಯತ್ತ ರಾಜ್ಯವನ್ನಾಗಿಸುತ್ತೇವೆ. ಆದರೆ ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿಯೇ ಮುಂದುವರಿಯುತ್ತದೆ.

ಯುವ ಪ್ರತಿನಿಧಿಗಳ ಶ್ಲಾಘನೆ: ಇತ್ತೀಚೆಗೆ ಅಲ್ಲಿ ಪಂಚಾಯತ್‌ ಚುನಾವಣೆಗಳು ನಡೆದಾಗ ಸಾಕಷ್ಟು ಜನಪರವಾದ ಯುವ ಪ್ರತಿಭೆಗಳು ಅಲ್ಲಿ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಆಡಳಿತದ ವೇಳೆಯಲ್ಲೇ ಅವರು, ಕಾಶ್ಮೀರವನ್ನು ಬಯಲುಶೌಚ ಮುಕ್ತ ವಾಗಿಸಿದ್ದಾರೆ. ನಿಮ್ಮ ಪ್ರದೇಶದ ಅಭಿವೃದ್ಧಿ ನಿಮ್ಮ ಕೈಯ್ಯಲ್ಲಿದೆ ಎಂದರು.

ಚಿಂತನ-ಮಂಥನದ ನಿರ್ಧಾರ
370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸಿದ್ದು ಕೇವಲ ರಾಜಕೀಯ ಉದ್ದೇಶಕ್ಕಾಗಿ ಕೈಗೊಂಡ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದ ಮೋದಿ ಅವರು, ಹಲವಾರು ಚಿಂತನ-ಮಂಥನಗಳ ಮೂಲಕ ಈ ನಿರ್ಧಾರ ಕೈಗೊಂಡಿರುವುದಾಗಿ ಒತ್ತಿ ಹೇಳಿದರು. ಅದಕ್ಕೆ ಕೆಲವು ಕಾರಣಗಳನ್ನೂ ನೀಡಿದ ಅವರು, 1947ರಲ್ಲಿ ಭಾರತ ಇಬ್ಭಾಗವಾದಾಗಿನಿಂದ ಈವರೆಗೆ ಜಮ್ಮು- ಕಾಶ್ಮೀರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿರಲಿಲ್ಲ. ಅದಕ್ಕೆ 370 ಹಾಗೂ 35ಎ ವಿಧಿಗಳೇ ಕಾರಣವಾಗಿದ್ದವು. ನಮ್ಮ ದೇಶದ ಪ್ರಜಾತಂತ್ರ ವ್ಯವಸ್ಥೆ ಸದೃಢವಾಗಿದೆ. ಆದರೆ ಕಣಿವೆ ರಾಜ್ಯದಲ್ಲಿ ಹಾಗಿರಲಿಲ್ಲ. ಅಲ್ಲಿನ ಜನರಿಗೆ ಮತದಾನದ ಹಕ್ಕಿದ್ದರೂ ವಿಧಾನಸಭೆ, ಅಲ್ಲಿನ ಪಂಚಾಯತ್‌, ಮಹಾನಗರ ಪಾಲಿಕೆಗಳಿಗೆ ಅವರು ತಮ್ಮಿಷ್ಟದಂತೆ ಮತದಾನ ಮಾಡುವಂತಿರಲಿಲ್ಲ. ಉಗ್ರರ ಭೀತಿ ಇಡೀ ಕಣಿವೆಯನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next