ಉಡುಪಿ: ಗ್ರಂಥಾಲಯಗಳು ಇಂದಿನ ಅತ್ಯಾಧುನಿಕ ಸೌಕರ್ಯಗಳನ್ನು ಅಳವಡಿಸಿಕೊಂಡು ಓದುಗರ ಸ್ನೇಹಿಯಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸುವ ಚಿಂತನೆ ನಡೆದಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್ ಹೇಳಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಭಾಗಿತ್ವದಲ್ಲಿ ಜಿಲ್ಲೆಯ ಗ್ರಾ.ಪಂ. ಗ್ರಂಥಾಲಯಗಳ ಮೇಲ್ವಿಚಾರಕರಿಗಾಗಿ ರಜತಾದ್ರಿ ಜಿ.ಪಂ. ಡಾ| ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಜರಗಿದ ಡಿಜಿಟಲ್ ಗ್ರಂಥಾಲಯ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಾಗಾರದಲ್ಲಿ ಭಾಗವಹಿಸಿದ ಮೇಲ್ವಿಚಾರಕರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಗ್ರಂಥಾಲಯಗಳಿಗೆ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಕ್ಕಳ ಕಥೆಗಳು, ಸ್ಪರ್ಧಾತ್ಮಕ ಪರೀಕ್ಷಾ ಮಾಹಿತಿ ಪುಸ್ತಕಗಳು ಮೊದಲಾದ ಗ್ರಂಥಗಳನ್ನು ಹೊಂದಿರುವ ಅಗತ್ಯವಿದೆ. ಪ್ರಸ್ತುತ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಕಂಪ್ಯೂಟರ್, ಕಟ್ಟಡ ಮೊದಲಾದ ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಜಿ.ಪಂ. ಯೋಜನಾಧಿಕಾರಿ ಶ್ರೀನಿವಾಸ ರಾವ್ ಮಾತನಾಡಿ, ಸರಕಾರಿ ಶಾಲೆಗಳನ್ನು ಉಳಿಸಲು ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿರುವಂತೆಯೇ ಇಲಾಖೆ ಉಳಿಯಬೇಕಾದರೆ ಬದಲಾವಣೆ ತರುವುದು ಅಗತ್ಯವಾಗಿದೆ. ಹೀಗಾಗಿ ಗ್ರಂಥಾಲಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಿಡಿಓಗಳ ಜತೆಗೆ ಚರ್ಚಿಸಲಾಗುವುದು ಎಂದರು.
ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಣಿಪಾಲ ವಿವಿಯ ಗ್ರಂಥಾಲಯ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ಶಿವಾನಂದ ಭಟ್ ಅವರಿಂದ ಸಾರ್ವಜನಿಕ ಗ್ರಂಥಾಲಯ ಓದುಗರು ಮತ್ತು ಮಾಹಿತಿ ಆವಶ್ಯಕತೆಗಳು, ಅಸೋಸಿಯೇಟ್ ಪ್ರೊಫೆಸರ್ ಮಹಾಬಲೇಶ್ವರ ರಾವ್ ಅವರಿಂದ ಸ್ಮಾರ್ಟ್ ಲೈಬ್ರೇರಿ, ಕಾಪು ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ರಾಜಶೇಖರ ಕಂಬಾರ ಅವರು ಸಾರ್ವಜನಿಕ ಮಾಧ್ಯಮ ಪರಿಕರಗಳು ಮತ್ತು ಗ್ರಂಥಾಲಯದಲ್ಲಿ ಅದರ ಉಪಯೋಗಗಳು ವಿಷಯದ ಬಗ್ಗೆ ಹಾಗೂ ಜಗತ್ ವೆಂಚರ್ ಬೆಂಗಳೂರು ಸಂಸ್ಥೆಯ ಕೀರ್ತಿ ಅವರಿಂದ ಇ-ಗ್ರಂಥಾಲಯ ಬಗ್ಗೆ ಉಪನ್ಯಾಸ ನಡೆಯಿತು. ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ಸೋಶಿಯಲ್ ಸೈನ್ಸ್ ವಿಭಾಗದ ಅಸೋಸಿಯೇಟ್ ಡಾ| ರೋಬರ್ಟ್ ಕ್ಲೈವ್ ಜಿ. ಅವರು ಒತ್ತಡ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ., ಜಿಲ್ಲಾ ಕೇಂದ್ರ ಗ್ರಂಥಾಲಯದ ಶಕುಂತಳಾ ಕುಂದರ್ ಉಪಸ್ಥಿತರಿದ್ದರು.