Advertisement

“ಆಧುನಿಕತೆ ಸೋಗಿನಲ್ಲಿ ಮರೆಯಾಗುತ್ತಿದೆ ಕುಂದಾಪ್ರ ಭಾಷೆ’

11:48 PM Aug 01, 2019 | Sriram |

ಕುಂದಾಪುರ: ಆಧುನಿಕತೆಯ ಸೋಗಿನಲ್ಲಿ ಕುಂದಾಪ್ರ ಕನ್ನಡದ ಶಬ್ದ ಸಂಪತ್ತು ಮರೆಯಾಗುತ್ತಿದೆ. ಇಂತಹ ಶಬ್ದಗಳನ್ನೆಲ್ಲ ಸಂಗ್ರಹಿಸಿ ಪದಕೋಶ ಮಾಡಿದರೆ ಕುಂದಾಪ್ರ ಕನ್ನಡ ದಿನಾಚರಣೆ ಸಾರ್ಥಕ ವಾಗುತ್ತದೆ ಎಂದು ನ್ಯಾಯವಾದಿ, ಸಾಹಿತಿ ಎ.ಎಸ್‌.ಎನ್‌. ಹೆಬ್ಟಾರ್‌ ಹೇಳಿದರು.

Advertisement

ಅವರು ಗುರುವಾರ ಇಲ್ಲಿನ ರೋಟರಿ ಲಕ್ಷ್ಮೀ ನರಸಿಂಹ ಸಭಾಂಗಣದಲ್ಲಿ ಜೂನಿಯರ್‌ ಕಾಲೇಜು, ಕುಂದಪ್ರಭ ಸಂಸ್ಥೆ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ನಡೆದ ಕೆರಿ ತುಂಬಾ ಕುರಿ ಹೆಜ್ಜೆ ಕುಂದಾಪ್ರ ಕನ್ನಡದ ಒಗಟು, ಹಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಶಿಕ್ಷಣಾಧಿಕಾರಿ ನಾಗೇಶ್‌ ಶ್ಯಾನುಭಾಗ್‌, ಯಾವುದೇ ಶಬ್ದ ಚಲಾವಣೆಯಲ್ಲಿ ಇರಲು ಅದಕ್ಕೆ ಸಂಬಂಧಿಸಿದ ವಸ್ತು ಇರಬೇಕು. ನಾವು ಉಪಯೋಗಿಸುವ ಅನೇಕ ಶಬ್ದಗಳು ಕೃಷಿಮೂಲದಿಂದ ಬಂದಿದ್ದು ಬೇಸಾಯವೇ ಮರೆಯಾಗುತ್ತಿರುವ ಕಾರಣ ಶಬ್ದಗಳ ಬಳಕೆಯೂ ಕಡಿಮೆಯಾಗಿದೆ ಎಂದರು.

ಸಂಶೋಧಕ, ಸಾಹಿತಿ, ನಿವೃತ್ತ ಪ್ರಾಚಾರ್ಯ ಕನರಾಡಿ ವಾದಿರಾಜ ಭಟ್‌, ಜೂನಿಯರ್‌ ಕಾಲೇಜಿನ ಉಪಪ್ರಾಂಶುಪಾಲ ಮಾಧವ ಅಡಿಗ ಉಪಸ್ಥಿತರಿದ್ದರು.ಉದ್ಯಮಿ ದತ್ತಾನಂದ ಗಂಗೊಳ್ಳಿ ವಿಜೇತರಿಗೆ ಬಹುಮಾನ ವಿತರಿಸಿದರು. ನಮ್ಮೂರೆ ಚಂದ, ನಮ್ಮೂರೆ ಅಂದ ಕುಂದಾಪ್ರ ಭಾಷಿಯೆ ಕರ್ಣಾನಂದ ಎಂಬ ಫಲಕವನ್ನು ಹೆಬ್ಟಾರ್‌ ಅನಾವರಣಗೊಳಿಸಿದರು. ಪತ್ರಕರ್ತ ಯು.ಎಸ್‌. ಶೆಣೈ ಸ್ವಾಗತಿಸಿ, ಉಪನ್ಯಾಸಕ ಉದಯ್‌ ಕುಮಾರ್‌ ಶೆಟ್ಟಿ ಕಾಳಾವರ ಅತಿಥಿ ಪರಿಚಯ ಮಾಡಿದರು.

ಉಳಿವು ಅತ್ಯಗತ್ಯ
ಕುಂದಾಪ್ರ ಭಾಷೆಯಷ್ಟು ರಭಸದ, ಚುರುಕಿನ, ವೇಗದ, ಚುಟುಕಾದ, ಶಕ್ತಿಯುತ, ಸತ್ವಭರಿತ ಭಾಷೆ ಬೇರಿಲ್ಲ. ಪಠ್ಯದ ಹೊರತಾಗಿ ಈ ಭಾಷೆಯನ್ನು ಬಳಸುವ ಮೂಲಕ ಉಳಿಸಿ ಬೆಳೆಸಬೇಕಾದವರು ಇಂದಿನ ಪೀಳಿಗೆಯವರು. ಭಾಷೆಯನ್ನು ಬೆಳೆಸುವುದು ಆಡುನುಡಿ. ಕನ್ನಡದಲ್ಲಿ ಹಲವು ಪ್ರಥಮಗಳನ್ನು ಕೊಟ್ಟದ್ದು ಕುಂದಾಪುರ ಎನ್ನುವುದು ಮರೆಯಬಾರದು. ಕನ್ನಡದ ಮೊದಲ ಕಾದಂಬರಿ ಬರೆದ ಗುಲ್ವಾಡಿ ವೆಂಕಟ್ರಾಯರು, ಕನ್ನಡದ ಮೊದಲ ನವ್ಯಕವಿ ಎಂ. ಗೋಪಾಲಕೃಷ್ಣ ಅಡಿಗರು, ಶಾಲೆ ಮೆಟ್ಟಿಲು ಹತ್ತದೆ ಅಕ್ಷರ ಬಾರದೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ದಾಖಲೆ ನಿರ್ಮಿಸಿದ ಮೂಕಜ್ಜಿ ಕುಂದಾಪುರದವರು ಎ.ಎಸ್‌.ಎನ್‌. ಹೆಬ್ಟಾರ್‌ ಹೇಳಿದರು. ಎಂದರು.

Advertisement

ಸಂಸದೆ ಶೋಭಾ ಕರಂದ್ಲಾಜೆ ಶುಭಹಾರೈಕೆ
ಕುಂದಾಪುರ: ಆಟಿ ಅಮಾವಾಸ್ಯೆಯ ದಿನ ನಡೆದ‌ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಶುಭ ಕೋರಿದ್ದಾರೆ. ಕಡ್ಲ್ ಬದಿಯಿಂದ ಘಟ್ಟದ್‌ ತಪ್ಲ್ ವರಿಗ್‌, ಕುಂದಾಪ್ರ ಕನ್ನಡ ಕುಂದಾಪ್ರ ಸಂಸ್ಕೃತಿ ಏಗಳಿಕೂ ಭಾರಿ ಚೆಂದ. ಹಣ್ಬ್, ಹೊಸ್ತ್, ನಟ್ಟಿ, ಕೊಯ್ಲಯಿಂದ ಹಿಡ್ದ್ ದೈಯ್ದ್ ಮನಿ ಗೆಂಡದ್‌ ಹಬ್ಬದ್‌ವರಿಗ್‌ ಭಾರತ ದೇಶದ್‌ ಸಂಸ್ಕೃತಿ ಶ್ರೀಮಂತ್ಕಿ ಮಾಡುಕ್‌ ಈ ಬಾಷಿ ದೊಡ್‌ ಕೊಡುಗೆ ಕೊಟ್ಟಿತ್‌. ಈ ಭಾಷಿ ಉಳ್ದ್ ಬೆಳ್ದ್ ಊಂಚಿಗ್‌ ಹ್ವಾಪ್ಕೆ ಸರ್ಕಾದ್‌ರ್ ಕಡಿಯಿಂದ ಏನ್‌ ಬೇಕೋ ಅದ್ಕ್ ನಿಮ್‌ ಒಟ್ಟಿಗ್‌ ನಾ ಇದ್ದಿ, ಯಾಕಂದ್ರ್ ಇದ್‌ ಬರೀ ಭಾಷಿ ಅಲ್ಲ ಬದ್ಕ್ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.

ಕುಂದಾಪುರ ಕನ್ನಡದ ಬರಹ ಪ್ರದರ್ಶನ
ಕುಂದಾಪುರ: ಸರಕಾರಿ ಪ್ರೌಢಶಾಲೆ ಗೋಳಿಯಂಗಡಿಯಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ನಡೆಸಲಾಯಿತು.


ಕುಂದಾಪುರ ಕನ್ನಡದ ಬರಹಗಳನ್ನು ಬರೆದು ಗೋಡೆಗಳಲ್ಲಿ ಪ್ರದರ್ಶಿಸಿದರು. ಗ್ರಾಂಥಿಕ ಪದಗಳಿಗೆ ಕುಂದಾಪುರ ಕನ್ನಡ ಪದ ಬರೆಯುವ ಸ್ಪರ್ಧೆ, ಕುಂದಾಪುರ ಕನ್ನಡದ ಗಾದೆಗಳನ್ನು ಬರೆಯುವ ಸ್ಪರ್ಧೆ, ಹಾಗೂ ಕುಂದಾಪುರ ಕನ್ನಡದಲ್ಲಿ ಪದ್ಯ ಬರೆಯುವ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.ಕುಂದಾಪುರೇತರ ಶಿಕ್ಷಕರು ಹಾಗೂ ವಸತಿ ನಿಲಯದಲ್ಲಿರುವ ಅನ್ಯ ಜಿಲ್ಲೆಯ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡರು.

ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಚರಣೆ
ಕುಂದಾಪುರ: ಪ್ರಕೃತಿ ಸಹಜವಾಗಿಯೇ ಗಡಸುತನ – ಚುರುಕುತನವನ್ನು ತನ್ನೊಳಗೆ ಆಲಂಗಿಸಿ ಕೊಂಡಿರುವ ಕುಂದಾಪ್ರ ಕನ್ನಡವು ಆಡಂಬರ ರಹಿತವಾದ ಹೃದಯಾಂತರಾಳದ ಭಾಷೆ ಎಂದು ಬೈಂದೂರು ವಿಧಾನ ಸಭಾ ಕ್ಷೇತದ ಶಾಸಕ ಹಾಗೂ ಕುಂದಾಪುರ ಎಜ್ಯುಕೇಶನ್‌ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ನಡೆದ ವಿಶ್ವ ಕುಂದಾಪ್ರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜು ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್‌ ಶೆಟ್ಟಿ ಶುಭಶಂಸನೆಗೈದರು. ಮುಖ್ಯ ಅತಿಥಿ ಕುಂದಾಪುರದ ಹಿರಿಯ ನ್ಯಾಯವಾದಿ ಎ. ಎಸ್‌. ಎನ್‌ ಹೆಬ್ಟಾರ್‌, ಕುಂದಾಪುರ ಎಜುಕೇಶನ್‌ ಸೊಸೈಟಿಯ ಜತೆ ಕಾರ್ಯದರ್ಶಿ ಸುಧಾಕರ್‌ ಶೆಟ್ಟಿ ಬಾಂಡ್ಯ, ಗವರ್ನಿಂಗ್‌ ಕೌನ್ಸಿಲ್‌ ಸದಸ್ಯರಾದ ಅನಿಲ್‌ ಚಾತ್ರಾ, ವಿಶ್ವಾಸ್‌ ಸೋನ್ಸ್‌, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ದೀಕ್ಷಿತ್‌ ಶೆಟ್ಟಿ ಮತ್ತು ಸುಚಿತ್ರಾ ಉಪಸ್ಥಿತರಿದ್ದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಯೋಜಕ ಸುಕುಮಾರ್‌ ಶೆಟ್ಟಿ ಕಮಲಶಿಲೆ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕ ಯೋಗೀಶ್‌ ಶ್ಯಾನುಭೋಗ್‌ ನಿರೂಪಿಸಿದರು. ಉಪ ಪ್ರಾಂಶುಪಾಲ ಚೇತನ್‌ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ಇಂಗ್ಲೀಷ್‌ ಉಪನ್ಯಾಸಕಿ ಅಮೃತಾ ಅತಿಥಿಗಳನ್ನು ಪರಿಚಯಿಸಿ, ಕನ್ನಡ ಉಪನ್ಯಾಸಕಿ ರೇಷ್ಮಾ ಶೆಟ್ಟಿ ವಂದಿಸಿದರು.

ಈ ಸಂದರ್ಭ ಜಾನಪದ ಹಾಡುಗಾರ್ತಿ ರೋಹಿಣಿ ಶೆಡ್ತಿ ಗುಡ್ಡಮ್ಮಾಡಿ ಅವರನ್ನು ಸಮ್ಮಾನಿಸಲಾಯಿತು.

ಗಂಟಿ-ಕರು-ಬೇಸಾಯ-ಸಾಗುವಳಿಯಂತಹ ಕೃಷಿಪರ ಬದುಕಿನ ಔಚಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಾ, ಭತ್ತ ಕುಟ್ಟುವ ಹಾಡುಗಳನ್ನು ಪ್ರಸ್ತುತ ಪಡಿಸಿದರು.
ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರು ಕೂಕಣಿ ನೆಂಟರೆ ಕೂಳಿಗ್‌ ಅಕ್ಕಿಯಿಲ್ಲ., ತವರೂರ ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ…” ಮೊದಲಾದ ಭತ್ತ ಕುಟ್ಟುವ ಹಾಡುಗಳ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿದ್ಯಾರ್ಥಿ ಶರತ್‌, ಕನ್ನಡ ಉಪನ್ಯಾಸಕ ಸುಕುಮಾರ ಶೆಟ್ಟಿ ರಚಿಸಿದ “ಅಬ್ಬಿ ಬೈಗುಳಿ’ ಕುಂದಾಪುರ ಕನ್ನಡ ಪದ್ಯವನ್ನು, ಕೊಡಗನ ಕೋಳಿ ನುಂಗಿತ್ತಾ ಜಾನಪದ ಶೆ„ಲಿಯಲ್ಲಿ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next