ಕೋಲಾರ: ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಮಕ್ಕಳ ಸುಲಭ ಕಲಿಕೆಗೆ ಪೂರಕವಾಗಿ ಬದಲಾಗಲು ಶಿಕ್ಷಕರಿಗೆ ತರಬೇತಿ ಅಗತ್ಯ ಎಂದು ಡಿಡಿಪಿಐ ಹಾಗೂ ಡಯಟ್ ಪ್ರಾಂಶುಪಾಲರೂ ಆದ ಕೆ.ಎಂ.ಜಯರಾಮರೆಡ್ಡಿ ತಿಳಿಸಿದರು.
ಡಯಟ್ ವತಿಯಿಂದ ಪ್ರೌಢಶಾಲಾ ಶಿಕ್ಷಕರಿಗೆ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಾಗಾರ (ಟಾಲ್ಪ್)ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಬೋಧನೆ ಪರಿಣಾಮಕಾರಿಯಾಗಲು ಶಿಕ್ಷಕರಿಗೆ ಕಾಲಕಾಲಕ್ಕೆ ತಕ್ಕಂತೆ ಅಗತ್ಯ ತಾಂತ್ರಿಕ ತರಬೇತಿ ನೀಡಿ ಸಜ್ಜುಗೊಳಿಸುವ ಕೆಲಸ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಕಲಿಕೆಯಲ್ಲಿಬದಲಾವಣೆ ಅಗತ್ಯವಾಗಿದೆ, ಒಂದುಕಡೆ ಆನ್‌ಲೈನ್ ಶಿಕ್ಷಣದ ಕೂಗು ಇದೆ. ಜತೆಗೆ ಮಕ್ಕಳಿಗೆ ತಂತ್ರಜ್ಞಾನದೊಂದಿಗೆ ಶಿಕ್ಷಣ ನೀಡುವುದು ಅಗತ್ಯವೂ ಇದೆ ಎಂದರು.
ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯ: ಕಾರ್ಯಕ್ರಮ ಸಂಯೋಜಕರು ಹಾಗೂ ಡಯಟ್ ಹಿರಿಯ ಉಪನ್ಯಾಸಕ ರಾದ ಕೆ.ಉಮಾ ಮಾತನಾಡಿ, ಕಂಪ್ಯೂಟರ್ ಕಲಿಕೆ ಇಂದು ಪ್ರತಿಯೊಬ್ಬರಿಗೂ ಅಗತ್ಯವಿದೆ. ಮಕ್ಕಳಿಗೆ ವಿವಿಧ ತಂತ್ರಾಂಶಗಳನ್ನು ಬಳಸಿಕೊಂಡು ಅವರ ಆಶಯಕ್ಕೆತಕ್ಕಂತೆ ಕಲಿಕೆಯಲ್ಲಿ ಬದಲಾವಣೆ ತಂದು ಕೊಳ್ಳುವುದು ಅಗತ್ಯವಾಗಿದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಬಿಜು ಥಾಮಸ್, ಶಿಲ್ಪಾ, ಪುಷ್ಪಲತಾ, ಪರಪ್ಪ, ಶಿಕ್ಷಕರಾದ ವಿ.ಗೋಪಾಲಕೃಷ್ಣ, ವೆಂಕಟೇಶ್ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದರು.