ವರದಿ: ಬಸವರಾಜ ಹೂಗಾರ
ಹುಬ್ಬಳ್ಳಿ: ಬಯಲು ಜಾಗವೀಗ ಆಧುನಿಕ ಸ್ವರೂಪದ ಮಾರುಕಟ್ಟೆ ರೂಪ ಪಡೆದುಕೊಂಡಿದೆ. ಕೇವಲ ಮಾರುಕಟ್ಟೆಗಷ್ಟೇ ಸೀಮಿತವಾಗಿರದೆ ಸಭೆ-ಸಮಾರಂಭಗಳಿಗೂ ಅದು ವೇದಿಕೆಯಾಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಂಗೇರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಾರುಕಟ್ಟೆಯ ಚಿತ್ರಣವಿದು.
ಕೇಶ್ವಾಪುರ ಬೆಂಗೇರಿಯಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮಾರುಕಟ್ಟೆಯಲ್ಲಿ ವಾರದ ಒಂದು ದಿನ ಅಂದರೆ ಪ್ರತಿ ಶನಿವಾರ ಸಂತೆ ನಡೆಯಲಿದೆ. ಈ ಹಿಂದೆ ಕೇಶ್ವಾಪುರದಲ್ಲಿನ ಸುಳ್ಳ ರಸ್ತೆಯಲ್ಲಿಯೇ ಪ್ರತಿ ಶನಿವಾರ ನಡೆಯುತ್ತಿದ್ದ ಸಂತೆಯನ್ನು ಸಂಚಾರ ಅಸ್ತವ್ಯಸ್ತ ಕಾರಣಕ್ಕೆ ಹಾಗೂ ಸುಸಜ್ಜಿತ ರೀತಿಯಲ್ಲಿ ಸಂತೆ ನಡೆಸುವಂತಾಗಲು ಬೆಂಗೇರಿಯಲ್ಲಿನ ಖಾಲಿ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಜಾಗ ಇದೆ ಎಂಬುದು ಬಿಟ್ಟರೆ ಬೇರೇನೂ ಸೌಲಭ್ಯ ಅಲ್ಲಿ ಇರಲಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಯಡಿ ಸಂತೆ ಜಾಗ ಅಭಿವೃದ್ಧಿ ಪಡಿಸುವ ಕಾಮಗಾರಿ ಕೈಗೊಳ್ಳಲಾಗಿದ್ದು, ಇದೀಗ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ತಲುಪತೊಡಗಿದೆ. ಸಂತೆಗಾಗಿ ಮೀಸಲಿಟ್ಟ ಜಾಗದಲ್ಲಿ ಶನಿವಾರ ಸಂತೆ ನಡೆದರೆ, ಉಳಿದ ದಿನಗಳಲ್ಲಿಯೂ ಜಾಗದ ಸದ್ಬಳಕೆ ನಿಟ್ಟಿನಲ್ಲಿ ಬೆಳಗಿನ ವೇಳೆ ಯೋಗ-ಧ್ಯಾನ, ಸಂಜೆಯಾಗುತ್ತಿದ್ದಂತೆ ರಸ್ತೆ ಬದಿ ತಿಂಡಿ-ತಿನಿಸುಗಳ ಅಂಗಡಿ, ಚಾಟ್ ಸೆಂಟರ್, ಸಂಗೀತ ಕಾರ್ಯಕ್ರಮ, ಸಭೆ-ಸಮಾರಂಭಗಳು, ಫಲ-ಪುಷ್ಪ ಪ್ರದರ್ಶನ ಸೇರಿದಂತೆ ಬಹುಪಯೋಗಕ್ಕೆ ಪೂರಕವಾಗಿ ಸಂತೆ ಮೈದಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಹಿಂದೆ ಕೇಶ್ವಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಭೆ-ಸಮಾರಂಭ, ಸಂಗೀತ ಕಾರ್ಯಕ್ರಮ, ಯಾವುದಾದರು ಪ್ರದರ್ಶನಕ್ಕೆ ಸರಿಯಾದ ಸ್ಥಳಾವಕಾಶವಿಲ್ಲದೆ ದುರ್ಗದ ಬಯಲು, ಇಂದಿರಾ ಗಾಜಿನಮನೆ, ನೆಹರು ಮೈದಾನ, ಸವಾಯಿ ಗಂಧರ್ವ ಕಲಾಭವನ ಭಾಗಕ್ಕೆ ಆಗಮಿಸಬೇಕಾಗಿತ್ತು.
ಇನ್ನು ಮುಂದೆ ಯಾವುದೇ ಸಭೆ-ಸಮಾರಂಭಗಳಾಗಲಿ, ಸಂಗೀತ ಕಾರ್ಯಕ್ರಮಗಳಾಗಲಿ, ಪ್ರದರ್ಶನಗಳಾಗಲಿ ಕೇಶ್ವಾಪುರ ಮಧ್ಯಭಾಗ ಎಂದೇ ಕರೆಯಿಸಿಕೊಳ್ಳುವ ಬೆಂಗೇರಿ ಸಂತೆ ಮಾರುಕಟ್ಟೆಯ ಜಾಗದಲ್ಲಿ ಮಾಡಬಹುದಾಗಿದೆ.