ಹೊಸದಿಲ್ಲಿ: 80ರ ದಶಕದಲ್ಲಿ ನಡೆದ ಬೊಫೋರ್ಸ್ ಫಿರಂಗಿ ಹಗರಣದ ಬಳಿಕ ಭಾರತಕ್ಕೆ ಇದೀಗ ಅತ್ಯಾಧುನಿಕ ಲಘು ಹೊವಿಟ್ಜರ್ ಫಿರಂಗಿಗಳು ಆಗಮಿಸಿದ್ದು, ಸೇನೆಯ ಬತ್ತಳಿಕೆಗೆ ಸೇರ್ಪಡೆಯಾಗಲಿದೆ.
ಅಮೆರಿಕದ ಬಿಎಇ ಸಿಸ್ಟಮ್ಸ್ ತಯಾರಿಸಿದ ಹೊವಿಟ್ಜರ್ ಎಮ್-777 ಮಾದರಿಯ ಎರಡು ಫಿರಂಗಿಗಳು ಬಂದಿದ್ದು, ಪರೀಕ್ಷೆಗಾಗಿ ಇದೀಗ ಪೋಖರಣ್‌ನ ಪರೀಕ್ಷಾ ನೆಲೆಗೆ ಕಳಿಸಲಾಗಿದೆ.
ಶೀಘ್ರದಲ್ಲಿ ಇನ್ನೂ 25 ಹೊವಿಟ್ಜರ್ ಕ್ಷಿಪಣಿಗಳು ಸೇರ್ಪಡೆಯಾಗಲಿವೆ. ಅವುಗಳನ್ನು ಅಮೆರಿಕದಿಂದ ನೇರವಾಗಿ ತರಿಸಿಕೊಳ್ಳಲಾಗುತ್ತದೆ. ಉಳಿದ ಫಿರಂಗಿಗಳನ್ನು ಭಾರತದಲ್ಲೇ ಜೋಡಿಸಲಾಗುತ್ತದೆ. ಇದಕ್ಕಾಗಿ ಬಿಎಇ ಸಿಸ್ಟಮ್ಸ್ ಮಹೀಂದ್ರಾ ಡಿಫೆನ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. 155ಎಂ.ಎಂ.ನ ಸುಮಾರು 30 ಕಿ.ಮೀ. ದೂರಕ್ಕೆ ದಾಳಿ ನಡೆಸುವ ಸಾಮರ್ಥ್ಯವಿರುವ ಈ ಫಿರಂಗಿಗಳನ್ನು ಚೀನ ಗಡಿಯಲ್ಲಿ ನಿಯೋಜಿಸುವ ಉದ್ದೇಶವನ್ನು ಸೇನೆ ಹೊಂದಿದೆ.
ಕಳೆದ ನ.30ರಂದು ಭಾರತ ಮತ್ತು ಅಮೆರಿಕ 145 ಹೊವಿಟ್ಜರ್ ಫಿರಂಗಿ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದವು. ಸುಮಾರು 5 ಸಾವಿರ ಕೋಟಿ ರೂ. ವೆಚ್ಚದ ರಕ್ಷಣಾ ಒಪ್ಪಂದ ಇದಾಗಿದ್ದು, ಹಗುರ ಫಿರಂಗಿಗಳ ಅಭಾವ ಎದುರಿಸುತ್ತಿದ್ದ ಸೇನೆಗೆ ಪ್ರಯೋಜನಕಾರಿಯಾಗಿತ್ತು. ಈ ಫಿರಂಗಿಗಳನ್ನು ಹೆಲಿಕಾಪ್ಟರ್ ಮೂಲಕವೂ ಎತ್ತಿ ವಿವಿಧ ಸ್ಥಳಗಳಲ್ಲಿ ನಿಯೋಜಿಸಬಹುದಾಗಿದೆ. ಬೊಫೋರ್ಸ್ ಹಗರಣದ ಬಳಿಕ ಸೇನೆಯ ಫಿರಂಗಿ ಖರೀದಿ ಪ್ರಕ್ರಿಯೆಗೆ ಗ್ರಹಣ ಬಡಿದಿತ್ತು. ಅನಂತರದಲ್ಲಿ ಫಿರಂಗಿ ಖರೀದಿ ಒಪ್ಪಂದ ಮಾಡಿಕೊಂಡಿರಲಿಲ್ಲ.