Advertisement

ಗುತ್ತಿಗೆ ಹೆಸರಲ್ಲಿ ಆಧುನಿಕ ಜೀತಪದ್ಧತಿ ಇನ್ನೂ ಜೀವಂತ

03:52 PM Apr 23, 2018 | |

ದಾವಣಗೆರೆ: ಸಮಾನತೆ, ಘನತೆಯಿಂದ ಬದುಕುವ ಆಶಯದ ಸಂವಿಧಾನ ಹೊಂದಿರುವ ವಿಶ್ವದ ಅತಿ ದೊಡ್ಡ ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಗುತ್ತಿಗೆ ಪದ್ಧತಿ ಹೆಸರಲ್ಲಿ ಆಧುನಿಕ ಜೀತಪದ್ಧತಿಯನ್ನು ಜೀವಂತವಿಡಲಾಗುತ್ತಿದೆ ಎಂದು ಕರ್ನಾಟಕ ಜನಶಕ್ತಿಯ ಡಾ| ಎಚ್‌.ವಿ. ವಾಸು ದೂರಿದ್ದಾರೆ.

Advertisement

ಭಾನುವಾರ ರೋಟರಿ ಬಾಲಭವನದಲ್ಲಿ ಉದ್ಯೋಗಕ್ಕಾಗಿ ಯುವಜನರು… ಸಂಘಟನೆಯಿಂದ ಏರ್ಪಡಿಸಿದ್ದ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರಿ, ಖಾಸಗಿ ವಲಯದ ಕಚೇರಿ, ಫ್ಯಾಕ್ಟರಿಗಳಲ್ಲಿ ಕಾಯಂ ನೌಕರರು ಮಾಡುವ ಕೆಲಸವನ್ನು ಗುತ್ತಿಗೆ, ಹೊರ ಗುತ್ತಿಗೆ ಹೆಸರಲ್ಲಿ ನೇಮಕ ಮಾಡಿಕೊಂಡು ಕೆಲಸ ಮಾಡಿಸಲಾಗುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ, ಇತರೆ ಸೌಲಭ್ಯ ನೀಡದೆ, ದ್ವಿತೀಯ ದರ್ಜೆ ನೌಕರರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

1886 ರಲ್ಲಿ ಅಮೆರಿಕಾದ ಚಿಕ್ಯಾಗೋದಲ್ಲಿ ದಿನಕ್ಕೆ 8 ಗಂಟೆ ಕೆಲಸ, ಆ 8 ಗಂಟೆಗೆ 24 ಗಂಟೆಯ ವೇತನ ನೀಡಬೇಕು ಎಂದು ಒತ್ತಾಯಿಸಿ ನಡೆದ ವಿರೋಚಿತ ಹೋರಾಟದಲ್ಲಿ ಗೋಲಿಬಾರ್‌ ನಡೆದು ಅನೇಕರು ಹುತಾತ್ಮರಾದರು. ಆ ಹೋರಾಟ ಕಾರ್ಮಿಕರು ಹಲವಾರು ಸೌಲಭ್ಯ ಪಡೆಯಲು ದಿಕ್ಸೂಚಿ ಆಯಿತು. 1946ರಲ್ಲಿ ಅಂಬೇಡ್ಕರ್‌ ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಕಾಯ್ದೆ ಪ್ರಕಾರ ಒಮ್ಮೆ ಕೆಲಸಕ್ಕೆ ತೆಗೆದುಕೊಂಡು ಕಿತ್ತು ಹಾಕುವಂತಿಲ್ಲ. ಆದರೆ, ಕೇಂದ್ರ ಸರ್ಕಾರ ಕಳೆದ ಮಾ. 18 ರಂದು ಆ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಜೀವನವನ್ನೇ ಅಭದ್ರತೆಗೆ ತಳ್ಳಲಿದೆ ಎಂದು ದೂರಿದರು.

ಮಾ. 18 ರ ಆ ಕಾಯ್ದೆಯ ತಿದ್ದುಪಡಿ ಕಾನೂನು ಜಾರಿಗೊಂಡಲ್ಲಿ ನಿಗದಿತ ಅವಧಿ ಕೆಲಸ(ಫಿಕ್ಸೆಡ್‌ ಟರ್ಮ್ ಎಂಪ್ಲಾಯಿ) ಎಂದು ಪರಿಗಣಿಸಿ ಯಾರನ್ನು ಯಾವಾಗ ಬೇಕಾದರೂ ಯಾವುದೇ ಮುನ್ಸೂಚನೆ ಇಲ್ಲದೆ ಕೆಲಸದಿಂದ ತೆಗೆದು ಹಾಕಬಹುದು. ಇದು ನಿಜಕ್ಕೂ ಇಡೀ ದುಡಿಯುವ ವರ್ಗಕ್ಕೆ ಅಪಾಯಕಾರಿ ಆಗಲಿದೆ ಎಂದು ಎಚ್ಚರಿಸಿದರು.

ಕಾಯ್ದೆ ಪ್ರಕಾರ ಒಮ್ಮೆ ಕೆಲಸಕ್ಕೆ ತೆಗೆದುಕೊಂಡು ಕಿತ್ತು ಹಾಕುವಂತಿಲ್ಲ. ಆದರೂ ಖಾಸಗಿ ಕಂಪನಿಗಳು ವರ್ಷ ಪೂರ್ತಿ ಮಾಡುವಂತಹ ಕೆಲಸಕ್ಕೆ ಗುತ್ತಿಗೆ, ಹೊರ ಗುತ್ತಿಗೆ ಹೆಸರಲ್ಲಿ ಕಡಿಮೆ ವೇತನಕ್ಕೆ ಜನರನ್ನು ನೇಮಿಸಿಕೊಂಡು ಕೆಲಸ ಮಾಡಿಸಿಕೊಳ್ಳುತ್ತಿವೆ. ಜಾಗತೀಕರಣದ ಪ್ರವೇಶದ ನಂತರ ಗುತ್ತಿಗೆ ಪದ್ಧತಿ ಹೆಸರಲ್ಲಿ ಜೀತಪದ್ಧತಿ ಹೆಚ್ಚಾಗುತ್ತಿದೆ ಎಂದು ದೂರಿದರು.

Advertisement

ಗುತ್ತಿಗೆ ಪದ್ಧತಿ ಜೀವಂತವಾಗಿರಲು ಪ್ರಮುಖ ಕಾರಣ ನಿರುದ್ಯೋಗ ಸಮಸ್ಯೆ. ಕಡಿಮೆ ವೇತನ, ಯಾವುದೇ ಸೌಲಭ್ಯ ಇಲ್ಲದೆ ಕೆಲಸ ಮಾಡುತ್ತಿರುವವರು ಯಾವ ಸಂದರ್ಭದಲ್ಲೇ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಆಗುತ್ತಿರುವ ಅನ್ಯಾಯ, ತಮ್ಮ ಹಕ್ಕಿನ ಬಗ್ಗೆ ಧ್ವನಿ ಎತ್ತುವ ಸ್ಥಿತಿಯಲ್ಲೇ ಇಲ್ಲ. 2016ರಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ… ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ 3ನೇ ಬಾರಿ ಆದೇಶ ನೀಡಿದೆ. ಆದರೂ, ಅದು ಜಾರಿಗೆ ಬಂದಿಲ್ಲ. ನ್ಯಾಯಾಂಗ, ವಿಧಾನ ಸಭೆ, ಲೋಕಸಭೆಯೂ ಗುತ್ತಿಗೆ ಪದ್ಧತಿ ಕೆಲಸಗಾರರಿಂದ ಹೊರತಾಗಿಲ್ಲ. ಗುತ್ತಿಗೆ ಪದ್ಧತಿ ಜೀವಂತವಾಗಿರಲು ನಮ್ಮ ಜನಪ್ರತಿನಿಧಿಗಳು ಪ್ರಮುಖ ಕಾರಣ ಎಂದು ತಿಳಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ ಪದ್ಧತಿ ನೌಕರರಿಗೆ ಸೇವಾ ಭದ್ರತೆ, ಉದ್ಯೋಗ ಆಯೋಗ… ಇತರೆ ಬೇಡಿಕೆ ಈಡೇರಿಸುವಂತಹ ಪಕ್ಷಕ್ಕೆ ಮಾತ್ರ ನಮ್ಮ ಮತ ಎಂಬ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಮನೆಗಳ ಮುಂದೆ ಸ್ಟಿಕರ್‌ ಹಚ್ಚುವ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.

ಉದ್ಯೋಗಕ್ಕಾಗಿ ಯುವಜನರು… ಸಂಘಟನೆಯ ಮಲ್ಲಿಕಾರ್ಜುನ್‌ ಅಧ್ಯಕ್ಷತೆ ವಹಿಸಿದ್ದರು. ಎಸ್‌. ಜಗನ್ನಾಥ್‌, ಗಂಗಾಧರಸ್ವಾಮಿ, ಸತೀಶ್‌ ಅರವಿಂದ್‌, ಎನ್‌.ಸಿ. ಹಾಲಸ್ವಾಮಿ, ಚಂದ್ರಪ್ಪ, ಶ್ವೇತಾ, ಮೋಹನ್‌, ರೋಷನ್‌ ಇತರರು ಇದ್ದರು. ಜಗದೀಶ್‌ ನಿರೂಪಿಸಿದರು. ಹನುಮನಗೌಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next