Advertisement
ಇಂತಹದೊಂದು ನುಣುಚಿಕೊಳ್ಳುವ ಧೋರಣೆ ಪ್ರಾರಂಭದಲ್ಲಿ ಆಕರ್ಷಕವಾಗಿ ಕಂಡರೂ ಕೊನೆಗೆ ವಿಫಲವಾಗಿ, ಅಂತಹ ನೌಕರರನ್ನು ಖಾಯಂಗೊಳಿಸುವ ಅನಿವಾರ್ಯತೆಗೆ ತಲುಪಿಸುತ್ತದೆ ಎಂದು ಗೊತ್ತಿದ್ದರೂ ಸರಕಾರ ಅದೇ ತಪ್ಪನ್ನು ಪದೇ ಪದೇ ಮಾಡುತ್ತಿದೆ. ಯೋಜನೆಯ ಹೆಸರು ಮಾತ್ರ ಬೇರೆ, ಬೇರೆ. ಖಾಯಂ ನೆಲೆಯಲ್ಲಿ ಉದ್ಯೋಗಿಗಳ ನೇಮಕಾತಿ ಮಾಡಿದರೆ ಅವರಿಗೆ ಕಾಲಕಾಲಕ್ಕೆ ವೇತನ ಭಡ್ತಿ, ಭತ್ಯೆ, ರಜೆ ಹಾಗೂ ಪಿಂಚಣಿ ಇನ್ನೂ ಏನೇನೋ ಸೌಲಭ್ಯಗಳನ್ನು ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಅಥವಾ ಕೆಲವೊಮ್ಮೆ ರಾಜಕೀಯ ಉದ್ದೇಶದಿಂದ ನಿರುದ್ಯೋಗಿಗಳನ್ನು ಓಲೈಸಲು ಸರ್ಕಾರ ಇಂತಹದೊಂದು ಪರ್ಯಾಯ ವ್ಯವಸ್ಥೆಯನ್ನು ರೂಪಿಸುತ್ತದೆ. ಮೇಲ್ನೋಟಕ್ಕೆ ಇದು ಸರ್ಕಾರಕ್ಕೆ ಕಡಿಮೆ ವೆಚ್ಚದ ಯೋಜನೆ ಎಂದು ಕಂಡರೂ ವಾಸ್ತವ ಸ್ಥಿತಿ ಬೇರೆಯೇ ಇದೆ. ಈ ರೀತಿಯ ವ್ಯವಸ್ಥೆಯಲ್ಲಿ ಹೊರ ಜಗತ್ತಿಗೆ ಕಾಣಿಸುವುದು ಬರೀ ಮುಖವಾಡ. ವ್ಯವಸ್ಥೆಯ ಆಳಕ್ಕಿಳಿದಾಗ ಗೋಚರಿಸುವ ವಾಸ್ತವ ಮುಖವೇ ಬೇರೆ. ಈ ವ್ಯವಸ್ಥೆಯನ್ನು ಉದ್ಯೋಗದಾತನ ದೃಷ್ಟಿಕೋನದಿಂದ ನೋಡುವುದು ಒಂದು ಆಯಾಮವಾದರೆ ಅದೇ ವ್ಯವಸ್ಥೆಯನ್ನು ಉದ್ಯೋಗಿಯ ದೃಷ್ಟಿಯಿಂದ ನೋಡುವಾಗ ಕಾಣುವ ಚಿತ್ರಣವೇ ಬೇರೆ.
Related Articles
Advertisement
ಇದಕ್ಕಿಂತಲೂ ಶೋಚನೀಯ ಪ್ರಕರಣವೊಂದಿದೆ. ಆರೋಗ್ಯ ಇಲಾಖೆಯಲ್ಲಿರುವ ನೈರ್ಮಲ್ಯ ಕೆಲಸದ ನೌಕರರು, ಅವರು ಖಾಯಂ ಉದ್ಯೋಗಿಗಳಾದರೂ ಪದೇಪದೇ ಗೈರು ಹಾಜರಾಗುವ ಚಾಳಿ ಇದ್ದುದರಿಂದ ಹಾಗೆ ಪೂರ್ವ ಮಾಹಿತಿ ನೀಡದೆ ಗೈರು ಹಾಜರಾಗುವವರ ಬದಲಿಗೆ 29 ದಿನಗಳ ಅವಧಿಗೆ ನೇಮಕಾತಿ ಮಾಡಿ, ಗೈರು ಹಾಜರಾಗುವವರ ವೇತನದಿಂದ ಒಂದಿಷ್ಟು ಕಡಿತಗೊಳಿಸಿ ಪಾವತಿಸುವ ಪದ್ಧತಿ ಇತ್ತು. ನಿರುದ್ಯೋಗ ಸಮಸ್ಯೆ ಎಷ್ಟು ಘೋರವಾಗಿತ್ತೆಂದರೆ, ಅಂತಹ ನೇಮಕಾತಿಗೂ ಸಾಲುಗಟ್ಟಿ ನಿಲ್ಲುವವರಿದ್ದರು.
ಈ 29 ದಿನಗಳ ನೇಮಕಾತಿಗೆ ಆಗ ಹೆಚ್ಚೆಂದರೆ 100-150 ರೂಪಾಯಿ ಸಿಗುತ್ತಿತ್ತು. ಸದ್ರಿ ಕೆಲಸಕ್ಕೆ ಸೇರುವವರು ಅತಿ ಅಸಹ್ಯ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆ ಮಾಡುವುದು, ಶವ ಸಾಗಾಟ, ಶವವನ್ನು ಪರೀಕ್ಷೆಗೆ ಸೀಳುವುದು ಹೀಗೆ ಯೋಚಿಸಲೂ ಅಸಹ್ಯವೆನಿಸುವ ಕೆಲಸಗಳನ್ನು ಮಾಡಬೇಕಾಗುತಿತ್ತು. ಆದರೂ ಹಸಿವು ಎಲ್ಲವನ್ನೂ ಸಹಿಸುವ ಕಠಿಣ ಮನಸ್ಥಿತಿಗೆ ಅವರನ್ನು ಸಜ್ಜುಗೊಳಿಸಿತ್ತು.
ಈ ಸಾಲಿಗೆ ಇತ್ತೀಚಿನ ಸೇರ್ಪಡೆ ಶಿಕ್ಷಣ ಇಲಾಖೆಯ ಗೌರವ ಉಪನ್ಯಾಸಕ ಹುದ್ದೆ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ, ತರಗತಿಗಳು ನಡೆಯುವ ದಿನಗಳಲ್ಲಿ ಮಾತ್ರ ವೇತನ, ರಜಾ ಅವಧಿಯಲ್ಲಿ ಏನೂ ಇಲ್ಲ. ಖಾಯಂ ನೆಲೆಯಲ್ಲಿ ಶಿಕ್ಷಕರ ನೇಮಕಾತಿ ಮಾಡುವ ಬದ್ದತೆಯನ್ನು ಮರೆತ ಸರಕಾರ ಮತ್ತೂ ಚೌಕಾಶಿ ಮಾಡಿ ಕೆಲಸಕ್ಕೆ ಮಾತ್ರ ಕೂಲಿ ಪಾವತಿಸುವ ತನ್ಮೂಲಕ ಭಾವೀ ಪ್ರಜೆಗಳನ್ನು ರೂಪಿಸುವ ಪವಿತ್ರ ಕಾಯಕಕ್ಕೂ ದಿನಗೂಲಿ (ಅದು ಕೂಡ ಗಂಟೆ ಲೆಕ್ಕದಲ್ಲಿ) ಪಾವತಿಸುವ ಮೂಲಕ ಗುಲಾಮಗಿರಿಗೆ ತಳ್ಳಿದೆ. ಇದಕ್ಕೆ ಗೌರವಧನ ಎಂಬ ಆಕರ್ಷಕ ಹೆಸರು ಬೇರೆ. ಈ ಪಾವತಿಯನ್ನಾದರೂ ಕ್ಲಪ್ತ ಕಾಲಕ್ಕೆ ಮಾಡುತ್ತಾರೆಯೇ, ಅದೂ ಇಲ್ಲ. ಈ ವರ್ಷದ ಗೌರವ ಧನ ಮುಂದಿನ ವರ್ಷ ಸಿಕ್ಕಿದರೆ ಶಿಕ್ಷಕರ ಪುಣ್ಯ.
ಈ ಗುತ್ತಿಗೆ ಕಾರ್ಮಿಕ ಪದ್ಧತಿಯ ಇತ್ತೀಚಿನ ಅವತಾರ ಹೊರಗುತ್ತಿಗೆ. ಈ ಪದ್ಧತಿಯಲ್ಲಿ ಇರುವಷ್ಟು ಗೊಂದಲ ಹಿಂದಿನ ಯಾವುದೇ ವ್ಯವಸ್ಥೆಯಲ್ಲಿ ಇರಲಿಲ್ಲ. ಹಿಂದಿನ ಎಲ್ಲಾ ಅವತಾರಗಳಿಗಿಂತಲೂ ಇದರ ಆಳ-ವಿಸ್ತಾರ ಅಗಾಧವಿದೆ. ಈ ವಿನೂತನ ವ್ಯವಸ್ಥೆಯ ರೂಪುರೇಷೆ, ಅದನ್ನು ಕಾರ್ಯಗತಗೊಳಿಸುವ ವಿಧಾನ, ಈ ವಿಧಾನದಲ್ಲಿ ಅಡಕವಾಗಿರುವ ಕೆಲವು ಒಳಸುಳಿಗಳು ಊಹೆಗೂ ನಿಲುಕದು.
ಈ ಹೊರಗುತ್ತಿಗೆ ವ್ಯವಸ್ಥೆ ಕಾರ್ಯಾಚರಿಸುವ ವಿಧಾನ ಹೀಗಿದೆ. ಯಾವುದೇ ಒಂದು ಇಲಾಖೆಯ ವಿವಿಧ ಕಚೇರಿಗಳಿಗೆ ಅಥವಾ ಒಂದು ಕಚೇರಿಗೆ ಅಥವಾ ಒಂದು ನಿರ್ದಿಷ್ಟ ವರ್ಗದ ಹುದ್ದೆಗಳಿಗೆ, ಅಂದರೆ, ಶಿಕ್ಷಣ, ಆರೋಗ್ಯ, ಕಂದಾಯ ಹೀಗೆ ಯಾವುದಾದರೂ ಇಲಾಖೆಯ ವಿವಿಧ ಶಾಖಾ ಕಚೇರಿಗಳಿಗೆ ಒಟ್ಟಾಗಿ ಅಥವಾ ಒಂದು ಆಸ್ಪತ್ರೆಗೆ, ಶಾಲೆ, ಕಾಲೇಜಿಗೆ, ಒಂದಿಷ್ಟು ವಾಹನ ಚಾಲಕರ, ಭದ್ರತಾ ಸೇವೆ, ಶುಶ್ರೂಷಾ ಸಿಬ್ಬಂದಿ, ಕಚೇರಿ ಕೆಲಸದ, ಕಂಪ್ಯೂಟರ್ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ ಇತ್ಯಾದಿ ಕೆಲಸಕ್ಕೆ ಬೇಕಾದ ಸಿಬ್ಬಂದಿ ಸೇವೆಯನ್ನು ನಿರ್ದಿಷ್ಟ ಅವಧಿಗೆ ಒದಗಿಸಲು ಟೆಂಡರ್ ಕರೆಯಲಾಗುತ್ತದೆ. ಇಂತಹ ಟೆಂಡರಿನಲ್ಲಿ ಭಾಗವಹಿಸುವವರು ಕೆಲವು ನಿರ್ದಿಷ್ಟ ಅರ್ಹತೆ ಹೊಂದಿರ ಬೇಕಾಗುತ್ತದೆ. ಅವೆಂದರೆ ಕಾರ್ಮಿಕ ಇಲಾಖೆಯ ನಿಬಂಧನೆಗಳನುಸಾರ ನೋಂದಣಿ ಮಾಡಿ ಪರವಾನಗಿ ಪಡೆಯುವುದು, ಕಾರ್ಮಿಕರ ಭವಿಷ್ಯ ನಿಧಿ ಮತ್ತಿತರ ಇಲಾಖೆಗಳಲ್ಲಿ ನೋಂದಣಿ ಮಾಡುವುದು ಇತ್ಯಾದಿ. ಆದರೆ ಯಾವುದೇ ಟೆಂಡರ್ ಶರ್ತದಲ್ಲಿ, ಸದ್ರಿ ಸಂಸ್ಥೆಯವರು ಒದಗಿಸುವ ಸಿಬ್ಬಂದಿಯವರ ಅರ್ಹತೆ, ಅಂತಹ ವ್ಯಕ್ತಿಗಳ ಪೂರ್ವಾಪರ ಚರಿತ್ರೆ, ಅವರುಗಳನ್ನು ಆಯ್ಕೆ ಮಾಡಿದ ವಿಧಾನ ಇವುಗಳ ಬಗ್ಗೆ ವಿವರ ಕೇಳಿರುವುದಿಲ್ಲ. ಆದ್ದರಿಂದ ಭದ್ರತಾ ಸೇವೆ ಒದಗಿಸಲು ಟೆಂಡರ್ ಕರೆದರೆ, ಕುರಿಗಳನ್ನು ಕಾಯಲು ತೋಳಗಳ ಸೇವೆ ಒದಗಿಸಿದ ನಿದರ್ಶನವಿದೆ. ಎಲ್ಲೂ ಸಲ್ಲದ ವಾಹನ ಚಾಲಕರು ಇಲ್ಲಿ ಸಲ್ಲಲ್ಪಡುತ್ತಾರೆ!
ಆಡು ಮುಟ್ಟದ ಸೊಪ್ಪಿಲ್ಲ, ರಾಜಕಾರಣಿಗಳು ಕೈಯಾಡಿಸದ ಕ್ಷೇತ್ರವಿಲ್ಲ ಎನ್ನುವ ಹೊಸ ಗಾದೆಯೊಂದನ್ನು ಸೃಷ್ಟಿಸಿ ಇಲ್ಲಿಗೆ ಅನ್ವಯಿಸಬಹುದು. ಅದು ಹೇಗೆಂದರೆ, ಹೊರಗುತ್ತಿಗೆ ಸೇವೆ ಸಲ್ಲಿಸಲು ಟೆಂಡರು ಸಲ್ಲಿಸಿದವರ ನಡುವೆ ರಾಜಕೀಯ ಪ್ರವೇಶವಾಗುತ್ತದೆ. ರಾಜಕೀಯವಾಗಿ ಪ್ರಬಲವಾಗಿರುವವರಿಗೆ ಆಪ್ತರಾಗಿರುವವರಿಗೆ ಟೆಂಡರು ಲಭ್ಯವಾಗುವುದಕ್ಕೆ ಬೇಕಾಗುವ ಕಸರತ್ತು ನಡೆಯುತ್ತದೆ. ಸಾಮ-ದಾನ-ಬೇಧ-ಅನಿವಾರ್ಯವಾದರೆ ದಂಡ ಪ್ರಯೋಗವೂ ಆಗಿ ಟೆಂಡರ್ ಮಂಜೂರಾಗುತ್ತದೆ. ಇತರ ಟೆಂಡರುಗಳಂತೆ ಇಲ್ಲಿ ರಾಜಕೀಯ ಧುರೀಣರಿಗೆ ಕಪ್ಪ-ಕಾಣಿಕೆ ಸಲ್ಲುವುದರ ಜತೆಗೆ ಅವರು ಸೂಚಿಸುವವರನ್ನೇ ಗುತ್ತಿಗೆ ಪಡೆದ ಸಂಸ್ಥೆಯವರು ನೇಮಕಾತಿಗಾಗಿ ಆಯ್ಕೆ ಮಾಡಬೇಕಾಗುತ್ತದೆ. ಮೇಲ್ನೋಟಕ್ಕೆ ಇವರಿಗೂ ಸರಕಾರದ ಇಲಾಖೆಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ಒಮ್ಮೆ ಇಲಾಖೆಯ ಒಳಗೆ ಸೇರಿಕೊಂಡರೋ ಅಲ್ಲಿಂದ ಇವರ ಆಟ ಶುರು. ಈ ಆಟದ ರಿಂಗ್ ಮಾಸ್ಟರ್ ಇವರನ್ನು ಆಯ್ಕೆ ಮಾಡಿದ ರಾಜಕೀಯ ಶಕ್ತಿ.
ಇಂತಹ ನೇಮಕಾತಿ ಒಂದರ್ಥದಲ್ಲಿ ಜೀತ ಪದ್ಧತಿಗಿಂತ ಭಿನ್ನವೇನಲ್ಲ. ನಿವೃತ್ತಿ ವೇತನ, ಸೇವಾ ಭದ್ರತೆ ಮಾತ್ರವಲ್ಲ ವೈದ್ಯಕೀಯ ರಜೆ ಅಥವಾ ಬಹುಮುಖ್ಯವಾಗಿ ಹೆರಿಗೆ ರಜೆ ಕೂಡಾ ಇರುವುದಿಲ್ಲ. ಅನಿವಾರ್ಯ ಕಾರಣಕ್ಕೆ ಗೈರು ಹಾಜರಾದರೆ ನೇರವಾಗಿ ಕೆಲಸದಿಂದ ವಜಾ ಮಾಡಲಾಗುತ್ತದೆ. ಕಾನೂನು ಹೋರಾಟ ಬರೀ ಅರಣ್ಯ ರೋದನ ಅಷ್ಟೇ.
ಇಂತಹ ಗುತ್ತಿಗೆ ನೇಮಕಾತಿ ಅಲ್ಪಕಾಲೀನ ವ್ಯವಸ್ಥೆಯಾಗಿದ್ದರೂ ಸರಕಾರಿ ಉದ್ಯೋಗವಿದೆ ಎಂದು ಸುಳ್ಳು ಹೇಳಿ ಮದುವೆ ಆದವರೂ ಇದ್ದಾರೆ, ಸಾಲ ಪಡೆದವರೂ ಇದ್ದಾರೆ. ಈ ವ್ಯವಸ್ಥೆಯಲ್ಲಿ ವೇತನ, ಉದ್ಯೋಗ ಅನಿಶ್ಚಿತತೆ ಸ್ವಾಭಾವಿಕ. ಆದರೂ ಆತ್ಮಹತ್ಯೆಯಂತಹ ಹತಾಶೆಯ ನಿರ್ಧಾರ ಮಾಡಿದ ಪ್ರಕರಣಗಳು ನಡೆದದ್ದೂ ಇದೆ.
ಈ ನಡುವೆ ಕಾರ್ಮಿಕರ ಹಿತಾಸಕ್ತಿಯ ದೃಷ್ಟಿಯಿಂದ ಕರ್ನಾಟಕ ಸರ್ಕಾರ 1996ನೇ ಇಸವಿಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಕಲ್ಯಾಣ ಕಾಯಿದೆ ಜಾರಿಗೆ ತಂದಿದೆ. ಸರ್ಕಾರಿ ಕಾಮಗಾರಿ ಗುತ್ತಿಗೆಗಳಲ್ಲಿ ಒಟ್ಟು ಮೊತ್ತದ ಶೇ.2ರಷ್ಟನ್ನು ಈ ನಿಧಿಗೆ ವಂತಿಗೆ ನೀಡುವ ಉದ್ದೇಶಕ್ಕಾಗಿ ಹೆಚ್ಚುವರಿಯಾಗಿ ಪಡೆಯಲು ಅವಕಾಶವಿದೆ. ಗುತ್ತಿಗೆದಾರರು ಸರ್ಕಾರದ ಅಥವಾ ಯಾವುದೇ ಕಾಮಗಾರಿಗಳ ಬಾಬ್ತು ಇಷ್ಟು ಮೊತ್ತವನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಪಾವತಿಸ ಬೇಕಾಗುತ್ತದೆ. ಈ ನಿಧಿಯಿಂದ ಕಾರ್ಮಿಕರಿಗೆ ಸೌಲಭ್ಯ ಸಿಗಬೇಕಾದರೆ ಕೆಲವೊಂದು ನಿಯಮಗಳನ್ವಯ ಅಂತಹ ಕಾರ್ಮಿಕರ ಹೆಸರನ್ನು ನೋಂದಣಿ ಮಾಡಬೇಕಾಗುತ್ತದೆ. ಆದರೆ ಇಂತಹ ನೋಂದಣಿ ಮತ್ತಿತರ ಪ್ರಕ್ರಿಯೆ ನೋಂದಾಯಿತ ಗುತ್ತಿಗೆದಾರರ ಅಡಿಯಲ್ಲಿ ನಿರಂತರ ಕಾರ್ಯ ನಿರ್ವಹಿಸುವವರಿಗೆ ಸಾಧ್ಯ. ಒಂದೊಂದು ದಿನ ಒಬ್ಬೊಬ್ಬರಡಿ ಕೆಲಸ ಮಾಡುವವರಿಗೆ? ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ, ಅಸಂಘಟಿತ ಕಾರ್ಮಿಕರಿಗೆ ಇದು ಗಗನ ಕುಸುಮವೇ ಸರಿ. ಈ ಕಾಯಿದೆಯ ಉದ್ದೇಶ ಸಫಲವಾಗಬೇಕಾದರೆ ಸಂಬಂಧಿಸಿದ ಎಲ್ಲರಿಗೂ ಸೂಕ್ತ ತಿಳಿವಳಿಕೆ ನೀಡಿ ನೋಂದಣಿ ಮಾಡಿಸುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡಬೇಕು, ಸ್ವಯಂ ಸೇವಾ ಸಂಸ್ದೆಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದಲ್ಲಿ ಉಪಯೋಗವಾಗಬಹುದೇನೋ.