Advertisement

ವಿಜ್ಞಾನ ಕೇಂದ್ರಕ್ಕೆ ಆಧುನಿಕ ನಕ್ಷತ್ರಲೋಕ

02:33 PM May 16, 2019 | Team Udayavani |

ಬಾಗಲಕೋಟೆ: ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ, ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಹಾಗೂ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಬಾಗಲಕೋಟೆ ತೋಟಗಾರಿಕೆ ವಿವಿಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶೀಘ್ರವೇ ಆಧುನಿಕ ನಕ್ಷತ್ರಲೋಕ ಹಾಗೂ ಇತರೆ ಒಳಾಂಗಣ ವಿಜ್ಞಾನ ಉಪಕರಣ ತರಿಸಲಾಗುವುದು ಎಂದು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ|ಕೆ.ಎಂ. ಇಂದಿರೇಶ ಹೇಳಿದರು.

Advertisement

ತೋಟಗಾರಿಕೆ ವಿವಿಯಲ್ಲಿ ಜರುಗಿದ ವಿಜ್ಞಾನ ಕೇಂದ್ರದ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಆವರು,ಈಗಾಗಲೇ 90 ಲಕ್ಷ ರೂ.ವೆಚ್ಚದಲ್ಲಿ ಆಧುನಿಕ ನಕ್ಷತ್ರಲೋಕ ಹಾಗೂ ಇತರೆ ವಿಜ್ಞಾನ ವಸ್ತು ಖರೀದಿಸಲು ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿಯಿಂದ ಅನುಮತಿ ಪಡೆದಿದ್ದು, ಶೀಘ್ರವೇ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಲ್ಲಿ ವಿಜ್ಞಾನ ತಂತ್ರಜ್ಞಾನದ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ| ಅಶೋಕ ಆಲೂರ ಮಾತನಾಡಿ, ಈಗಾಗಲೇ 4 ಕೋಟಿ ವೆಚ್ಚದಲ್ಲಿ ಬೃಹತ್‌ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಉಪಕರಣಗಳನ್ನು ಸಹ ಖರೀದಿಸಲಿದ್ದೆವೆ. ವಿಜ್ಞಾನ ಕೇಂದ್ರದ ಸುತ್ತಲೂ ಉತ್ತಮ ಗಾರ್ಡನ್‌ ನಿರ್ಮಾಣಕ್ಕೆ ರೂ.25 ಲಕ್ಷ ಹಾಗೂ ಪ್ರಸಕ್ತ ಸಾಲಿನ ವಿವಿಧ ಕಾರ್ಯಕ್ರಮಗಳಿಗೆ, ಸಿಬ್ಬಂದಿಗಳ ಖರ್ಚು ವೆಚ್ಚಕ್ಕೆ ರೂ.30 ಲಕ್ಷ ವ್ಯಯಿಸಲಾಗುವುದು. ಕಟ್ಟಡದಲ್ಲಿ ವಿವಿಧ ಗ್ಯಾಲರಿಗಳನ್ನು ಪ್ರದರ್ಶನ ಮಳಿಗೆ, ವಿವಿಧ ವಿಷಯಗಳ ಪ್ರಾತ್ಯಕ್ಷಿಕೆ ನಿರ್ಮಿಸಲಾಗಿದೆ ಎಂದರು.

ಭಾರತೀಯ ವಿಜ್ಞಾನಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು, ಜೀವ ವೈವಿಧ್ಯತೆ, ಪರಿಸರ, ಆಹಾರ, ವಿಜ್ಞಾನದಿನ, ಮಹಿಳಾ ದಿನ, ಜಲದಿನಗಳನ್ನು ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗುವುದು. ಕೀಟ ಪ್ರಪಂಚ, ವಿಜ್ಞಾನ ಜಾತ್ರೆ, ಪ್ರದರ್ಶನಗಳನ್ನು, ಸ್ಪರ್ಧೆಗಳನ್ನು ಹಾಗೂ ಮಾಸಿಕ ಪತ್ರಿಕೆಗಳ ಬಗ್ಗೆ ಯೋಜಿಸಲಾಗಿದೆ.

ಬಿವಿವಿ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಡಾ|ಆರ್‌.ಎನ್‌. ಹೆರಕಲ್, ಸಲಹಾ ಸಮಿತಿ ಸದಸ್ಯ ಪ್ರೊ| ಸಿ.ಜಿ. ಹವಾಲ್ದಾರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next