Advertisement

ಬಾಳೆ ಬೆಳೆ ಆಧುನಿಕ ಬೇಸಾಯ ಕ್ರಮ

11:42 PM Aug 10, 2019 | mahesh |

ಪೌಷ್ಟಿಕಾಂಶಭರಿತ ಬಾಳೆ ಸಾವಿರಾರು ವರ್ಷಗಳಿಂದಲೂ ಭಾರತದ ಕೃಷಿ ವ್ಯವಸಾಯದೊಂದಿಗೆ ಬೆಸೆದುಕೊಂಡುಬಂದಿದೆ. ಆದರೆ ಯಾವಾಗ ಇದಕ್ಕೆ ಮಾರುಕಟ್ಟೆ ಸಿಗುತ್ತದೆ, ಯಾವಾಗ ಇರುವುದಿಲ್ಲ ಎಂಬುದನ್ನು ಪರಿಗಣಿಸಿದರೆ ಗಂಭೀರ ಸಮಸ್ಯೆ ಎದುರಾಗುವುದಿಲ್ಲ. ಇಳುವರಿ ನೀಡಲು 13 ತಿಂಗಳು ತೆಗೆದು ಕೊಳ್ಳುವ ಬಾಳೆಯನ್ನು ವರ್ಷವಿಡೀ ಬೆಳೆಯ ಬಹುದು ಎಂಬುದೇ ಅದರ ಹೆಗ್ಗಳಿಕೆ. ಒಂಚೂರು ಲೆಕ್ಕಾಚಾರ ದೊಂದಿಗೆ ಮಾಡುವ ಬಾಳೆಕೃಷಿ ಖಂಡಿತ ಆದಾಯ ತರಬಲ್ಲದು.

Advertisement

ಭಾರತದಲ್ಲಿ ಮಾವಿನ ಅನಂತರ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಹಣ್ಣಿನ ಬೆಳೆ ಬಾಳೆ. ಉತ್ಪಾದನೆ ಮತ್ತು ಇಳುವರಿಯಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ. ಕರ್ನಾಟಕದಲ್ಲಿ ಇದನ್ನು ವಾಣಿಜ್ಯ ಬೆಳೆಯಾಗಿ ಸುಮಾರು 98,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.
ಭಾರತದಲ್ಲಿ 50ಕ್ಕೂ ಹೆಚ್ಚು ತಳಿಗಳನ್ನು ಬೆಳೆಯಲಾಗುತ್ತಿದ್ದು ಕೆಳಗೆ ತಿಳಿಸಿದ ಪ್ರಮುಖ ತಳಿಗಳು ಕರ್ನಾಟಕದಲ್ಲಿ ಜನಪ್ರಿಯವಾಗಿವೆ.

ಗಿಡಗಳ ಆಯ್ಕೆ
1 ಕತ್ತಿಕಂದು: ಇದು ಅಗಲ, ಗಟ್ಟಿಯಾದ ಬುಡ ಹೊಂದಿದ್ದು ತುದಿಯ ಕಡೆ ಚಿಕ್ಕದಾಗುತ್ತಾ ಹೋಗಿ ತುದಿಯಲ್ಲಿ ಕತ್ತಿ ಆಕಾರದ ಒಂದೆರಡು ಎಲೆಗಳನ್ನು ಹೊಂದಿ ಶಂಖಾಕೃತಿಯನ್ನು ಹೋಲುತ್ತದೆ. ಇದು ಕನಿಷ್ಠ ಎಂದರೂ 1.5 ಕೆ.ಜಿ. ತೂಕವಿರಬೇಕು.
2 ನೀರು ಕಂದು: ಇದು ಸಣ್ಣದಾದ ಬುಡ ಹೊಂದಿದ್ದು ಗಟ್ಟಿ ಇರುವುದಿಲ್ಲ. ಇದರ ಎಲೆಗಳು ಅಗಲವಾಗಿರುತ್ತವೆ. ಇವುಗಳು ನಾಟಿಗೆ ಸೂಕ್ತವಲ್ಲ.

ನಾಟಿ ಪದ್ಧತಿ
ಕತ್ತಿ ಕಂದುಗಳನ್ನು ಹರಿತವಾದ ಸಲಾಕೆ ಅಥವಾ ಗುದ್ದಲಿ ಯನ್ನು ಉಪಯೋಗಿಸಿ ತಾಯಿ ಮರಕ್ಕೆ ಅಪಾಯವಾಗದಂತೆ ಬೇರ್ಪಡಿಸಬೇಕು. ಮರಿ ಕಂದುಗಳನ್ನು ತೆಗೆದು ಅಗೆದ ಗುಂಡಿಯನ್ನು ಮುಚ್ಚಿ ಗಿಡಕ್ಕೆ ನೀರು ಹಾಕಬೇಕು. ಇದರಿಂದ ತಾಯಿ ಮರ ಬಾಗುವುದನ್ನು ತಡೆಯುತ್ತದೆ. 20 ಸೆಂ.ಮೀ. ಅನಂತರದ ತುದಿಭಾಗವನ್ನು ಕತ್ತರಿಸಿ ಕಂದುಗಳನ್ನು ಶೇ. 2ರ ಬ್ಯಾವಿಸ್ಟಿನ್‌ ದ್ರಾವಣದಲ್ಲಿ 20 ನಿಮಿಷ ಕಾಲ ನೆನೆಸಿ ಅನಂತರ ಸೆಗಣಿ ಅಥವಾ ಮಣ್ಣಿನ ರಾಡಿಯಲ್ಲಿ ಮತ್ತೂಮ್ಮೆ ನೆನೆಸಿ ನೆರಳಿನಲ್ಲಿ ಒಣಗಿಸಿ ಪ್ರತಿ ಗುಣಿಗೆ ನಾಟಿಗೆ ಮುನ್ನ 10 ಗ್ರಾಂ ಫ್ಲೋರೇಟ್‌ ಹರಳು ಹಾಕಿ ನಾಟಿ ಮಾಡಬೇಕು.

ಟ್ರಂಚ್‌ ಪದ್ಧತಿ:
ಅಂತರ 2+2 ಮೀ. ಗಿಡಗಳ ಸಂಖ್ಯೆ 2,500 ಪ್ರತಿ ಹೆಕ್ಟೇರ್‌ಗೆ. ಪಚ್ಚ ಬಾಳೆ ತಳಿಗಳಿಗೆ: 18+18 ಮೀ., 3,000 ಪ್ರತಿ ಹೆಕ್ಟೇರ್‌ಗೆ. 2. ಜೋಡಿ ಸಾಲು ಪದ್ಧತಿ: 12+12 ಮೀ. ಎರಡು ಜೋಡಿ ಸಾಲಿನ ನಡುವೆ 2 ಮೀ. ಮತ್ತು ಸಾಲಿನಿಂದ ಸಾಲಿಗೆ, ಗಿಡದಿಂದ ಗಿಡಕ್ಕೆ 12 ಮೀ., 5,200 ಪ್ರತಿ ಹೆಕ್ಟೇರ್‌ಗೆ.

Advertisement

45 ಘನ ಸೆಂ.ಮೀ. ಗುಂಡಿಗೆ 3 ಕೆ.ಜಿ. ಕೊಟ್ಟಿಗೆ ಗೊಬ್ಬರ, 100 ಗ್ರಾಂ ಬೇವಿನ ಹಿಂಡಿ, 20 ಗ್ರಾಂ ಫ್ಲೋರೇಟ್‌ ಹರಳು ಪುಡಿ ಮಾಡಿ ಬೆರೆಸಿ ನಾಟಿ ಮಾಡಬೇಕು. ಬಾಳೆ ಗಿಡದ ಬೆಳವಣಿಗೆ ಮತ್ತು ಇಳುವರಿ ಹೆಚ್ಚಿಸಲು ಸೂಕ್ತ ಪೋಷಕಾಂಶ ಮಿಶ್ರಣ “ಬಾಳೆ ಸ್ಪೆಶಲ್‌’ ನ್ನು ಸಿಂಪಡಿಸಿ ಮಾಡುವುದರಿಂದ ಹೆಚ್ಚಿನ ಗುಣಮಟ್ಟದ ಫ‌ಸಲು, ಅಧಿಕ ಇಳುವರಿ ಪಡೆಯಲು ಸಾಧ್ಯ.
ಉತ್ತಮ ಗುಣಮಟ್ಟದ ಆಕರ್ಷಕ ಹಣ್ಣಿನ ಗಾತ್ರ ಹೆಚ್ಚಿಸಲು ಬಾಳೆಯ ಮಿಡಿ ಕಟ್ಟಿದ ಅನಂತರ ಹೂ ಮೊಗ್ಗನ್ನು ಕಡಿದು ಹಾಕಿ ಅದರ ದೇಟಿನ ತುದಿಯಿಂದ ಪೋಷಕಾಂಶ ಒದಗಿಸಬೇಕು. ಬಾಳೆಗೊನೆ ಬಿಟ್ಟ ಅನಂತರ ಎಲ್ಲ ಕಾಯಿಗಳನ್ನು ಕಟ್ಟಿ 8ರಿಂದ 10 ಹೂ ಪಕಳೆಗಳು ಉದುರಿದ ಅನಂತರ ಸುಮಾರು 6 ಇಂಚು ಉದ್ದದ ದಿಂಡನ್ನು ಹೂಮೊಗ್ಗಿನ ಮೇಲ್ಭಾಗದಲ್ಲಿ ಸಣ್ಣದಾಗಿ ಹರಿತವಾದ ಚಾಕುವಿನಿಂದ ಕತ್ತರಿಸಬೇಕು. ಅನಂತರ ಪ್ಲಾಸ್ಟಿಕ್‌ ಚೀಲದಲ್ಲಿ ಸೆಗಣಿಯನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ರಾಸಾಯನಿಕ ಪೋಷಕಾಂಶ ಕರಗಿಸಿ ದಿಂಡಿನ ತುದಿಯನ್ನು ಮಿಶ್ರಣದಲ್ಲಿ ಮುಳುಗಿಸಿ ಗಟ್ಟಿಯಾದ ದಾರದಿಂದ ಕಟ್ಟಬೇಕು.

ರೋಬಸ್ಟಾ ಜಾತಿಯ ಬಾಳೆಗೆ ಅರ್ಧ ಕಿ.ಗ್ರಾಂ ತಾಜಾ ಹಸುವಿನ ಸೆಗಣಿಯನ್ನು 7.5 ಕಿ.ಗ್ರಾಂ. ಯೂರಿಯಾ, 7.5 ಗ್ರಾಂ ಪೊಟ್ಯಾಶ್‌ನ್ನು ಸುಮಾರು 100 ಮಿ.ಲೀ. ನೀರು ಸೇರಿಸಿ ಚೆನ್ನಾಗಿ ಕದಡಿ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿ ಕಟ್ಟಬೇಕು. ಏಲಕ್ಕಿ ಬಾಳೆಯಲ್ಲಿ ಪ್ರತಿ ಗೊನೆಗೆ ತಲಾ 10 ಗ್ರಾಂ ಯೂರಿಯಾ, 10 ಗ್ರಾಂ ಪೊಟ್ಯಾಶ್‌ ಉಪಯೋಗಿಸಬೇಕು.

ಅನುಸರಿಸಬೇಕಾದ ಪ್ರಮುಖ ಚಟುವಟಿಕೆಗಳು
1 ಕಂದುಗಳನ್ನು ನಿಯಂತ್ರಿಸುವುದು: ನಾಟಿಯಾದ 3-4 ತಿಂಗಳ ಅನಂತರ ಮರಿಕಂದು ಬೆಳೆಯಲು ಆರಂಭವಾಗುತ್ತದೆ. ಇವುಗಳನ್ನು ಕಾಲ ಕಾಲಕ್ಕೆ ಗೊನೆ ಬರುವವರೆಗೂ ತೆಗೆಯಬೇಕು. ಗೊನೆ ಕಟಾವಿನ ಅನಂತರ ಮತ್ತೂಂದು ಕತ್ತಿಯಾಕಾರದ ಮರಿಕಂದನ್ನು ಬೆಳೆಯಲು ಬಿಡಬೇಕು.

2 ಮಣ್ಣು ಏರಿಸುವುದು: ನಾಟಿ ಮಾಡಿದ ಮೂರು ತಿಂಗಳಿಗೆ ಮಣ್ಣನ್ನು ಸಡಿಲಗೊಳಿಸಿ ಗಿಡದ ಸುತ್ತಲೂ ಏರಿಸಬೇಕು. ಇದರಿಂದ ಬುಡಗಳಿಗೆ ಆಧಾರ ಸಿಕ್ಕಿ ಗಾಳಿಯ ಒತ್ತಡ ತಡೆದುಕೊಳ್ಳುತ್ತದೆ.

3 ಪ್ಲಾಸ್ಟಿಕ್‌ ಹೊದಿಕೆ: 30ರಿಂದ 50 ಮೈಕ್ರಾನ್‌ ದಪ್ಪದ ಪ್ಲಾಸ್ಟಿಕ್‌ ಹೊದಿಕೆ ಹಾಕುವುದರಿಂದ ಕಳೆ ನಿಯಂತ್ರಿಸಿ ಗಾಳಿಯ ಒತ್ತಡ ತಡೆದುಕೊಳ್ಳಲು ಸಹಾಯಕವಾಗುತ್ತದೆ.

4 ಆಧಾರಕ್ಕೆ ಕೋಲು ಕೊಡುವುದು: ಬಾಳೆ ನಿಜವಾದ ಕಾಂಡ ಹೊಂದಿರದೆ ಇರುವುದರಿಂದ ಗೊನೆಯಲ್ಲಿ ಹೆಚ್ಚು ಭಾರ ಇರುವುದರಿಂದ ಗಾಳಿಗೆ ಮುರಿಯಬಹುದು. ಬಿದಿರಿನ ಕೋಲು ಅಥವಾ ಬೇರೆ ಕೋಲುಗಳಿಂದ ಆಧಾರ ನೀಡಬಹುದು.

5 ಒಣ ಎಲೆಯನ್ನು ಕಾಲ ಕಾಲಕ್ಕೆ ತೆಗೆಯುವುದರಿಂದ ರೋಗ ಮತ್ತು ಕೀಟಗಳ ತೀವ್ರತೆ ಕಡಿಮೆ ಮಾಡಬಹುದು. ಇದನ್ನು ಹೊದಿಕೆಯಾಗಿಯೂ ಉಪಯೋಗಿಸಬಹುದು.

6 ಗೊನೆಯನ್ನು ಮಸ್ಲಿನ್‌ ಬಟ್ಟೆಯಿಂದ ಮುಚ್ಚಬೇಕು.

ಗೊನೆ ಕಟಾವು: ಮಾಗಿದ ಗೊನೆ ಕಟಾವು ಮಾಡಿದ ಅನಂತರ ಒಂದು ಮರಿ ಕಂದುವನ್ನು ಬೆಳೆಯಲು ಬಿಡಬೇಕು. ಹಣ್ಣಿನ ಗೊನೆ ಕಟಾವಿನ ಅನಂತರ ತಾಯಿಗಿಡ ಒಂದೇ ಬಾರಿ ಕತ್ತರಿಸಿ ಹಾಕದೆ ಹಂತ ಹಂತವಾಗಿ 15ರಿಂದ 20 ದಿನಗಳ ಅಂತರದಲ್ಲಿ ಕತ್ತರಿಸಿ ಹಾಕಬೇಕು. ಇದರಿಂದ ಬೆಳೆಯುತ್ತಿರುವ ಮರಿಗಿಡಗಳಿಗೆ ಪೋಷಕಾಂಶ ದೊರೆಯುತ್ತದೆ.

ಕೊಯ್ಲು ಮಾಡುವ ವಿಧಾನ
ಬಾಳೆಗೊನೆಗಳು ನಾಟಿ ಮಾಡಿದ 12ರಿಂದ 14 ತಿಂಗಳುಗಳಲ್ಲಿ ಕೊಯ್ಲಿಗೆ ಬರುತ್ತದೆ. ಕೊಯ್ಲು ಮಾಡುವ ಒಂದು ವಾರದ ಮುಂಚಿತವಾಗಿ ನೀರು ಕೊಡುವುದನ್ನು ನಿಲ್ಲಿಸಬೇಕು. ಗೊನೆ ಹೊರ ಬಂದ 90ರಿಂದ 120 ದಿನಗಳಲ್ಲಿ ಬಾಳೆ ಗೊನೆ ಕೊಯ್ಲಿಗೆ ಸಿದ್ಧವಾಗುತ್ತದೆ. ಇಳುವರಿ ತಳಿ ಮತ್ತು ನಿರ್ವಹಣೆಯನ್ನು ಅವಲಂಬಿಸಿರುತ್ತದೆ.

1 ಪಚ್ಚ ಬಾಳೆ (ಗಿಡ್ಡ ಕ್ಯಾವಂಡಿಸ್‌),
2 ರೋಬಾಸ್ಟಾ, 3 ಗ್ರ್ಯಾಂಡ್‌ ನೈನ್‌,
4 ರಸಬಾಳೆ (ನಂಜನಗೂಡಿನ ಬಾಳೆ),
5 ಪೂವನ್‌ (ಮೈಸೂರು ಬಾಳೆ, ಸೇಲಂ ಬಾಳೆ),
6. ಕೆಂಪು ಬಾಳೆ ( ಕಮಲಾಪುರ ಬಾಳೆ),
7 ಏಲಕ್ಕಿ ಬಾಳೆ (ಪುಟ್ಟಬಾಳೆ), 8 ನೇಂದ್ರ ಬಾಳೆ, 9 ಮಧುರಂಗ.

-   ಜಯಾನಂದ ಅಮೀನ್‌, ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next