Advertisement

ಮದ್ರಸಗಳಲ್ಲಿ ಮಾಡರ್ನ್ ಶಿಕ್ಷಣ : ಜಮಾತೆಯಿಂದ ಪೂರಕ ಸ್ಪಂದನೆ, ಮುಂದಿನ ವರ್ಷ ಜಾರಿ ನಿರೀಕ್ಷೆ

03:48 PM Sep 21, 2020 | sudhir |

ಬೆಂಗಳೂರು: ಮದ್ರಸಗಳಲ್ಲಿ ಧಾರ್ಮಿಕ ಬೋಧನೆಯ ಜತೆಗೆ ಆಧುನಿಕ ಶಿಕ್ಷಣ ನೀಡಲು ರಾಜ್ಯ ಸರಕಾರ ಚಿಂತಿಸಿದೆ.
ಅಲ್ಲಿ ಕನ್ನಡ, ಇಂಗ್ಲಿಷ್‌, ವಿಜ್ಞಾನ, ಕಂಪ್ಯೂಟರ್‌ ವಿಜ್ಞಾನ ಮತ್ತಿತರ ವಿಷಯಗಳನ್ನು ಕಲಿಸಲು ಮದ್ರಸಗಳ ಮುಖ್ಯಸ್ಥರೊಂದಿಗೆ ಸರಕಾರ ಚರ್ಚಿಸಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

Advertisement

ರಾಜ್ಯ ಸರಕಾರದ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಮದ್ರಸ ನಡೆಸುತ್ತಿರುವ ಜಮಾತೆ ಮುಖ್ಯಸ್ಥರಿಂದ ಪೂರಕ ಸ್ಪಂದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಶೀಘ್ರವೇ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಈ ಬದಲಾವಣೆ ಯತ್ನಕ್ಕೆ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ್‌ ಪ್ರಯತ್ನಕ್ಕೆ ಮುಂದಾಗಿದ್ದಾರೆ.

600 ಮದ್ರಸಗಳು
ರಾಜ್ಯದಲ್ಲಿ ಸುಮಾರು 600 ಮದ್ರಸಗಳಿವೆ. ಈ ಪೈಕಿ ಕೆಲವು ಮದ್ರಸಗಳಲ್ಲಿ ಧರ್ಮ ಬೋಧನೆ ಜತೆಗೆ ಇತರ ವಿಷಯಗಳ ಕಲಿಕೆಗೆ ಪ್ರಯತ್ನ ಆರಂಭಿಸಲಾಗಿದೆ. ರಾಜ್ಯ ಸರಕಾರವು ಕೇಂದ್ರ ಸರಕಾರದ ಎನ್‌ಐಒಎಸ್‌ (ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಓಪನ್‌ ಸ್ಕೂಲ್‌) ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲ ಮದ್ರಸಗಳಲ್ಲಿ ಆಧುನಿಕ ಶಿಕ್ಷಣ ಒದಗಿಸಲು ಪ್ರಯತ್ನ ನಡೆಸಿದೆ.

ಸರಕಾರದ ಈ ಯೋಜನೆಯನ್ನು ಅಳವಡಿಸಿಕೊಳ್ಳುವ ಮದ್ರಸಗಳಿಗೆ ಶಿಕ್ಷಕರ ಬೋಧನ ವೆಚ್ಚವನ್ನು ಸರಕಾರವೇ ನೀಡಲು ಮುಂದಾಗಿದೆ. ಅಲ್ಲಿನ ವಿದ್ಯಾರ್ಥಿಗಳಿಗೆ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಬರೆದು ತತ್ಸಮಾನ ಪ್ರಮಾಣ ಪತ್ರ ಪಡೆಯಲು ಅವಕಾಶ ದೊರೆಯಲಿದೆ ಎಂದು ತಿಳಿದು ಬಂದಿದೆ.

ಮದ್ರಸಗಳಲ್ಲಿ ಓದುವವರಿಗೆ ಎಲ್ಲ ವಿದ್ಯಾರ್ಥಿಗಳಂತೆ ಆಧುನಿಕ ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ. ಮದ್ರಸ ಗಳಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಬೇರೆ ರಾಜ್ಯ ಗಳ ಮದ್ರಸಗಳಲ್ಲಿ ಯಾವ ರೀತಿಯ ಶಿಕ್ಷಣ ನೀಡಲಾಗು ತ್ತಿದೆ ಎನ್ನುವುದನ್ನು ನೋಡಿಕೊಂಡು, ಅದನ್ನು ರಾಜ್ಯದಲ್ಲೂ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಮುಂದಿನ ವರ್ಷದಿಂದ ಅಧಿಕೃತವಾಗಿ ಜಾರಿಗೆ ತರಲಾಗುವುದು.
– ಶ್ರೀಮಂತ ಪಾಟೀಲ್‌, ಅಲ್ಪಸಂಖ್ಯಾಕ ಕಲ್ಯಾಣ ಇಲಾಖೆ ಸಚಿವ

Advertisement

ಕೇಂದ್ರ ಸರಕಾರದ ಎನ್‌ಐಒಎಸ್‌ ಯೋಜನೆಗೆ ನಮ್ಮ ಬೆಂಬಲ ಇದೆ. ನಾವೆಲ್ಲರೂ ಮದ್ರಸ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿ ಸುತ್ತೇವೆ. ಸರಕಾರದ ಯೋಜನೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದೇವೆ.
– ಸಯ್ಯದ್‌ ಮೊಹಮದ್‌ ತನ್ವೀರ್‌ ಹಾಸ್ಮಿ, ಜಮಾತೆ ಅಯಿಲೆ ಸುನ್ನತ್‌ ಕರ್ನಾಟಕ ಅಧ್ಯಕ್ಷ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next