Advertisement
ನಮ್ಮೆಲ್ಲರ ಪೂರ್ವಜರು ಆಫ್ರಿಕಾ, ಇರಾನ್ ಅಥವಾ ಮಧ್ಯ ಏಷ್ಯಾದಿಂದ ವಲಸೆ ಬಂದಿದ್ದಾರೆ. ದೇಶದ ನೆಲದ ಮೇಲೆ ಮೊದಲು ಕಾಲಿರಿಸಿದ್ದು ಆಫ್ರಿಕನ್ನರು. ಸುಮಾರು 50,000 ವರ್ಷಗಳ ಹಿಂದೆ ಆಫ್ರಿಕನ್ನರು ಭಾರತಕ್ಕೆ ಬಂದಿದ್ದು, ಬೇಟೆಯಾಡುವ ಮೂಲಕ ಜೀವನ ಸಾಗಿಸುತ್ತಿದ್ದ ಇವರೇ ಇಲ್ಲಿ ಆಧುನಿಕ ನಾಗರಿಕತೆಗೆ ನಾಂದಿ ಹಾಡಿದ್ದಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅನಂತರ ಈಗ್ಗೆ ಸುಮಾರು 10ರಿಂದ 20 ಸಾವಿರ ವರ್ಷಗಳ ಹಿಂದೆ ಇಲ್ಲಿಗೆ ವಲಸೆ ಬಂದ ಇರಾನ್ ಮಂದಿ, ಭಾರತದಲ್ಲಿ ಕೃಷಿ ಅಥವಾ ವ್ಯವಸಾಯವನ್ನು ಪರಿಚಯಿಸಿ, ದುಡಿಮೆ ಸಂಸ್ಕೃತಿಗೆ ಬುನಾದಿ ಹಾಕಿದರು. ಈ ಎಲ್ಲ ಕುರುಹುಗಳನ್ನು ಮೈಟೋಕಾಂಡ್ರಿಯಾದ ಡಿಎನ್‌ಎಯಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದ್ದು, ಸ್ತ್ರೀ ಕುಲದ ಕುರುಹುಗಳು ಕೂಡ ಇಲ್ಲಿ ಸ್ಪಷ್ಟವಾಗಿವೆ. ಇನ್ನೊಂದೆಡೆ ಪುರುಷರ ಸಂತತಿಯ ಕುರುಹುಗಳನ್ನು ದೃಢಪಡಿಸುವ ವೈ-ಕ್ರೋಮೋಜೋಮ್‌ಗಳು ಅತ್ಯಂತ ವಿಭಿನ್ನವಾಗಿವೆ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ. ‘ಅಧ್ಯಯನದ ವೇಳೆ ದೊರೆತಿರುವ ಕೆಲ ಕುರುಹುಗಳು ತೀರಾ ಇತ್ತೀಚಿನವುಗಳಾಗಿವೆ. ಸುಮಾರು 5 ಸಾವಿರ ವರ್ಷಗಳ ಹಿಂದಷ್ಟೇ ಮಧ್ಯ ಏಷ್ಯಾದಿಂದ ಜನಸಮೂಹ ಭಾರತಕ್ಕೆ ವಲಸೆ ಬಂದಿರುವುದನ್ನು ದೃಢೀಕರಿಸುವ ಸಂಕೇತಗಳು ಸ್ಪಷ್ಟವಾಗಿವೆ’ ಎಂದು ಅಧ್ಯಯನದ ಸಹ ಲೇಖಕರಾಗಿರುವ ಮರೀನಾ ಸಿಲ್ವಾ ಹೇಳುತ್ತಾರೆ.
50,000ವರ್ಷ ಹಿಂದೆ : ಆಫ್ರಿಕನ್ನರು
20,000ವರ್ಷ ಹಿಂದೆ : ಇರಾಕಿಗಳು
5,000ವರ್ಷ ಹಿಂದೆ : ಮಧ್ಯ ಏಷ್ಯನ್ನರು