Advertisement

“ನನ್ನ ಸಮಸ್ಯೆಗಳು “ಸತ್ಯ’, ಅವನ ಸಮಸ್ಯೆ “ನೆಪ’

10:13 AM Feb 10, 2020 | sudhir |

ಇತ್ತೀಚೆಗೆ ನನ್ನ ಪ್ರವಚನ ಕೇಳಲು ಬಂದ ಯುವಕನೊಬ್ಬ ತನ್ನ ಕಷ್ಟಗಳನ್ನು ಹೇಳಿಕೊಳ್ಳಲಾರಂಭಿಸಿದ. ತನಗೆ ಜೀವನದಲ್ಲಿ ಒಂದು ಖಚಿತತೆ ಇಲ್ಲ, ಏನು
ಮಾಡಬೇಕೋ ತಿಳಿಯುತ್ತಿಲ್ಲ, ಭವಿಷ್ಯದ ಬಗ್ಗೆ ಭಯವಾಗುತ್ತಿದೆ ಎಂದು ಮಾತು ಆರಂಭಿಸಿದ ಯುವಕ, ನಂತರ ತನ್ನ ಕಷ್ಟಗಳಿಗೆಲ್ಲ ತನ್ನ ತಂದೆಯೇ ಕಾರಣ ಎಂದು ದೂರಲಾರಂಭಿಸಿದ. “”ನನ್ನ ಅಪ್ಪ ನನ್ನ ಕಡೆ ಹೆಚ್ಚು ಗಮನ ಕೊಡಲೇ ಇಲ್ಲ, ತಾನೂ ಕೂಡ ಬೇರೆಯವರಂತೆ ಜೀವನದಲ್ಲಿ ಧೈರ್ಯ ಮಾಡಿ ಮುಂದೆ ಬರಲಿಲ್ಲ, ನಮಗಾಗಿ ಸರಿಯಾಗಿ ಆಸ್ತಿ ಮಾಡಲಿಲ್ಲ…ಆತನಿಂದಾಗಿ ನಾನು ಈ ಸ್ಥಿತಿಯಲ್ಲಿ ಇದ್ದೇನೆ” ಎಂದು ಗೋಳಾಡಿದ.

Advertisement

ನಾನು ಅವ ನಿಗೆ ಕೇಳಿದೆ, “ಈಗ ನಿನಗೆಷ್ಟು ವರ್ಷ?’
ಯುವಕ ಅಂದ- “29′
“”ನೀನು ಹುಟ್ಟಿದಾಗ ನಿನ್ನ ಅಪ್ಪನಿಗೆ ಎಷ್ಟು ವಯಸ್ಸಿತ್ತು?”
“”ಬಹುಶಃ 26-27 ಇತ್ತೆನ್ನಿಸುತ್ತದೆ” ಲೆಕ್ಕ ಹಾಕಿ ಹೇಳಿದ.
ನಾನಂದೆ, “ಆ ಸಮಯದಲ್ಲಿ ನಿನ್ನ ಅಪ್ಪನೂ ಕೂಡ ನಿನ್ನಂತೆಯೇ ಗೊಂದಲದಲ್ಲಿ, ಭಯದಲ್ಲಿ, ಹಾಗೂ ಜೀವನದಲ್ಲಿ ಸ್ಪಷ್ಟತೆ ಇಲ್ಲದ ಯುವಕನಾಗಿರಬಹುದಲ್ಲ? ನಿನ್ನ ಬಗ್ಗೆ ನಿನಗಿರುವ ಅನುಕಂಪ ನಿನಗೆ ಆತನ ಬಗ್ಗೆ ಏಕೆ ಮೂಡುತ್ತಿಲ್ಲ?’
ಯುವಕ ಅಂದ “ಅರೆ, ಹೌದಲ್ಲ… ನಾನು ಹೀಗೆ ಯೋಚಿಸಿರಲೇ ಇಲ್ಲ…’

***
ಇದು ಒಬ್ಬ ಯುವಕನ ಕಥೆಯಲ್ಲ… ನಮ್ಮೆಲ್ಲರ ಕಥೆಯೂ ಅಲ್ಲವೇ? ಆದರೆ, ಪಾತ್ರಗಳು ನಿರಂತರವಾಗಿ ಬದಲಾಗುತ್ತಲೇ ಇರುತ್ತವಷ್ಟೆ.
ಉದಾಹರಣೆಗೆ, ನೀವು ಯಾವುದೋ ಬಹುಮುಖ್ಯ ಮೀಟಿಂಗ್‌ಗೆ ತಡವಾಗಿ ಹೋಗುತ್ತೀರಿ ಎಂದುಕೊಳ್ಳಿ. ಯಾಕೆ ತಡವಾಯಿತು ಎಂದು ಯಾರಾದರೂ ಕೇಳಿದಾಗ, ನೀವು ಕಾರಣಗಳನ್ನು ಹುಡುಕಲಾರಂಭಿಸುತ್ತೀರಿ. ಕ್ಷಣಾರ್ಧದಲ್ಲಿ ನಿಮಗೆ ಮೂರ್ನಾಲ್ಕು ಕಾರಣಗಳು ನೆನಪಾಗುತ್ತವೆ…. ರಾತ್ರಿ ಆಫೀಸಲ್ಲಿ ತಡವಾಯ್ತು ಹಾಗಾಗಿ ಬೆಳಗ್ಗೆ ಬೇಗನೇ ಏಳಲು ಆಗಲಿಲ್ಲ, ಅಲಾರಾಂ ಸರಿಯಾಗಿ ಕೇಳಿಸಲಿಲ್ಲ, ತಿಂಡಿ ಲೇಟಾಗಿ ತಯಾರಾಯಿತು, ಓಲಾ ಬುಕ್‌ ಮಾಡೋಣವೆಂದರೆ ಒಂದು ಕಾರೂ ಬರಲಿಲ್ಲ, ದಾರಿಯಲ್ಲಿ ವಿಪರೀತ ಟ್ರಾಫಿಕ್‌ ಇತ್ತು, ಹೀಗೆ, ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಹೇಳುತ್ತೀರಿ.

ಆದರೆ, ಇದೇ ಸನ್ನಿವೇಶ ಬೇರೆಯವರ ಜೀವನದಲ್ಲಿ ಎದುರಾದರೆ? ಅಂದರೆ, ನಿಮ್ಮ ಸಹೋದ್ಯೋಗಿಯೊಬ್ಬ ಕೂಡ ಒಂದು ಬಹುಮುಖ್ಯ ಮೀಟಿಂಗ್‌ಗೆ ತಡವಾಗಿ ಬರುತ್ತಾನೆ ಎಂದುಕೊಳ್ಳಿ. ಯಾಕೆ ತಡವಾಯಿತು ಎಂದು ಕೇಳಿದಾಗ, ಅವನೂ ಕೂಡ ಇಂಥದ್ದೇ ಉತ್ತರಗಳನ್ನು ಕೊಡಬಹುದು. ಆದರೆ ನಿಮ್ಮ ಮನಸ್ಸು ಮಾತ್ರ ಆತ ಕೊಡುವ ಕಾರಣಗಳನ್ನು “ನೆಪ’ ಎಂದು ಹಂಗಿಸುತ್ತದೆ. “”ಸುಮ್ಮನೇ ನೆಪ ಹೇಳುತ್ತಾನೆ” ಎಂದು ಅವನು ಹೇಳುವ ಕಾರಣಗಳನ್ನೆಲ್ಲ ನಿರಾಕರಿಸಿಬಿಡುತ್ತದೆ ನಿಮ್ಮ ಮನಸ್ಸು.

ಹೀಗೇಕೆ ಆಗುತ್ತದೆ? ಮನಶಾಸ್ತ್ರದಲ್ಲೂ ಈ ವರ್ತನೆಯ ಬಗ್ಗೆ ವಿವರಣೆಯಿದೆ. ಇದನ್ನು “ಆ್ಯಕ್ಟರ್‌ – ಆಬ್ಸರ್ವರ್‌ ಬಯಾಸ್‌’ ಎಂದೂ ಕರೆಯುತ್ತಾರೆ.
ಒಂದು ಸನ್ನಿವೇಶವು ನಿಮಗೆ ಎದುರಾದಾಗ ನೀವು ಆ್ಯಕ್ಟರ್‌, ಅಂದರೆ ನಟರಾಗಿ ಇರುತ್ತೀರಿ. ಆದರೆ ಅದೇ ಸನ್ನಿವೇಶವು ಇನ್ನೊಬ್ಬರಿಗೆ ಎದುರಾದಾಗ ನೀವು ಆಬ್ಸರ್ವರ್‌ ಅಥವಾ ಪ್ರೇಕ್ಷಕರಾಗಿ ಇರುತ್ತೀರಿ! ಯಾವುದೇ ನಕಾರಾತ್ಮಕ ಘಟನೆಗಳು ನಮ್ಮ ಬದುಕಿನಲ್ಲಿ ನಡೆದಾಗ, ಬಾಹ್ಯ ಕಾರಣಗಳನ್ನು ಹುಡುಕುವುದು “ಆ್ಯಕ್ಟರ್‌’ನ ಕೆಲಸ. ಅಂದರೆ ಯಾರಧ್ದೋ ಕಾರಣಕ್ಕಾಗಿ, ಯಾವುದೋ ಘಟನೆಗಳಿಂದಾಗಿ ಇದು ಆಯಿತು ಎಂದೂ ಹೇಳುತ್ತೇವೆ. ಇವೇ ನಕಾರಾತ್ಮಕ ಸನ್ನಿವೇಶಗಳಲ್ಲಿ ಇತರರು ಸಿಲುಕಿದಾಗ ಅದಕ್ಕೆ ಆ ವ್ಯಕ್ತಿಯೇ ಸಂಪೂರ್ಣ ಜವಾಬ್ದಾನೆಂಂದು ತೀರ್ಪು ನೀಡುವುದನ್ನು ನಟ-ಪ್ರೇಕ್ಷಕನ ಆಟ ಎನ್ನಬಹುದು!

Advertisement

ಕೆಲ ವರ್ಷಗಳ ಹಿಂದೆ ಒಂದು ಘಟನೆ ನಡೆಯಿತು. ಬಾಲಿವುಡ್‌ ನಟಿ ಆಲಿಯಾ ಭಟ್‌ ಯಾವುದೋ ಕಾರ್ಯಕ್ರಮವೊಂದರ ವೇಳೆಯಲ್ಲಿ, ನಿರೂಪಕರು ಕೇಳಿದ ಪ್ರಶ್ನೆಗೆ ತಪ್ಪಾಗಿ ಉತ್ತರಿಸಿಬಿಟ್ಟಳು. ಭಾರತದ ರಾಷ್ಟ್ರಪತಿ ಯಾರು ಎಂಬ ಪ್ರಶ್ನೆಗೆ ಪೃಥ್ವಿರಾಜ್‌ ಚೌಹಾಣ್‌ ಎಂದಳಾಕೆ. ಆಕೆ ಹೀಗಂದದ್ದೇ ತಡ, “ಅಯ್ಯೋ ಈಕೆಯಂಥ ದಡ್ಡ ಶಿಖಾಮಣಿ ಯಾರೂ ಇಲ್ಲ, ಇಷ್ಟು ಸರಳ ಪ್ರಶ್ನೆಗೆ ಉತ್ತರಿಸಲು ಆಗಲಿಲ್ಲವಲ್ಲ…ಬ್ಯೂಟಿ ವಿತೌಟ್‌ ಬ್ರೇನ್‌’ ಎಂದೆಲ್ಲ ಹಂಗಿಸಲಾಯಿತು. ಆಕೆ ಆ ಕ್ಷಣದಲ್ಲಿ ಗೊಂದಲಕ್ಕೆ ಈಡಾಗಿರಬಹುದು, ಉತ್ತರ ಮರೆತಿರಬಹುದು ಅಥವಾ ಆಕೆಗೆ ನಿಜಕ್ಕೂ ಉತ್ತರವೇ ಗೊತ್ತಿಲ್ಲದಿರಬಹುದು. ಆದರೆ ನಾವೂ ಕೂಡ ಕೆಲವೊಮ್ಮೆ ಅತ್ಯಂತ ಸುಲಭದ ಪ್ರಶ್ನೆಗೆ ಉತ್ತರಿಸಲು ತಡವರಿಸಿಬಿಡುತ್ತೇವಲ್ಲವೇ? ಆಗ ನಮ್ಮನ್ನು ನಾವು ಈ ರೀತಿ ಹಂಗಿಸಿಕೊಳ್ಳುವುದಿಲ್ಲ ತಾನೇ?

ವೇದಿಕೆಯ ಮೇಲೆ ಏರಿದ ವ್ಯಕ್ತಿಯೊಬ್ಬ ಭಾಷಣ ಮರೆತನೆಂದರೆ “ಅವನು ಎಂಥ ದಡ್ಡನಪ್ಪ’ ಎನ್ನುತ್ತೇವೆ. ಅದೇ ಸ್ಥಿತಿಯಲ್ಲಿ ನಾವು ಸಿಲುಕಿದರೆ, “ಆ ಕ್ಷಣಕ್ಕೆ ಭಯವಾಯಿತು, ಸರಿಯಾಗಿ ನಿ¨ªೆಯಾಗಿರಲಿಲ್ಲ, ನನಗೆ ಸ್ಟೇಜ್‌ ಫಿಯರ್‌ ಇದೆ…ಆರಂಭ ದಲ್ಲಿ ಎಲ್ಲರೂ ಎಡವು ವುದು ಸಹಜ’ ಎಂದು ಸಮಾಧಾನ ಹೇಳಿಕೊಳ್ಳುತ್ತೇವೆ.

ಗಮನಾರ್ಹ ಸಂಗತಿಯೆಂದರೆ, ನಮ್ಮ ವೈಫ‌ಲ್ಯಗಳಿಗೆ ನಾವು ಬೇರೆಯವರನ್ನು ಜವಾಬ್ದಾರರಾಗಿಸುತ್ತೇವೆ. ಆದರೆ, ನಮ್ಮ ಯಶಸ್ಸಿಗೆ ನಾವು ಬೇರೆಯವರಿಗೆ ಅಷ್ಟು ಕ್ರೆಡಿಟ್‌ ಕೊಡುವುದಿಲ್ಲ! ಇದನ್ನು ಸೆಲ್ಫ್ ಸರ್ವಿಂಗ್‌ ಬಯಾಸ್‌ ಎಂದೂ ಹೇಳಲಾಗುತ್ತದೆ. ಈ ರೀತಿಯ ಗುಣದಿಂದ ಹೊರಬರುವುದಕ್ಕೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಖಂಡಿತ ಸಾಧ್ಯವಿದೆ. empathy ಎಂಬುದೇ ಈ ರೋಗಕ್ಕೆ ಇರುವ ಮದ್ದು!

ಎಂಪಥಿ ಎಂದರೆ ಇತರರ ಭಾವನೆ ಮತ್ತು ಅನುಭವಗಳನ್ನು ಗ್ರಹಿಸುವ ಶಕ್ತಿ ಎಂದರ್ಥ. ನಾವು ಅವರ ಸ್ಥಾನದಲ್ಲಿದ್ದರೆ ಹೇಗೆ ವರ್ತಿಸುತ್ತಿದ್ದೆವು ಎಂದು
ಇತರರ ದೃಷ್ಟಿಕೋನದಿಂದಲೂ ಜಗತ್ತನ್ನು ನೋಡಲು ಆರಂಭಿಸಬೇಕು. ಆಂಗ್ಲ ಭಾಷೆಯಲ್ಲಿ ಇದಕ್ಕೆ stand in (someone’s) shoes ಎಂದೂ ಕರೆಯಲಾಗುತ್ತದೆ. ಇನ್ನೊಬ್ಬರ ದೃಷ್ಟಿಕೋನದಿಂದ ಅಥವಾ ಅವರ ಪರಿಸ್ಥಿತಿಯಲ್ಲಿ ನಿಂತು ಅರ್ಥಮಾಡಿಕೊಳ್ಳುವುದು ಎಂದು ಇದರರ್ಥ. ಎಂಪಥಿ ಎಂಬುದು ನಮ್ಮ ಸಹಜ ಗುಣವಾಗಿಬಿಟ್ಟರೆ, ಜಗತ್ತು ಸುಖದಿಂದ ಇರಬಲ್ಲದು.

– ಸ್ವಾಮಿ ಸತಾøಪ್ತಾನಂದ

Advertisement

Udayavani is now on Telegram. Click here to join our channel and stay updated with the latest news.

Next