Advertisement

ಪ್ರೀತಿಯ ಅಭಿವ್ಯಕ್ತಿಗೆ ನಿಶ್ಚಿತ ವಿಧಾನ ಒಂದಿದೆಯೇ?

03:45 AM Jan 24, 2017 | Karthik A |

ಪ್ರೀತಿ ಒಂದು ಅಪೂರ್ವವಾದ ಅನುಭೂತಿ. ಅದಕ್ಕೆ ವಯಸ್ಸು, ಜಾತಿ, ಅಂತಸ್ತುಗಳ ಬಂಧನವಿಲ್ಲ. ಬಾಯಿಬಿಟ್ಟು ಹೇಳಿಕೊಂಡರೆ ಮಾತ್ರ ಪ್ರೀತಿಯೇ? ಹಾಗೂ ಅಲ್ಲ. ಪ್ರೀತಿ ಅವುಗಳನ್ನೆಲ್ಲ ಮೀರಿದ ಒಂದು ಅಪೂರ್ವ ಸಂಪತ್ತು, ಪ್ರಕೃತಿ – ಪುರುಷ ಸಮಾಗಮದ ಸೇತುವೆ.

Advertisement

ನಮ್ಮ ಜೀವನದಲ್ಲಿ ಪ್ರೀತಿ ನೀಡುವಂತಹ ವಿಶೇಷ ಅನುಭವವನ್ನು ಮತ್ಯಾವುದೂ ಕೊಡುವುದಕ್ಕೆ ಸಾಧ್ಯವಿಲ್ಲ. ಪ್ರೀತಿ ಅಂತಹ ಒಂದು ವಿಶಿಷ್ಟವಾದ ಅನುಭೂತಿ. ಇಂತಹ ಪ್ರೀತಿ ಮೊಳಕೆ ಒಡೆಯುವಾಗ ಮನಸ್ಸಿಗೆ ಎಲ್ಲಿಲ್ಲದ ಆನಂದ. ಅದು ಶುರುವಾಗಿ, ಅದಕ್ಕೆ ಇನ್ನೊಂದು ಕಡೆಯಿಂದ ಪ್ರತಿಸ್ಪಂದನೆ ಲಭ್ಯವಾಗಿ, ಆ ಪ್ರೀತಿಯನ್ನು ಇಬ್ಬರೂ ಒಬ್ಬರಿಗೊಬ್ಬರು ವ್ಯಕ್ತಪಡಿಸಿಕೊಳ್ಳುವ ತನಕ ಒಂದು ರೀತಿಯ ಆತಂಕ. ಪ್ರೀತಿಯಲ್ಲಿ ತಲ್ಲೀನವಾಗಿರುವ ಮನಸ್ಸಿಗೆ ಸುತ್ತಲಿನ ಜಗತ್ತೇ ಸುಂದರವಾಗಿ ಕಂಡು ಹೇಳಿಕೊಳ್ಳಲಾಗದಂತಹ ಭಾವ. ಹೀಗೆ ಪ್ರೀತಿ ಹುಟ್ಟಿಕೊಂಡಿರುವ ಮಂದಿ ಹೃದಯದ ತುಂಬಾ ಇರುವ ಪ್ರೀತಿಯನ್ನು ಅವಳ ಅಥವಾ ಅವನ ಮುಂದೆ ಹೇಗೆ ವ್ಯಕ್ತಪಡಿಸಲಿ ಅಂತ ಚಡಪಡಿಸುತ್ತಾರೆ. ಪ್ರೀತಿಯನ್ನು ಟ್ರಯಲ್‌ ಆ್ಯಂಡ್‌ ಎರರ್‌ ಅನ್ನುವಂತೆ ತೆರೆದಿಟ್ಟರೂ ಅನೇಕ ಬಾರಿ ಎದುರಿರುವ ಪ್ರೇಮಿಗಳು ಅದನ್ನು ತಿರಸ್ಕರಿಸುವುದುಂಟು. ಹಾಗಾದರೆ ನಾವು ಹೇಗಿದ್ದರೆ ನಮ್ಮ ಪ್ರೇಮಿಗಳಿಗೆ ಇಷ್ಟ ಆಗುತ್ತದೆ? ನಮ್ಮ ಪ್ರೀತಿಯನ್ನು ಹೇಗೆ ತೋರ್ಪಡಿಸಿಕೊಳ್ಳಬೇಕು? ಇವೆಲ್ಲ ನಮ್ಮ ತಲೆಯಲ್ಲಿ ತುಳುಕಾಡುವ ಪ್ರಶ್ನೆಗಳು. 

ಪ್ರೀತಿಯಲ್ಲಿ ಸೂಕ್ಷ್ಮತೆ
ಪ್ರೇಮಿಗಳಲ್ಲಿ ಅನೇಕರು ಸೂಕ್ಷ್ಮಜೀವಿಗಳಾಗಿರುತ್ತಾರೆ. ಏನನ್ನೂ ನಿರೀಕ್ಷಿಸದೆ ಪ್ರೀತಿಸಬೇಕು ಅಂತ ನಮ್ಮ ತಲೆ ಅನೇಕ ಬಾರಿ ಪ್ರಮಾಣ ಮಾಡಿಕೊಂಡರೂ ಮತ್ತೆ ಮತ್ತೆ ನಮ್ಮ ಮನಸ್ಸು ‘ಪ್ರೇಮಿ ಯಾಕೆ ನನ್ನನ್ನು ಹೀಗೆ ಪ್ರೀತಿಸುತ್ತಿಲ್ಲ, ಬೇರೆಯವರೆಲ್ಲ ಎಷ್ಟು ಸಂತೋಷವಾಗಿದ್ದಾರೆ, ಅವರ ಪ್ರೇಮಿಗಳೆಲ್ಲ ಅವರವರಿಗೆ ಇಷ್ಟ ಆಗುವ ಹಾಗೆ ನಡೆದುಕೊಳ್ಳುತ್ತಾರೆ, ನನಗೆ ಮಾತ್ರ ಯಾಕೆ ಇಷ್ಟೊಂದು ನೋವು, ಏನೂ ಬೇಡ ಅಂದುಕೊಂಡರೂ ಎಲ್ಲವೂ ಬೇಕು ಅನ್ನಿಸುತ್ತದೆ, ನನ್ನ ಪ್ರೇಮಿ ಮಾತ್ರ ಯಾಕೆ ನನ್ನ ಮನಸ್ಸನ್ನು ಅರ್ಥಮಾಡಿಕೊಂಡು ನಡೆದುಕೊಳ್ಳುವುದಿಲ್ಲ’ ಅಂತ ಕೊರಗುತ್ತದೆ. ನಿಜ, ಪ್ರೀತಿ ಒಂದು ಅಪೂರ್ವ ಸುಖದ ಅನುಭೂತಿಯಾದರೂ ಅದರ ಜತೆಗೆ ನೋವು, ನಿರಾಶೆ, ಸಂಕಟ ಇದ್ದೇ ಇರುತ್ತವೆ. 

ಪ್ರೀತಿ ಹೀಗೆಯೇ ಇರಬೇಕು ಅನ್ನುವ ಶರತ್ತೇನಾದರೂ ಈ ಜಗತ್ತಿನಲ್ಲಿ ಇದೆಯಾ? ಇಲ್ಲ. ಹಾಗೆಯೇ ಇಂಥವರು, ಇಂಥವರನ್ನೇ ಪ್ರೀತಿಸಬೇಕು ಅನ್ನುವು ನಿಯಮ ಇದೆಯಾ? ಅದೂ ಇಲ್ಲ. ಆದರೆ, ಎಲ್ಲರ ಪ್ರೀತಿಯ ಅನುಭವವೂ ಒಂದೇ ರೀತಿಯಾಗಿರುತ್ತದೆ. ಯಾಕೆ ಅಂದರೆ, ಪ್ರೀತಿಯು ಪ್ರಕೃತಿ – ಪುರುಷನ ಸಮಾಗಮಕ್ಕೆ ಸೇತುವೆ. ಹೀಗಾಗಿ ಪ್ರೀತಿಗೆ ಒಳಗಾಗುವ ಎಲ್ಲರ ಮನಸ್ಸು – ದೇಹಗಳಲ್ಲಿ ನಡೆಯುವ ಕ್ರಿಯೆ ಒಂದೇ ಆಗಿರುತ್ತದೆ. ಮನುಷ್ಯನ ನಡವಳಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು, ಆದರೆ ಪ್ರೀತಿಯಲ್ಲಿ ಇರುವವರಿಗೆ ಆಗುವ ಅನುಭವ ಒಂದೇ. ಅನೇಕರಿಗೆ ಪಕ್ಕದ ಮನೆ ಹುಡುಗಿಯನ್ನು ನೋಡುತ್ತಾ ನೋಡುತ್ತಾ ಪ್ರೀತಿ ಶುರುವಾಗಬಹುದು. ಇನ್ನು ಕೆಲವರು ಆಫೀಸಿನಲ್ಲಿ ಸಹೋದ್ಯೋಗಿಯೊಂದಿಗೆ ಸಲುಗೆಯಿಂದ ಪ್ರೀತಿಯಲ್ಲಿ ಮುಳುಗಬಹುದು. ಇನ್ನು ಕೆಲವರಿಗೆ ಕಾಲೇಜು – ಸ್ಕೂಲಿನಲ್ಲೇ ಪ್ರೀತಿ ಮೊಳಕೆಯೊಡೆದಿರುತ್ತದೆ. ಪ್ರೀತಿಗೆ ಆಕಾರ – ರೂಪಗಳಿಲ್ಲ. ಯಾರಿಗೆ ಯಾರು ಬೇಕಾದರೂ, ಯಾವಾಗ ಬೇಕಾದರೂ ಇಷ್ಟ ಆಗಿ ಪ್ರೀತಿಯೆಡೆಗೆ ನಡೆಯಬಹುದು. 

ಕೆಲವರು ಮೊದಲ ಭೇಟಿಯಲ್ಲೇ, ನೋಡನೋಡುತ್ತಲೇ, ಹುಡುಗಿಯ ಸೌಂದರ್ಯಕ್ಕೆ, ಗುಣನಡತೆಗೆ ಮಾರುಹೋಗಿ ಐ ಲವ್‌ ಯೂ ಎನ್ನುತ್ತಾರೆ. ಇನ್ನು ಕೆಲವರು ವರ್ಷಗಟ್ಟಲೇ ಜತೆಯಲ್ಲೇ ಇದ್ದರೂ ಪ್ರೀತಿಯನ್ನು ಹೇಳಿಕೊಳ್ಳುವ ಧೈರ್ಯ ಮಾಡುವುದಿಲ್ಲ. ಮತ್ತೆ ಕೆಲವರು ಪ್ರತಿ ಮೂರು ತಿಂಗಳಿಗೆ ಒಬ್ಬೊಬ್ಬ ಹುಡುಗಿ/ ಹುಡುಗನನ್ನು ಪ್ರೀತಿಸುತ್ತಾರೆ. ಈಗಿನ ಕಾಲಘಟ್ಟ ಹೇಗಿದೆ ಅಂದರೆ, ಪ್ರೀತಿ ಅಂತ ಶುರುವಾಗಿ, ಒಬ್ಬರಿಗೊಬ್ಬರು ಹೊಂದಾಣಿಕೆ ಆಗಲಿಲ್ಲ ಅಂತಾದರೆ ಮುಲಾಜಿಲ್ಲದೆ ಬಿಟ್ಟು ಹೊರಡುತ್ತಾರೆ. ಪ್ರೀತಿ ಅಲ್ಲೇ ತುಂಡಾಗಿ ಬಿದ್ದುಹೋಗುತ್ತದೆ. ಅಂಥವರು ಮತ್ತೆ ಇನ್ನು ಯಾರನ್ನು ಪ್ರೀತಿಸಲಿ ಅಂತ ಹುಡುಕುತ್ತಾರೆ. 

Advertisement

ಯಾವ ವಯಸ್ಸಿನಲ್ಲಿಯೇ ಶುರುವಾಗಲಿ, ದೈಹಿಕ ಕಾಮನೆಗಳ ಈಡೇರಿಕೆಯನ್ನು ಗುರಿಯಾಗಿ ಇರಿಸಿಕೊಂಡ ಪ್ರೀತಿ ಕ್ಷಣಿಕವಾದದ್ದು. ಅದು ಶಾಶ್ವತವಲ್ಲ. ಹೀಗಾಗಿ ಒಂದರ್ಥದಲ್ಲಿ ಅದು ಪ್ರೀತಿಯೇ ಅಲ್ಲ. ನಿಜವಾದ ಪ್ರೀತಿ ದೈಹಿಕ ಕಾಮನೆಗಳನ್ನು ಮೀರಿದ್ದು. ಅದಕ್ಕೆ ವಯಸ್ಸಿನ ಹಂಗಿಲ್ಲ, ಜಾತಿಗಳ ಬೇಲಿಯಿಲ್ಲ, ಲಿಂಗಗಳ ಬಂಧನವೂ ಇಲ್ಲ. ಅದು ಪ್ರೀತಿಪಾತ್ರನಿಂದ ಏನನ್ನೂ ಬಯಸುವುದಿಲ್ಲ. ಅಷ್ಟೇ ಏಕೆ, ತಾನು ಪ್ರೀತಿಸುತ್ತಿರುವ ಜೀವ ಪ್ರತಿಯಾಗಿ ತನ್ನನ್ನು ಪ್ರೀತಿಸುತ್ತಿದೆಯೇ ಇಲ್ಲವೇ ಎಂದು ಕೂಡ ಲೆಕ್ಕಿಸುವುದಿಲ್ಲ. ನಿಜವಾದ ಪ್ರೀತಿಗೆ ಗೊತ್ತಿರುವುದು ಕೇವಲ ಪ್ರೀತಿ ಮಾತ್ರ. ಅದು ಅಷ್ಟೊಂದು ದೈವಿಕವಾದದ್ದು!

ಪ್ರೀತಿಯ ಅಭಿವ್ಯಕ್ತಿಯ ವಿರಾಡ್ರೂಪ
ಕಾಲೇಜು ದಿನಗಳಲ್ಲಿ ಹುಡುಗರು ಹೇಗೆಲ್ಲ ಸಾಧ್ಯವೋ ಅವೆಲ್ಲ ರೀತಿಯಲ್ಲೂ ಪ್ರೀತಿಯನ್ನು ತೋರ್ಪಡಿಸಿಕೊಳ್ಳುತ್ತಾರೆ. ಅವಳಿಗೆ ಏನಿಷ್ಟವೋ ಅದೇ ಅವರಿಗೂ ಇಷ್ಟ. ಅವಳಿಗೆ ಮೀಸೆ ಇಷ್ಟ ಇಲ್ಲ ಅಂದರೆ, ಅದಕ್ಕೆ ಕತ್ತರಿ ಬೀಳುತ್ತದೆ. ಪ್ರೀತಿ ಯಾರನ್ನು ಹೇಗೆ ಬೇಕಾದರೂ ಬದಲಾಯಿಸುತ್ತದೆ, ಪ್ರೀತಿಗೆ ಅಷ್ಟು ತಾಕತ್ತಿದೆ. ಕೆಲವು ಮನಸ್ಸುಗಳು ತೋರ್ಪಡಿಕೆಗೆ ಪ್ರಾಮುಖ್ಯ ಕೊಡುವುದಿಲ್ಲ. ಏನನ್ನೂ ಹೇಳಿಕೊಳ್ಳದಿದ್ದರೂ ಅವರವರ ಪ್ರೀತಿ ಅವರವರಿಗೆ ಅರ್ಥವಾಗುತ್ತದೆ. ಆದರೆ ಅನೇಕರಿಗೆ ಬಾಯಿಬಿಟ್ಟು ಹೇಳದಿದ್ದರೆ ಏನೂ ಅರಿವಾಗುವುದಿಲ್ಲ. ಕೆಲವು ಬಾರಿ ಒಂದು ಸಲ ಹೇಳಿದರೂ ಅರ್ಥವಾಗುವುದು ಕಷ್ಟವೇ; ಪದೇ ಪದೇ ಹೇಳಿದ್ದನ್ನೇ ಹೇಳಿ ಹೇಳಿ ಸ್ಪಷ್ಟಪಡಿಸಬೇಕು.

ಕೆಲವು ಹೆಂಗಸರ ಕೊರಗು ಏನೆಂದರೆ, ‘ನನ್ನ ಗಂಡ ನನ್ನ ಬಳಿ ಪ್ರೀತಿಯನ್ನು ವ್ಯಕ್ತಪಡಿಸುವುದೇ ಇಲ್ಲ, ಯಾವಾಗಲೂ ಕೆಲಸ – ಜವಾಬ್ದಾರಿಗಳಲ್ಲಿ ಬಿಝಿಯಾಗಿರುತ್ತಾರೆ. ನಾನು ಕೂಡ ಅವನ ಜೀವನದಲ್ಲಿ ಬಹಳ ಮುಖ್ಯ ತಾನೆ? ಹಾಗಾದರೆ ಯಾಕೆ ನನಗೆ ಗಿಫ್ಟ್ಗಳನ್ನು ತಂದುಕೊಡುವುದಿಲ್ಲ? ಬಾಯಿಬಿಟ್ಟು ಪ್ರೀತಿಯಿಂದ ಮುದ್ದು ಮಾಡುವುದಿಲ್ಲ? ಜಗತ್ತಿನಲ್ಲಿ ನಿನ್ನೊಬ್ಬಳನ್ನೇ ಪ್ರೀತಿಸುವುದು ಅಂತ ಹೇಳಿಕೊಳ್ಳುವುದಿಲ್ಲ?’ ಈ ಪ್ರಶ್ನೆಗಳು ಹೆಂಗಸರ ತಲೆ ಕೆಡಿಸಿದರೆ, ಗಂಡಸರು ಹೇಳುವುದಿಷ್ಟೆ, ‘ನಾವು ದಿನಪೂರ್ತಿ ದುಡಿಯುವುದೇ ಅವರಿಗೋಸ್ಕರ. ನಮ್ಮ ಆಸೆಗಳನ್ನು, ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಹೆಂಡತಿ ಮಕ್ಕಳ ಆಸೆಗಳನ್ನು ಪೂರೈಸುತ್ತೇವೆ. ನಮ್ಮ ಪ್ರೀತಿಯನ್ನು ನಾವು ಅಭಿವ್ಯಕ್ತಿಪಡಿಸುವ ದಾರಿ ಅದುವೇ. ಅದನ್ನೆಲ್ಲ ನೋಡಿಯೇ ಅವರಿಗೆ ಗೊತ್ತಾಗಬೇಕು, ನಾವು ನಮ್ಮ ಹೆಂಡತಿ ಮಕ್ಕಳನ್ನು ಎಷ್ಟು ಪ್ರೀತಿಸುತ್ತೇವೆ ಅಂತ. ಬಾಯಿಬಿಟ್ಟು ಹೇಳಿಕೊಂಡರಷ್ಟೇ ಪ್ರೀತಿಸುತ್ತಿದ್ದೇವೆ ಅಂತ ಅರ್ಥವಾ?’ ‘ಬಾಯಿಬಿಟ್ಟು ಪ್ರೀತಿಯನ್ನು ವ್ಯಕ್ತಪಡಿಸಿದರೆ ನೀವು ಕಳೆದುಕೊಳ್ಳುವುದಾದರೂ ಏನು’ ಅನ್ನುತ್ತಾರೆ ಇವರು. “ನನ್ನ ವ್ಯಕ್ತಿತ್ವವೇ ಹಾಗೆ, ನಾನಿರುವುದೇ ಹಾಗೆ. ನಿನಗೆ ಗೊತ್ತಿದೆಯಲ್ಲ, ನಾನು ಜಾಸ್ತಿ ಏನನ್ನೂ ಹೇಳಿಕೊಳ್ಳುವುದಿಲ್ಲ’ ಅನ್ನುತ್ತಾರೆ ಅವರು. ‘ನಿಮ್ಮ ವ್ಯಕ್ತಿತ್ವವನ್ನು ನಿಮ್ಮ ಪ್ರೀತಿಗೋಸ್ಕರ ಸ್ವಲ್ಪ ಬದಲಾಯಿಸಿಕೊಂಡು ನಾನು ಆಸೆ ಪಡುವ ತರಹ ಇರಬಹುದಲ್ವಾ’ – ಇವರ ತಗಾದೆ. 

ಪ್ರೀತಿಯನ್ನು  ತೋರ್ಪಡಿಸಿಕೊಳ್ಳುವುದಿಲ್ಲ ಅನ್ನುವುದೇ ಅನೇಕ ಹೆಂಡತಿಯರ ಕೊರಗು. ಹಾಗಾದರೆ ತೋರ್ಪಡಿಸಿಕೊಂಡರಷ್ಟೇ ಪ್ರೀತಿಯೇ ಅನ್ನುವುದು ಪ್ರಶ್ನೆ. ಇಲ್ಲ, ಪ್ರೀತಿಸುವ ಮನಸ್ಸುಗಳು ಪರಸ್ಪರ ಅರ್ಥ ಮಾಡಿಕೊಳ್ಳುತ್ತವೆ. ಆ ಪ್ರೀತಿ ನದಿ ಸರಸ್ವತಿಯ ಹಾಗೆ ಎರಡು ಜೀವಗಳ ನಡುವೆ ಅಂತರ್ಗತವಾಗಿ ಹರಿಯುತ್ತಿರುತ್ತದೆ. ಪ್ರೀತಿಯಲ್ಲಿ ಬಲವಂತವಿರಬಾರದು. ಯಾರನ್ನೋ ನಾವು ಪ್ರೀತಿಸುತ್ತಿದ್ದೇವೆ ಅಂತಾದರೆ ಅವರೂ ನಮ್ಮನ್ನು ಪ್ರೀತಿಸಬೇಕು ಅಂತೇನೂ ಇಲ್ಲ. ನಮ್ಮ ಪ್ರೀತಿಯನ್ನು ನಾವು ಹೇಳಿಕೊಳ್ಳುವುದು ನಮ್ಮ ಧರ್ಮವಷ್ಟೇ. ಆ ಅನುಭೂತಿ ಇನ್ನೊಂದು ಕಡೆಯಿಂದಲೂ ವ್ಯಕ್ತವಾಗಬೇಕು ಅಂತ ಕಂಡೀಷನ್‌ ಇರಬಾರದು. ಬೇರೆಯವರು ನಮ್ಮನ್ನು ಪ್ರೀತಿಸುತ್ತಾರೋ ಇಲ್ಲವೋ – ಅದು ಅವರಿಗೆ ಬಿಟ್ಟಿದ್ದು. ನಮಗೆ ನಮ್ಮ ಪ್ರೀತಿ ಮಾತ್ರ ನಿಜ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಹಾಗಾಗಿ ನೀನೂ ನನ್ನನ್ನು ಪ್ರೀತಿಸಲೇಬೇಕು ಅಂತ ಬಲವಂತ ಇಲ್ಲ, ಇರಬಾರದು. ಪ್ರೀತಿ ಅಂತಹ ಪೂರ್ವ ಶರತ್ತಿನ ಮೇಲೆ ನಡೆಯುವಂಥದ್ದಲ್ಲ. ಪ್ರೀತಿಯಲ್ಲಿ ಸಂವಹನ ಬಹಳ ಮುಖ್ಯ. ಏನೇ ಇದ್ದರೂ ಮಾತಿನಲ್ಲೇ ವ್ಯವಹರಿಸಬೇಕು. ಪ್ರೀತಿ ಕಣ್ಣಿನಲ್ಲೇ ಶುರುವಾದರೂ ಅದನ್ನು ಮಾತಿನ ಮೂಲಕ ಹೇಳಿಕೊಂಡರೆ ಒಳ್ಳೆಯದು.

ಕೆಲವರು ಗಿಫ್ಟ್ ಕೊಡುವುದರ ಮೂಲಕ ಪ್ರೀತಿಯನ್ನು ರವಾನಿಸುತ್ತಾರೆ, ಇನ್ನು ಕೆಲವರು ಹೂಗುಚ್ಛ ಕಳಿಸುತ್ತಾರೆ, ಮತ್ತೆ ಕೆಲವರು ಪತ್ರ ಬರೆದು ಎಲ್ಲವನ್ನೂ ತಿಳಿಸುತ್ತಾರೆ, ಈಗಂತೂ ವಾಟ್ಸಪ್‌, ಮೆಸೇಜ್‌, ಈಮೈಲ್‌ ಮೂಲಕ ಪ್ರತಿಕ್ಷಣದ ಭಾವನೆಗಳನ್ನು ಒಂದರ ಮೇಲೊಂದರಂತೆ ತಿಳಿಸುತ್ತಾರೆ. ಇವೆಲ್ಲ ಪ್ರೀತಿ ಅಭಿವ್ಯಕ್ತಿಯ ಬೇರೆ ಬೇರೆ ವಿಧಾನಗಳಾದರೂ ಪ್ರೀತಿಪಾತ್ರನ ಅಥವಾ ಪ್ರೀತಿಪಾತ್ರಳ ಮುಂದೆ ಕುಳಿತು ಮುಖತಃ ತನ್ನ ಪ್ರೀತಿಯನ್ನು ಮಾತುಗಳ ಮೂಲಕ ತಿಳಿಸುವುದೇ ಪ್ರೀತ್ಯಭಿವ್ಯಕ್ತಿಯ ಅತ್ಯುತ್ತಮ ವಿಧಾನ.

– ರೂಪಾ ಅಯ್ಯರ್‌ ; roopaiyer.ica@gmail.com

Advertisement

Udayavani is now on Telegram. Click here to join our channel and stay updated with the latest news.

Next