ಉಡುಪಿಯ ಪೂರ್ಣಪ್ರಜ್ಞ ಸಭಾಂಗಣ ದಲ್ಲಿ ತೆಂಕುತಿಟ್ಟಿನ ಕಲಾವಿದರಿಂದ ಜು.7ರಂದು”ಉಪನಿಷದಯನ’ ಎಂಬ ನೂತನ ಪ್ರಸಂಗ ಪ್ರದರ್ಶನಗೊಂಡಿತು.
“ಉಪನಿಷತ್-ಅಯನ’ ಎಂದರೆ ಉಪನಿಷತ್‌ಗಳ ಸುತ್ತ ಸಂಚಾರ. ಉಪನಿಷತ್ತುಗಳು ವೇದದ ಕೊನೆಯ ಭಾಗವಾದ ಜ್ಞಾನ ಕಾಂಡ. ಇದು ಇಹದ ಬದುಕಿಗೆ ಪರದ ಚಿಂತನೆಯನ್ನು ತಿಳಿಯ ಹೇಳುವ ಎಚ್ಚರದ ಪಥ. ಉಪನಿಷತ್ತು ಎಂದರೆ ಆತ್ಮ ವಿದ್ಯೆ, ರಹಸ್ಯ ವಿದ್ಯೆಯೆನ್ನುತ್ತದೆ ನಿಘಂಟು. ಇದು ಆಧ್ಯಾತ್ಮ ವಿದ್ಯೆ. “ವಿದಾಯನಾಂ ಆಧ್ಯಾತ್ಮ ವಿದ್ಯಾ’ ಎಂದು ಸೀತೆಯಲ್ಲಿ ಕೃಷ್ಣ ಹೇಳಿದ ವಿಭೂತಿ ಯೋಗದ ಮಾತು. ಒಮ್ಮೆ ಉಪನಿಷತ್ ಪ್ರಪಂಚವನ್ನು ಪ್ರವೇಶಿಸಿದರೆ ಹಿಂದಿರುಗಬೇಕೆಂದು ಅನ್ನಿಸುವುದಿಲ್ಲ. ಅಲ್ಲಿರುವ ನಿರತಿಶಯನಂದವೇ ಇದಕ್ಕೆ ಕಾರಣ.
“ಉಪನಿಷದಯನ’ ಕಠೊಪನಿಷತ್ತು, ಬೃಹದಾರಣ್ಯಕೋಪನಿಷತ್ತು ಮತ್ತು ಕೇನೋಪನಿಷತ್ತುಗಳ ಸುತ್ತ ಸಂಚರಿಸುವ ಕಥಾ ಸಂಕಲನ. ಮೊದಲ ಕತೆಯೇ ನಚಿಕೇತನಿಗೆ ಸಂಬಂಧಿಸಿದುದು. ನಚಿಕೇತನ ತಂದೆ ವಾಜಸ್ರವ ವಿಶ್ವಜಿದ್ಯಾಂತಯಾಗ ಕೈಗೊಂಡು ಕೊನೆಯಲ್ಲಿ ನಿರುಪಯೋಗಿ ಧೇನುಗಳನ್ನು ದಾನ ಮಾಡುತ್ತಾನೆ. ಇದು ನಚಿಕೇತನಿಗೆ ಸರಿ ಕಾಣುವುದಿಲ್ಲ. ದಾನವಾಗಿ ನೀಡಬೇಕಾದುದು ತನಗೆ ಪ್ರಿಯವಾದುದು. ಹೀಗಾಗಿ ನಚಿಕೇತ ಅಪ್ಪಾ ನನ್ನನ್ನು ಯಾರಿಗೆ ದಾನ ಕೊಡುತ್ತಿ ಎನ್ನುತ್ತಾನೆ – ಒಂದಲ್ಲ ಮೂರು ಸಲ. ವಾಜಗ್ರವ ಕ್ರೋಧಾವಿಷ್ಟನಾಗಿ ನಿನ್ನನ್ನು ಯಮನಿಗೆ ಕೊಡುತ್ತೇನೆ ಎನ್ನುತ್ತಾನೆ. ನಚಿಕೇತ ಹೊರಟ. ಯಮಧರ್ಮನ ಮನೆಯ ಬಾಗಿಲಲ್ಲಿ ನಿಂತ. ಯಮ ಮನೆಯಲ್ಲಿಲ್ಲದಿರಲು, ಯಮನ ಪತ್ನಿಯಾದ ಶ್ಯಾಮಲೆ ಅತಿಥಿಯನ್ನು ಸ್ವಾಗತಿಸಲು ಬರುತ್ತಾಳೆ. ನಚಿಕೇತ ಯಮಧರ್ಮನೇ ಬರಬೇಕೆಂದು ತನ್ನ ಅಚಲ ನಿರ್ಧಾರ ಹೇಳಿದ. ಮೂರು ದಿನ ಉಪವಾಸ ನಚಿಕೇತ. ಆ ಯಮನೇ ಬಂದು ಸ್ವಾಗತಿಸಿ ಒಳಗೆ ಕರೆದೊಯ್ದು ಮೂರು ದಿನ ಉಪವಾಸಕ್ಕೆ ಗುರಿಪಡಿಸಿದ ತಪ್ಪಿಗಾಗಿ “ಮೂರು ವರ ಕೊಡುತ್ತೇನೆ’ ಕೇಳು ಎಂದ. ಇಲ್ಲಿ ಮೂರನೆಯ ವರವೇ ಮುಖ್ಯವಾದುದು. ಜನನ ಮರಣದ ನಡುವಿನ ಬದುಕು. ಆತ್ಮ ಪರಮಾತ್ಮರ ಜಿಜ್ಞಾಸೆ “ಮರಣದಿಂ ಮುಂದೇನು?’ ಎಂಬ ಪ್ರಶ್ನೆ ನಚಿಕೇತನನ್ನು ಸ್ವಾರಸ್ಯವೂ ಸ್ವ-ರಹಸ್ಯವೂ ಆದ ಪ್ರಶ್ನೆ. ಪ್ರೇಕ್ಷಕರು ಮೈಯೆಲ್ಲ ಕಣ್ಣಾಗಿ, ಕಿವಿಯಾಗಿ ನೋಡುತ್ತಿದ್ದರು. ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಸುಣ್ಣಂಬಳ ವಿಶ್ವೇಶಭಟ್ಟರ ಯಮ, ಅಮ್ಮುಂಜೆ ಮೋಹನಕುಮಾರರ ನಚಿಕೇತ. ನಚಿಕೇತನಿಂದ ಪ್ರಶ್ನೆಯ ಮೇಲೆ ಪ್ರಶ್ನೆ, ಯಮ “ಮರಣದಿಂ ಮುಂದೇನು’ ಎಂಬ ತಿಳಿವಿನ ಬದಲಾಗಿ ಅತಿ ಆಮಿಷಗಳನ್ನು ಒಡ್ಡುತ್ತಾನೆ. ನಚಿಕೇತ ನಶ್ವರವಾದ ಭೋಗ ಭಾಗ್ಯ ನನಗೆ ಬೇಕಿಲ್ಲ. ನನಗೆ ಬೇಕಾದುದು ಆತ್ಮವಿದ್ಯೆಯೆನ್ನುತ್ತಾನೆ. ಕೊನೆಗೂ ಗೆದ್ದವನು ನಚಿಕೇತ. ಯಮ ಆತ್ಮವಿದ್ಯೆಯನ್ನು ತಿಳಿಸುತ್ತಾನೆ. ನಚಿಕೇತ “ನಾಚಿಕೇತಾಗ್ನಿ’ಯೊಂದಿಗೆ ಹಿಂದಿರುಗಿ ಬರುತ್ತಾನೆ. – ಬೆಳಕು ತಂದ ಬಾಲಕನಾಗಿ. ಯಮನ ಪತ್ನಿ ಶ್ಯಾಮಲೆಯಾಗಿ ಅಂಬಾ ಪ್ರಸಾದರು ಮಿತಾವಕಾಶದಲ್ಲಿ ಎಚ್ಚರದ ಮಾತಾಡಿದರು. ರವಿ ಮುಂಡಾಜೆಯವರ ಅಗ್ನಿ -ರಗ್ನದಲ್ಲಿ ಅಗ್ನಿ ಶಿಖೆಯಾಗಿ ಗಮನ ಸೆಳೆಯಿತು. ಪೋಷಕ ಪಾತ್ರಗಳು ಒಟ್ಟಂದಕ್ಕೆ ನೆರವಾದವು. ಮುಂದಿನ ಭಾಗವೇ ವೈಶಂಪಾಯನ, ಯಾಜ್ಞವಲ್ಕ, ಮೈತ್ರೇಯಿ, ದೇವರಾತ, ಮಧುದಾನವರ ಸುತ್ತ ಹೆಣೆದುದು. ವೈಶಂಪಾಯನನಾಗಿ ಕೆ. ಗೋವಿಂದ ಭಟ್ಟರು ಗಮನ ಸೆಳೆದರು. ವಾಟೆಪಡು³ ವಿಷ್ಣು ಶರ್ಮ ಯಾಜ್ಞವಲ್ಕನಾಗಿ, ಮಹೇಶ್ ಸಾಣೂರು ಮೈತ್ರೇಯಿಯಾಗಿ ಹಿತಮಿತವಾಗಿ ಪಾತ್ರ ಪೋಷಣೆ ಮಾಡಿದರು. ಹರಿನಾರಾಯಣ ಎಡನೀರು ಅವರ ಮಧು ದಾನವ ಪರಂಪರೆ ಸೊಗಡನ್ನು, ಸೊಬಗನ್ನು ತೋರಿ ಮೆರೆದರು. ರಾಜರ್ಷಿ ಜನಕನ ಪಾತ್ರದಲ್ಲಿ ರವಿರಾಜ ಪನೆಯಾಲ ಉದ್ದಕ್ಕೂ ಪಾತ್ರದ ಘನತೆ, ಮಾತಿನ ವಿದ್ವತ್ತೆಯಿಂದ ಸೈಯೆನಿಸಿಕೊಂಡರು. “ಜನಕನ ಕನಸು’ ಆಧ್ಯಾತ್ಮ ಚಿಂತನೆಯ ಕಥಾನಕ. “ಅದು ಸತ್ಯವೋ, ಇದು ಸತ್ಯವೋ ಎಂಬ ಜಿಜ್ಞಾಸೆ ಅತ್ಯಂತ ಕುತೂಹಲಕಾರಿಯಾದುದು. ಇಲ್ಲಿ ಬರುವ ಕಹೋಳ (ಮುನಿ), ಸುಜಾತೆ (ಮುನಿ ಪತ್ನಿ), ಅಷ್ಟಾವಕ್ರ ಪಾತ್ರಗಳು ಗಮನಾರ್ಹವಾದವುಗಳು. ಕಹೋಳನಾಗಿ ಉಬರಡ್ಕ ಉಮೇಶ್ ಶೆಟ್ಟಿ ಪಾತ್ರ ಗೌರವ ತೋರಿದರು. ಕಹೋಳ – ಸುಜಾತೆಯರ ದಾಂಪತ್ಯ – ಸುಜಾತೆಯಾಗಿ ಶಶಿಕಾಂತ ಶೆಟ್ಟಿ ಕಾರ್ಕಳ. ಮಧುರದಾಂಪತ್ಯದಲ್ಲಿರುತ್ತ ಕಹೋಳ ವೇದಮಂತ್ರ ಹೇಳುತ್ತಿರಲು, ಉಚ್ಚಾರದೋಷ ತಿಳಿದ ಗರ್ಭಸ್ಥ ಶಿಶು ಗಹಗಹನೆ ನಗುತ್ತದೆ. ಇದು ನನಗಾದ ಅವಮಾನವೆಂದು ತಿಳಿದ ಕಹೋಳ ನೀನು “ಅಷ್ಟಾವಕ್ರ’ನಾಗು ಎಂದು ಶಪಿಸುತ್ತಾನೆ. ಹುಟ್ಟಿದ ಮಗು ಅಷ್ಟಾವಕ್ರ. ಅಷ್ಟಾವಕ್ರನ ಪಾತ್ರದಲ್ಲಿ ಲಕ್ಷ್ಮಣ ಕುಮಾರ್ ಮರಕಡ ರಂಗದಲ್ಲಿ ಕೊನೆಯ ತನಕ ತೋರಿದ ಅಭಿನಯ, ಅರ್ಥಗರ್ಭಿತ ಮಾತುಗಳು ಗಮನಾರ್ಹವಾಗಿದ್ದವು. ಶಶಿಕಾಂತ ಶೆಟ್ಟಿಯವರು ಸಮಕಾಲೀನ ಸ್ತ್ರೀ ಪಾತ್ರಧಾರಿಗಳಲ್ಲೇ ಭಾವಾಭಿನಯ ಸೂಕ್ಷ್ಮತೆಯೊಂದಿಗೆ ರಸಾಭಿವ್ಯಕ್ತಿಯಲ್ಲಿ ನಿಷ್ಣಾತರು. ಅಷ್ಟಾವಕ್ರನನ್ನು ಅಪ್ಪಿ ಮುದ್ದಾಡುವಲ್ಲಿನ ತಾಯ್ತನ,ಅದಕ್ಕೆ ಸರಿಯಾಗಿ ಸ್ಪಂದಿಸಿದ ಅಷ್ಟಾವಕ್ರನ ಅಭಿನಯ ಹೃದಯಸ್ಪರ್ಶಿಯಾಗಿತ್ತು. ಭಾವತೀವ್ರತೆಯಿಂದ ರಸಸ್ಪಂದಿಯಾಗಿತ್ತು. ಅಷ್ಟಾವಕ್ರ ಜನಕನಲ್ಲಿಗೆ ಹೋಗಿ ಬಂಧಿಯಾಗಿದ್ದ ತನ್ನ ತಂದೆಯನ್ನು ಬಿಡುಗಡೆ ಮಾಡುವ ಪೂರ್ವಭಾವಿಯಾಗಿ ಜನಕನ ಜಿಜ್ಞಾಸೆಗೆ ನೀಡಿದ ಉತ್ತರ ಮಾರ್ಮಿಕವಾಗಿತ್ತು.
ಉಪನಿಷದಯನದ ಕೊನೆಯ ಭಾಗ ಕೇನೋಪನಿಷತ್ತು (ತಲವಕಾರೋಪನಿಷತ್ತು) ಭಾಗದಿಂದ ಆಯ್ದುಕೊಂಡದ್ದು. ರಾಕ್ಷಸರನ್ನು ನಾವು ಗೆದ್ದೆವು ಎಂಬ ಅಹಂಕಾರ ದೇವತೆಗಳಿಗೆ ಕೆಲವೊಮ್ಮೆ ದೇವತೆಗಳನ್ನು ನಾವು ಸೋಲಿಸಿದೆವು ಎಂಬ ಅಹಂಕಾರ ದಾನವರಿಗೆ. ಇವರ ಅಹಂಕಾರ ನಿರೂಲನವಾಗಿ ಪರಬ್ರಹ್ಮ ಯಕ್ಷನಾಗಿ ಪ್ರಕಟವಾದಾಗ, ಇಬ್ಬರ ಅಹಂಕಾರದ ನಾಶವಾಗುತ್ತಲೇ , ಅಹಂಕಾರದ ನಾಶವಾದಲ್ಲದೆ ನಿಜತ್ವದ ಪ್ರಾಪ್ತಿಯಿಲ್ಲ ಎಂಬ ಸಂದೇಶ ಉಪನಿಷತ್ ಸಂದೇಶ. ಉಲ್ಲೇಖೀಸಬೇಕಾದುದು ತೀರ ಅಪೂರ್ವವೆನಿಸುವ “ಯಕ್ಷ’ ಪಾತ್ರ ಚಿತ್ರಣ. ಈ ಪಾತ್ರದಲ್ಲಿ ಸುಬ್ರಾಯ ಹೊಳ್ಳರು ತೋರಿದ ಮುಖವರ್ಣಿಕೆ, ಅಭಿನಯ ಪ್ರಶಂಸನೀಯವಾದುದು. ಉಳಿದಂತೆ ಸಪ್ತದಿಕಾ³ಲಕರು ಪಂಚದಾನವರು, ಪರಂಪರೆಯ ವೇಷದೊಂದಿಗೆ ರಂಗಕ್ಕೆ ಮೆರುಗಿತ್ತರು.
ಇಡಿಯ ಪ್ರದರ್ಶನದಲ್ಲಿ ಎಲ್ಲಿಯೂ ಅಸಂಬದ್ಧತೆ ಕಾಣಿಸಿಕೊಳ್ಳಲಿಲ್ಲ. ಇದು ಮೆಚ್ಚಬೇಕಾದ ಅಂಶ. ಆದರೆ ಇದು ಸುಲಭಸಾಧ್ಯವಲ್ಲ. ಉಪನಿಷತ್ತಿನ ಪ್ರವೇಶವಿಲ್ಲದೆ, ಅಧ್ಯಯನವಿಲ್ಲದೆ, ಚಿಂತನೆಯಿಲ್ಲದೆ ಫಲಪ್ರದವಲ್ಲ. ಪರಂಪರೆಯ ಯಕ್ಷಗಾನ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗುವಂಥ ಪ್ರಸಂಗ ಮತ್ತು ಪ್ರದರ್ಶನ ಉಪನಿಷದಯನ.
ಹಿಮ್ಮೇಳದಲ್ಲಿ ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆನ್ನಯ ಕಲ್ಲಡ್ಕ, ದೇವರಾಜ ಕಟೀಲು, ಚಂಡೆ – ಮದ್ದಳೆ ವಾದಕರಾಗಿ ಪದ್ಯಾಣ ಶಂಕರನಾರಾಯಣ ಭಟ್, ಚೈತನ್ಯಕೃಷ್ಣ ಪದ್ಯಾಣ, ಐಲ ಲವಕುಮಾರ್, ಮಯೂರ ಕೋಟೆಕಾರ್ ಪ್ರದರ್ಶನದ ಒಟ್ಟಂದಕ್ಕೆ ಕಾರಣರೆಂಬುದರಲ್ಲಿ ಎರಡು ಮಾತಿಲ್ಲ.
ಅಂಬಾತನಯ ಮುದ್ರಾಡಿ