Advertisement

ಮಾದರಿ ಶಾಲೆಯ ಮೋಹಕ ತೋಟ: ಪೇಟೆಗೂ ತರಕಾರಿ ಮಾರಾಟ

08:00 AM Jul 23, 2017 | |

ಕಾರ್ಕಳ: ಈ ಶಾಲೆಯಲ್ಲಿ ವಿದ್ಯಾರ್ಥಿಗಳೇ ಪ್ರಗತಿಪರ ಕೃಷಿಕರಂತೆ ಕಾಣುತ್ತಾರೆ.ಅವರು ಶಾಲೆಯಲ್ಲಿ ಓದು,ಪಾಠ,ಅಂತೆಲ್ಲಾ ತೊಡಗಿಕೊಂಡರೂ ಶಾಲೆಯ ಹಸಿರು ನೋಟದ ತೋಟ ಅವರನ್ನು ಕೈ ಬೀಸಿ ಕರೆಯುತ್ತದೆ. ಅಲ್ಲಿ ತಾವೇ ನೆಟ್ಟ ಗಿಡದಲ್ಲಿ ಅರಳುತ್ತಿರುವ ಪಪ್ಪಾಯಿ ಹಣ್ಣು  ಯಾವಾಗ ಹಣ್ಣಾಗುತ್ತದೆ,ಬಸಳೆ ಸೊಪ್ಪು ಹೇಗೆ ಬೆಳೆಯುತ್ತದೆ ಎನ್ನುವ ಕೂತೂಹಲ ಶಾಲೆಯ ಪುಟ್ಟ ಮಕ್ಕಳದ್ದು. ಈ ಶಾಲೆಯಲ್ಲಿ  ವಿದ್ಯಾರ್ಥಿಗಳಿಗೆ ಪಾಠ ಮಾತ್ರವಲ್ಲ. ತಾವೇ ಬೆಳೆದ ತರಕಾರಿಯ ಊಟವೂ ಅವರ ಹೊಟ್ಟೆಯನ್ನು ತಂಪಾಗಿಸುತ್ತಿದೆ. ಆನೆಕೆರೆ ರಾಮಪ್ಪ ಅ.ಹಿ.ಪ್ರಾ. ಶಾಲೆಯ ಕತೆಯಿದು.


ಮಾದರಿ ಶಾಲೆಯ ಮೋಹಕ ತೋಟ
ಶಾಲೆಯ ಮುಂದಿರುವ ವಿಶಾಲವಾದ ಜಾಗದಲ್ಲಿರುವ ಈ ಮೋಹಕ ತೋಟದಲ್ಲಿ ಪಪ್ಪಾಯಿ, ಗೆಣಸು, ಸಿಹಿ ಗೆಣಸು, ಅಲಸಂಡೆ, ಬೂದುಕುಂಬಳ, ತೊಂಡೆ, ಸೌತೆ, ಬದನೆ, ಬಾಳೆ, ಬಸಳೆ, ಅನಾನಾಸು ಮೊದಲಾದ ಹಣ್ಣು ತರಕಾರಿಗಳು ನಳನಳಿಸುತ್ತಿವೆ. ಕಾರ್ಕಳ ರೊಟೇರಿಯನ್‌ ಸಂಸ್ಥೆಯ ಆಶಯ ಹಾಗೂ ಬೆಂಬಲದಿಂದ ಶುರುವಾದ ಈ ತೋಟ ಹಿಂದೆ ಶಾಲಾ ಅಧ್ಯಾಪಕರಾಗಿದ್ದ   ಶ್ರೀಧರ ಸುವರ್ಣ ಅವರ  ಪರಿಶ್ರಮದಿಂದ ಮಾದರಿ ತೋಟವಾಯಿತು. ತೋಟಗಾರಿಕಾ ಇಲಾಖೆ ಹಾಗೂ ಸ್ಥಳೀಯರು ಶಾಲೆಗೆ ತರಕಾರಿ ಬೀಜ ಹಾಗೂ ಗಿಡಗಳನ್ನು ಒದಗಿಸಿದರೆ,ಶಾಲಾ ಹಳೆ ವಿದ್ಯಾರ್ಥಿಗಳು ಆ ಗಿಡಗಳಿಗೆ ಬೇಕಾದ ಫಲವತ್ತಾದ ಎರೆಹುಳ ಗೊಬ್ಬರವನ್ನು ಒದಗಿಸಿ ಮಾದರಿ ಕೈತೋಟವಾಗಿಸಲು ಸಾಥ್‌ ಕೊಟ್ಟರು.ಅಲ್ಲದೇ ಶಾಲಾ ಶಿಕ್ಷಕರು ಕೂಡ ಗಿಡಗಳನ್ನು ತಂದು ಶಾಲಾ ತೋಟದಲ್ಲೇ ನೆಟ್ಟರು, ವಿವಿಧ ಜಾತಿಯ ಗಿಡಗಳಿಗೆ ತೋಟದಲ್ಲಿ  ಆಶ್ರಯ ನೀಡಿದರು. ಅದರ ಫಲವಾಗಿ ಶಾಲಾ ತೋಟದಲ್ಲಿ ತರಕಾರಿ ಹಾಗೂ ಹಣ್ಣುಗಳ ಸುಗ್ಗಿ ಶುರುವಾಯಿತು.

Advertisement

ಹಸಿರಿನ ಪಾಠ; ತರಕಾರಿ ಊಟ ಪೇಟೆಗೂ ತರಕಾರಿ ಮಾರಾಟ
ಶಾಲಾ ತೋಟವನ್ನು ನಿರ್ವಹಣೆ ಮಾಡಲು ಕೂಲಿಯಾಳುಗಳನ್ನು ನೇಮಿಸಿದ್ದರೂ,ತೋಟವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಲು ಗಿಡಗಳನ್ನು ನೆಡಲು ಬೀಜಗಳನ್ನು ಬಿತ್ತಲು ವಿದ್ಯಾರ್ಥಿಗಳ ವಿವಿಧ ತಂಡಗಳನ್ನು ಮಾಡಲಾಗಿದೆ.


ವಿದ್ಯಾರ್ಥಿಗಳೇ ದಿನಂಪ್ರತೀ ಗಿಡಗಳ ಬೆಳವಣಿಗೆಯನ್ನು ನೋಡುತ್ತಾರೆ, ಗೊಬ್ಬರ ಹಾಕುತ್ತಾರೆ, ಸುತ್ತಲೂ ಹರಡಿದ ಕಳೆಗಳನ್ನು ಕಿತ್ತು ತೋಟವನ್ನು ಶುಚಿಯಾಗಿಸುತ್ತಾರೆ. ತೋಟದಲ್ಲಿ ರಾಸಾಯನಿಕದ ಹಂಗಿಲ್ಲದೇ ಸಿಗುವ ತರಕಾರಿಯನ್ನೇ ಶಾಲಾ ಬಿಸಿಯೂಟಕ್ಕೆ ಬಳಸಿ, ಉಳಿದ ತರಕಾರಿಯನ್ನು  ಪೇಟೆಗೂ ಮಾರಾಟ ಮಾಡಿ ಆ ಹಣದಿಂದ ಶಾಲೆಗೆ ಬೇಕಾದ ಅಡುಗೆ ಸಲಕರಣೆಗಳನ್ನು ಖರೀದಿಸಲಾಗುತ್ತದೆ. ಊಟದ ನಂತರ ಮಕ್ಕಳಿಗೆ ಇಲ್ಲಿನ ಹಣ್ಣುಗಳದ್ದೇ ಫಲಾಹಾರ. ಮಕ್ಕಳ ಮನೆಯ ವರೂ ಕೂಡ ಪೇಟೆಯಲ್ಲಿ ತರಕಾರಿ ಖರೀದಿ ಸುವ ಬದಲು ಶಾಲೆಯಲ್ಲೇ ಕಡಿಮೆ ಕ್ರಯಕ್ಕೆ ತರಕಾರಿ ಯನ್ನು ಕೊಂಡುಕೊಳ್ಳುವುದು ಇಲ್ಲಿನ ವಿಶೇಷ.ಶಾಲಾ ಶಿಕ್ಷಕ ಸುಧಾಕರ ಅತ್ತೂರು ಮಕ್ಕಳಿಗೆ ಹಸಿರ ಪಾಠವನ್ನೂ, ಸಾವಯವ ಕೃಷಿಯ ಕುರಿತ ಕಾಳಜಿಯನ್ನೂ ಮೂಡಿಸುತ್ತಿದ್ದಾರೆ.

ಒಟ್ಟಾರೆ ವಿದ್ಯಾರ್ಥಿಗಳಿಗೆ ಬರೀ ಪಾಠದಲ್ಲಿ ಮಾತ್ರ ಕಳೆದು ಹೋಗಲು ಬಿಡದೇ ಹಸಿರಿನ ಪಾಠವನ್ನೂ ಕಲಿಸಿಕೊಡುತ್ತಿರುವ ರಾಮಪ್ಪ ಶಾಲೆ ತರಕಾರಿ ತೋಟಕ್ಕೊಂದು ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.

ಮಕ್ಕಳಿಗೆ ಪಾಠದ ಜೊತೆ ಸ್ವಾವಲಂಬಿಯಾಗಿ ಬದುಕು ವುದನ್ನೂ ಕಲಿಸಬೇಕು ಎನ್ನುವ ಉದ್ದೇಶ ತರಕಾರಿ ತೋಟದ್ದು. ಎಲ್ಲ ವಿದ್ಯಾರ್ಥಿಗಳು ತೋಟದ ಕೆಲಸದಲ್ಲಿ ಸಕ್ರಿಯವಾಗಿ ಭಾಗವ ಹಿಸುತ್ತಾರೆ. ಎರೆಹುಳ ಗೊಬ್ಬರದ ಸಣ್ಣ ಘಟಕವನ್ನೂ ಶಾಲೆಯಲ್ಲಿ ಆರಂಭಿಸಿ ಗೊಬ್ಬರ ತಯಾರಿಯನ್ನೂ ಹೇಳಿಕೊಡುವ ಯೋಜನೆ ಯನ್ನೂ ಮುಂದಿನ ದಿನಗಳಲ್ಲಿ ಮಾಡುವ ಗುರಿ ಇದೆ.
-ಸುಧಾಕರ ಅತ್ತೂರು, 
ಶಾಲಾ ಸಹಶಿಕ್ಷಕ

– ಪ್ರಸಾದ್‌ ಶೆಣೈ ಕಾರ್ಕಳ

Advertisement
Advertisement

Udayavani is now on Telegram. Click here to join our channel and stay updated with the latest news.

Next