Advertisement

ಶಿಕ್ಷಕರಿಲ್ಲದೆ ಮುಚ್ಚುವ ಹಂತದಲ್ಲಿ ಮಾದಕಟ್ಟೆ ಹಿ.ಪ್ರಾ.ಶಾಲೆ !

03:25 AM Jul 16, 2017 | |

ವಿಟ್ಲ: ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಮಾದಕಟ್ಟೆ ಅನುದಾನಿತ ಹಿ.ಪ್ರಾ.ಶಾಲೆ ಬಾಗಿಲು ಹಾಕಿಕೊಳ್ಳುವ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ ಮಕ್ಕಳಲ್ಲ, ಶಿಕ್ಷಕರ ಕೊರತೆ ! 

Advertisement

ಎಲ್ಲಿದೆ ?
ಕೊಳ್ನಾಡು ಗ್ರಾಮದ ಮಾದಕಟ್ಟೆಯಲ್ಲಿ ಈ ಶಾಲೆಯಿದೆ. ಕುಡ್ತಮುಗೇರಿನಿಂದ ಕರೈ ಮೂಲಕ  ತೆರಳುವ ರಸ್ತೆಯಲ್ಲಿ ಸಾಗಿದಾಗ ತೀರಾ ಹಿಂದುಳಿದ ಹಳ್ಳಿ ಭಾಗದಲ್ಲಿ ಈ ಶಾಲೆಯಿದೆ. ಸುತ್ತಮುತ್ತಲು ನೂರಾರು ಕುಟುಂಬಗಳಿವೆ. ಇಲ್ಲಿನ ಅನೇಕ ಮಕ್ಕಳು ಇದೇ ಭಾಗದಿಂದ ಹೊರಗೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕಾಗಿ ತೆರಳುತ್ತಾರೆ. ಆದರೂ ಈ ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳ ಸಂಖ್ಯೆ ಕೊರತೆಯಾಗಿಲ್ಲ.

ಪ್ರಸ್ತುತ 44 ಮಕ್ಕಳು 1ರಿಂದ 7ನೇ ತರಗತಿವರೆಗೆ 44 ಮಕ್ಕಳು ಇಲ್ಲಿ  ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಮುಖ್ಯೋಪಾಧ್ಯಾಯ ಎಂ. ಈಶ್ವರ ಭಟ್‌ ಇವರ ಜತೆ ನಾಲ್ವರು ಗೌರವ ಶಿಕ್ಷಕಿಯರಿದ್ದಾರೆ. ಗೌರವ ಶಿಕ್ಷಕಿಯರಲ್ಲಿ ಒಬ್ಬರಿಗೆ ಮುಖ್ಯೋಪಾಧ್ಯಾಯ ಈಶ್ವರ ಭಟ್‌ ಅವರೇ ಗೌರವಧನ ನೀಡುತ್ತಾರೆ. ಇನ್ನೊಬ್ಬರಿಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪಡಾರು ಶ್ರೀಕಾಂತ ಭಟ್‌, ಮತ್ತೂಬ್ಬರಿಗೆ ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆ ಹಾಗೂ ಇನ್ನೊಬ್ಬರಿಗೆ ಸಾರ್ವಜನಿಕರ ಸಹಕಾರದಿಂದ ಗೌರವಧನ ನೀಡಲಾಗುತ್ತದೆ.

ಜುಲೈ ಕೊನೆಗೆ ನಿವೃತ್ತಿ  ಮುಖ್ಯೋಪಾಧ್ಯಾಯ ಎಂ.ಈಶ್ವರ ಭಟ್‌ ಅವರು ಜು.31ರಂದು ನಿವೃತ್ತರಾಗಲಿದ್ದಾರೆ. ಅಲ್ಲಿಗೆ ಈಗ ಅಸ್ತಿತ್ವದಲ್ಲಿರುವ ಶಾಲೆಯ ಕೊನೆಯ ಕೊಂಡಿ ಕಳಚಿದಂತಾಗುತ್ತದೆ. ಆಮೇಲೆ ಸರಕಾರದಿಂದ ನೇಮಕವಾಗುವ ಅಧಿಕೃತ ಶಿಕ್ಷಕರಿರುವುದಿಲ್ಲ. ಹೊಸ ನೇಮಕಾತಿ ಇಲ್ಲ. ಬೇರೆ ಶಾಲೆಗಳಿಂದ ಡೆಪ್ಯುಟೇಶನ್‌ ಮಾಡಬಹುದು. ಅಲ್ಲಿನ ಶಾಲೆಗಳಲ್ಲಿರುವ ಶಿಕ್ಷಕರ ಆವಶ್ಯಕತೆಯನ್ನು ಹೊಂದಿಕೊಂಡು ಈ ಶಾಲೆಗೆ ಶಿಕ್ಷಕರನ್ನು ವರ್ಗಾಯಿಸಬೇಕು. ಅನುದಾನಿತ ಶಾಲೆಯಲ್ಲಿ 40 ಮಕ್ಕಳಿಗೆ ಓರ್ವ ಶಿಕ್ಷಕರಿರಬೇಕು. ಇಲ್ಲಿ 44 ಮಕ್ಕಳಿರುವ ಕಾರಣ ಇಬ್ಬರು ಬೇಕು. ಕನಿಷ್ಠ ಓರ್ವ ಶಿಕ್ಷಕರೂ ಇಲ್ಲದೇ ಇದ್ದರೆ, ಗೌರವ ಶಿಕ್ಷಕಿಯರಿಂದ ಈ ಶಾಲೆ ಎಷ್ಟು ಕಾಲ ನಡೆಯಬಹುದು ? ಆದುದರಿಂದ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಲೇಬೇಕಾಗಿದೆ. 

ಶತಮಾನ ಕಂಡ ಶಾಲೆ
ಇದು  ಶತಮಾನ ಕಂಡ ಶಾಲೆಯಾಗಿದೆ.  1908ರಲ್ಲಿ ಈ ಶಾಲೆ 12 ಮಕ್ಕಳಿಗೆ ಶಿಕ್ಷಣ ಕೊಡಲಾರಂಭಿಸಿತ್ತು. 1933
ರಲ್ಲಿ ಅಧಿಕೃತವಾಗಿ 6 ಶಿಕ್ಷಕರು ಹಾಗೂ 330ಕ್ಕೂ ಅಧಿಕ ಮಕ್ಕಳು ಇದ್ದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿತ
ವಾಗಿರುವುದು ಹೌದು. ಶಿಕ್ಷಕರು ನಿವೃತ್ತರಾದಂತೆ ಹೊಸ ನೇಮಕಾತಿ ಇಲ್ಲದೇ ಇದ್ದುದರಿಂದ ಶಿಕ್ಷಕರ ಸಂಖ್ಯೆ ಕುಸಿಯಿತು. 2010ನೇ ಸಾಲಿನ ಬಳಿಕ 4 ಮಂದಿ ಗೌರವ ಶಿಕ್ಷಕರ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗದಂತೆ ಜಾಗ್ರತೆ ವಹಿಸಲಾಯಿತು. ಊರ ವಿದ್ಯಾಭಿಮಾನಿಗಳ ಸಹಕಾರದಿಂದ ಈ ತನಕ ಇಲ್ಲಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿಲ್ಲ.

Advertisement

ಇಲಾಖೆ ಕಾರ್ಯ ಪ್ರವೃತ್ತವಾಗಲಿ 
ಈ ಭಾಗದ ಶಾಸಕ, ಸಚಿವರೂ ಆಗಿರುವ ಬಿ. ರಮಾನಾಥ ರೈ ಅವರಿಗೆ, ಜಿ.ಪಂ. ಸದಸ್ಯ, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಹಾಗೂ ತಾ.ಪಂ. ಸದಸ್ಯರಿಗೆ ಮನವಿ  ಸಲ್ಲಿಸಲಾಗಿದೆ. ಸಚಿವರು ಇದಕ್ಕೆ ತತ್‌ಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ಡಿಡಿಪಿಐ ಅವರಿಗೆ ಸೂಚಿಸಿದ್ದಾರೆ. ಆದರೆ ಇಂದಿನ ವರೆಗೆ ಯಾವುದೇ ಕ್ರಮಕೈಗೊಂಡಿರುವುದು ಕಂಡು ಬಂದಿಲ್ಲ ಎಂದು ಸ್ಥಳೀಯ ವಿದ್ಯಾಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇಲಾಖೆ ತತ್‌ಕ್ಷಣ ಕಾರ್ಯ ಪ್ರವೃತ್ತವಾಗಬೇಕಾಗಿದೆ.

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next