Advertisement

ಮುನವಳ್ಳಿಯಲ್ಲೊಂದು ಮಾದರಿ ಶಾಲೆ

02:08 PM Nov 20, 2019 | Suhan S |

ಬಂಕಾಪುರ: ಗ್ರಾಮಸ್ಥರ ಸಹಕಾರ, ಶಾಲಾ ಸುಧಾರಣಾ ಸಮಿತಿ ಪ್ರೋತ್ಸಾಹ, ಶಿಕ್ಷಕರಲ್ಲಿಯ ಶಕ್ತಿ, ವಿದ್ಯಾರ್ಥಿಗಳ ಉತ್ಸಾಹ ಒಂದೆಡೆ ಸೇರಿದರೆ ಶಾಲೆ ಅಭಿವೃದ್ಧಿ ಪಥದತ್ತ ಸಾಗಬಲ್ಲದು ಎಂಬುದಕ್ಕೆ ಸಮಿಪದ ಮುನವಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿ ನಿಂತಿದ್ದು, ಇತರೆ ಶಾಲೆಗಳಿಗೆ ಮಾದರಿಯಾಗಿದೆ.

Advertisement

ಶಾಲಾ ಮುಖ್ಯ ಶಿಕ್ಷಕ ಎಫ್‌.ಸಿ.ಕಾಡಪ್ಪಗೌಡ್ರ ಹಾಗೂ ಗ್ರಾಮಸ್ಥರ, ಹಳೇ ವಿದ್ಯಾರ್ಥಿಗಳ, ಎಸ್‌ಡಿಎಂಸಿ ಸದಸ್ಯರ ಸಹಕಾರ- ಪ್ರೋತ್ಸಾಹದಿಂದ ಈ ಶಾಲೆ ಆವರಣ ಹಸಿರಿನಿಂದ ಕಂಗೊಳಿಸುತ್ತಲಿದೆ. ವಿವಿಧ ಔಷಧ ಗುಣ ಹೊಂದಿರುವ ವಿವಿಧ ಗಿಡ ಬೆಳೆಸುವುದರ ಜತೆಗೆ ಅಶೋಕ ಗಿಡಗಳನ್ನು ಬೆಳೆಸಲಾಗಿದ್ದು, ಪ್ರತಿ ಗಿಡಗಳ ಮೇಲೂ ನುಡಿ ಮುತ್ತುಗಳ ಫಲಕಗಳನ್ನು ಹಾಕಲಾಗಿದೆ. ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ ಶಾಲಾ ಆವರಣ ನಿರ್ಮಿಸಲಾಗಿದ್ದು, ಈ ಶಾಲೆಗೆ 1918/19 ನೇ ಸಾಲಿನ ಪರಿಸರ ಮಿತ್ರ ಹಸಿರು ಶಾಲೆ ಎಂಬ ಪ್ರಶಸ್ತಿಯೂ ಬಂದಿದೆ.

ಈ ಶಾಲೆಯ ಗೋಡೆಯ ತುಂಬೆಲ್ಲಾ ಸ್ವಾಮಿ ವಿವೇಕಾನಂದ, ರಾಷ್ಟ್ರೀಯ ನಾಯಕರ, ಆದರ್ಶ ಮಹನೀಯರ ಭಾವಚಿತ್ರಗಳು, ನುಡಿ ಮುತ್ತುಗಳ ಒಕ್ಕಣಿಕೆ, ಮೂಲಾಕ್ಷರಗಳು, ವ್ಯಂಜನಾಕ್ಷರಗಳು, ನಲಿ,ಕಲಿ, ಪ್ರಾಣಿ, ಪಕ್ಷಿ, ಆಟೋಪಕರಣಗಳ ಚಿತ್ರಗಳು, ಗಣಿತಕ್ಕೆ ಸಂಬಂಧಿಸಿದಂತೆ ಸೂತ್ರಗಳು, ತೂಕದಕಲ್ಲು, ಮಾಪಕಗಳು ಸೇರಿದಂತೆ ಮಕ್ಕಳ ಕಲಿಕೆಗೆ ಸಂಬಂಧಿಸಿದ ವಿಷಯಗಳನ್ನು ಗೋಡೆಗಳ ಮೇಲೆ ಆಕರ್ಷಕವಾಗಿ ಬರೆಯಿಸಲಾಗಿದೆ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲಾಗಿದೆ.

ಈ ಶಾಲೆ ನಾರಾಯಣಪುರ ಗ್ರಾಮ ಪಂಚಾಯತ್‌ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಾಯದಿಂದ ಸ್ಮಾರ್ಟ್ ಕ್ಲಾಸ್‌ ಹೊಂದಿದ್ದು, ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕ್ಲಾಸ್‌ ಮೂಲಕವೇ ಬೋಧಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಡ್ರೆಸ್‌ಕೋಡ್‌ ಹಾಗೂ ಗುರುತಿನ ಕಾರ್ಡ್‌ನ್ನು ಕಡ್ಡಾಯಗೊಳಿಸಿ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.

ಪ್ರತಿದಿನ ಪ್ರಾರ್ಥನೆಗಿಂತ ಮೊದಲು ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಲು ಸ್ವತ್ಛತಾ ಅಭಿಯಾನ ಮಾಡಿಸಲಾಗುತ್ತಿದೆ. ಮಕ್ಕಳಿಗೆ ಇಂದಿನ ಪಂಚಾಂಗ, ದಿನಪತ್ರಿಕೆ, ಶಾಲಾ ಗೋಡೆಗಳ ಮೇಲೆ ಬರೆಯಿಸಿರುವ ನುಡಿಮುತ್ತುಗಳ ಪಠಣ ಮಾಡಿಸುವ ಮೂಲಕ ಅದರ ಅರ್ಥವನ್ನು ಕೂಡಾ ತಿಳಿಯುವ ಹಾಗೆ ಬೋಧಿಸಲಾಗುತ್ತದೆ.

Advertisement

ಶಿಕ್ಷಕರ ಸಹಕಾರದೊಂದಿಗೆ ಶಾಲಾ ಆವರಣವನ್ನು ಸುಂದರವಾಗಿ ನಿರ್ಮಿಸಲಾಗಿದೆ. ಮಕ್ಕಳ ಕಲಿಕೆಗೆ ಉತ್ತಮ ವಾತಾವಣ ಸೃಷ್ಟಿಸುತ್ತಿರುವ ಆತ್ಮತೃಪ್ತಿ ನನಗಿದ್ದು, ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಚಿಂತನೆಯಿದೆ. ಮಂಜುನಾಥ ಅಂಗಡಿ, ಎಸ್‌ಡಿಎಂಸಿ ಅಧ್ಯಕ್ಷ

ಪ್ರತಿ ಶಾಲೆಗಳಿಗೆ ಅನುದಾನ ನೀಡುವ ಹಾಗೆ ಮುನವಳ್ಳಿ ಸರಕಾರಿ ಶಾಲೆಗೂ ಅನುದಾನ ನೀಡಲಾಗಿದೆ. ಯಾವುದೇ ವಿಶೇಷ ಅನುದಾನ ಪಡೆಯದೆ ಶಾಲಾ ಆವರಣದಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿರುವುದು ಶಿಕ್ಷಕರು ಹಾಗೂ ಗ್ರಾಮಸ್ಥರ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಐ.ಬಿ.ಬೆನಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು.

 

ಸದಾಶಿವ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next