Advertisement

ತಾಲೂಕು ಮಟ್ಟದ ಶೈಕ್ಷಣಿಕ ಸೌಲಭ್ಯಗಳ ವಿತರಣೆ: ಮಾತೃಭಾಷಾ ಶಿಕ್ಷಣಕ್ಕೆ ಮಾದರಿ ಶಾಲೆ: ನಾಗೇಶ್‌

01:17 AM May 21, 2022 | Team Udayavani |

ಪುತ್ತೂರು: ಮಕ್ಕಳ ಜ್ಞಾನ ವೃದ್ಧಿಗೆ ಮಾತೃ ಭಾಷಾ ಶಿಕ್ಷಣದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಮಾದರಿ ಶಾಲೆಗಳನ್ನು ಪರಿಚಯಿಸುವ ಚಿಂತನೆ ಸರಕಾರದ ಮುಂದಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಹೇಳಿದರು.

Advertisement

ದ.ಕ. ಜಿ.ಪಂ., ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳ ಆಶ್ರಯದಲ್ಲಿ ಹಾರಾಡಿ ಮಾದರಿ ಉನ್ನತ ಹಿ.ಪ್ರಾ. ಶಾಲೆಯ ನೂತನ ಕಟ್ಟಡ ಉದ್ಘಾಟನೆ ಮತ್ತು ತಾ| ಮಟ್ಟದ ಸರಕಾರದ ವಿವಿಧ ಶೈಕ್ಷಣಿಕ ಸೌಲಭ್ಯಗಳ ವಿತರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾದರಿ ಶಾಲೆಯಡಿ ಪ್ರತೀ ತರಗತಿಗೆ ಕ್ಲಾಸ್‌ ಟೀಚರ್‌, ಕೊಠಡಿ ವ್ಯವಸ್ಥೆ ಒದಗಿಸುವ ಗುರಿ ಇದೆ. ಇಲ್ಲಿ ಮಾತೃಭಾಷೆಗೆ ಒತ್ತು ನೀಡುವ ಜತೆಗೆ ಇಂಗ್ಲಿಷನ್ನು ಮಾಧ್ಯಮವಾಗಿ ಬೋಧಿಸದೆ ಭಾಷೆಯಾಗಿ ಕಲಿಸಲು ನಿರ್ಧರಿಸಲಾಗಿದೆ ಎಂದರು.

ಶಿಕ್ಷಣಕ್ಕಾಗಿ ಸರಕಾರ ಪ್ರತೀವರ್ಷ 24 ಸಾವಿರ ಕೋ. ರೂ. ಖರ್ಚು ಮಾಡುತ್ತಿದೆ ಎಂದರು.

15 ಸಾವಿರ ಶಿಕ್ಷಕರ ನೇಮಕ
ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದ್ದು, 15 ಸಾವಿರ ಶಿಕ್ಷಕರ ನೇಮಕ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ 7 ಸಾವಿರ ಕೊಠಡಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.

Advertisement

ಕೊಂಬೆಟ್ಟು, ಕೆಯ್ಯೂರು, ಕುಂಬ್ರ, ಹಾರಾಡಿ ಶಾಲೆಗಳ ಕೊಠಡಿ ನಿರ್ಮಾಣ ಹಾಗೂ ವಿವಿಧ ಶಾಲೆಗಳಿಗೆ ಪರಿಕರ ವಿತರಣೆ ಸೇರಿದಂತೆ ಒಟ್ಟು 10.22 ಕೋ.ರೂ. ಅನುದಾನದ ವ್ಯಯಿಸಲಾಗಿದೆ. ಇದರಲ್ಲಿ 5 ಕೋ.ರೂ. ವೆಚ್ಚದಲ್ಲಿ 95 ಸರಕಾರಿ ಪ್ರಾಥಮಿಕ ಶಾಲೆ, 9 ಪ್ರೌಢಶಾಲೆ, 5 ಪ.ಪೂ. ಕಾಲೇಜು ಹಾಗೂ 2 ಕರ್ನಾಟಕ ಪಬ್ಲಿಕ್‌ ಪರಿಕರಗಳು, ಶುದ್ಧ ಕುಡಿಯುವ ನೀರಿನ ಘಟಕ, 215 ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ವಿತರಿಸಲಾಗಿದೆ ಎಂದು ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಹೇಳಿದರು.

ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ
ಎಸೆಸೆಲ್ಸಿಯಲ್ಲಿ 625 ಅಂಕ ಪಡೆದ ವಿಟ್ಲ ಜೇಸಿಸ್‌ ಆಂ.ಮಾ. ಶಾಲೆಯ ಧನ್ಯಶ್ರೀ, ಪುತ್ತೂರು ವಿವೇಕಾನಂದ ಆಂ.ಮಾ. ಶಾಲೆಯ ಆತ್ಮೀಯಾ ಎಂ. ಕಶ್ಯಪ್‌, ಅಭಯ್‌ ಶರ್ಮಾ ಕೆ., ಅಭಿಜ್ಞಾ ಆರ್‌. ಹಾಗೂ 624 ಅಂಕ ಪಡೆದ ವಿವಿಧ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಸಚಿವರು ಸಮ್ಮಾನಿಸಿದರು. ಶಾಲಾ ವತಿಯಿಂದ ಸಚಿವರನ್ನು, ಶಾಸಕರನ್ನು ಗೌರವಿಸಲಾಯಿತು.

ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ನಗರಸಭೆ ಅಧ್ಯಕ್ಷ ಕೆ. ಜೀವಂಧರ್‌ ಜೈನ್‌, ಉಪಾಧ್ಯಕ್ಷೆ ವಿದ್ಯಾ ಗೌರಿ, ಪುಡಾ ಅಧ್ಯಕ್ಷ ಭಾಮಿ ಅಶೋಕ್‌ ಶೆಣೈ, ನಗರಸಭಾ ಸದಸ್ಯೆ ಪ್ರೇಮಲತಾ ಜಿ. ನಂದಿಲ, ಸಹಾಯಕ ಆಯುಕ್ತ ಗಿರೀಶ್‌ ನಂದನ್‌, ಡಿಡಿಪಿಐ ಸುಧಾಕರ ಕೆ., ಹಾರಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ನಾಯ್ಕ ಇದ್ದರು. ಮುಖ್ಯ ಶಿಕ್ಷಕ ಕೆ.ಕೆ. ಮಾಸ್ಟರ್‌ ಪ್ರಸ್ತಾವಿಸಿದರು. ಬಿಇಒ ಲೋಕೇಶ್‌ ಸ್ವಾಗತಿಸಿದರು. ಬಾಲಕೃಷ್ಣ ಪೊರ್ದಾಳ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next