Advertisement

ಮಾದರಿ ವನ ಬೆಳೆಸಿದ ಮುಚ್ಲುಕೋಡು ದೇಗುಲ

09:30 AM Jun 21, 2019 | Suhan S |

ಉಡುಪಿ, ಜೂ. 20: ಕುಕ್ಕಿಕಟ್ಟೆ ಸಮೀಪದ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ 150ಕ್ಕೂ ಅಧಿಕ ಔಷಧೀಯ, ಪೂಜನೀಯ ಸೇರಿದಂತೆ ಅಪರೂಪದ ಗಿಡಗಳನ್ನು ಬೆಳೆಸಲಾಗಿದ್ದು ಮಾದರಿ ವನವೊಂದು ನಿರ್ಮಾಣಗೊಳ್ಳುತ್ತಿದೆ.

Advertisement

ದೇಗುಲದ 2 ಎಕರೆ ಜಾಗದಲ್ಲಿ ಅಪರೂಪದ ಅಣಲೆ ಮರ, ತಪಸ್ಸೀ ಮರ, ಅರ್ಜುನ ವೃಕ್ಷ, ಶಮೀ ವೃಕ್ಷ, ರೋಹಿತಕ, ಅಶೋಕ ವೃಕ್ಷ, ಪಲಾಶ, ಕದಂಬ, ಉತ್ತರಣೆ, ರಕ್ತಚಂದನ, ಕೇದಗೆ ಸೇರಿದಂತೆ ವಿವಿಧ ಸಸ್ಯ-ಮರಗಳು ಬೆಳೆಯುತ್ತಿವೆ.

ಇಲ್ಲಿ ಮೂಲಿಕಾ ವನ, ನವಗ್ರಹ ವನ, ರಾಶಿ ವನ ಹೀಗೆ ವಿವಿಧ ವರ್ಗದ ಸಸಿಗಳನ್ನೊಳಗೊಂಡ ಪ್ರತ್ಯೇಕ ಕಿರುವನಗಳಿವೆ. ಇದರ ಜತೆಗೆ ನಾಗಬನವನ್ನು ಕೂಡ ನೈಸರ್ಗಿಕವಾಗಿಯೇ ಉಳಿಸಿಕೊಳ್ಳಲಾಗಿದೆ. ಅದರಲ್ಲೂ ಸುರಗಿಯಂಥ ಮರಗಳಿವೆ.

ವಿಶೇಷ ದಿನಗಳಂದು ನಾಟಿ:

ಇಲ್ಲಿರುವ ಗಿಡ, ಮರಗಳ ಪೈಕಿ ಕೆಲವು ಗಿಡಗಳನ್ನು ವಿಶಿಷ್ಟ ದಿನಗಳಂದು ನೆಡಲಾಗಿದೆ. ಮೂಲಿಕಾ ವನದಲ್ಲಿರುವ 80 ಗಿಡಗಳನ್ನು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ 80ನೇ ಜನ್ಮನಕ್ಷತ್ರದಂದು ನೆಡಲಾಗಿದೆ. ಸ್ವತಃ ಶ್ರೀಗಳು ಇಲ್ಲಿ ಹಲವು ಗಿಡಗಳನ್ನು ನೆಟ್ಟಿದ್ದಾರೆ. ಮಂತ್ರಾಲಯ ಶ್ರೀ ಗಳು ಶ್ರೀಗಂಧದ ಗಿಡ ನೆಟ್ಟಿದ್ದಾರೆ. ಪೇಜಾವರ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಸ್ಥೆವಹಿಸಿ ಗಿಡಗಳನ್ನು ಪೋಷಿಸಿಕೊಂಡು ಬಂದಿದ್ದಾರೆ. ವಾಸುದೇವ ಭಟ್ ಪೆರಂಪಳ್ಳಿ ಅವರು ಕೂಡ ಈ ಮಾದರಿ ವನ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ಜೆಯ ಮಂಜುನಾಥ ಗೋಳಿ ಅವರು ಹಲವು ಅಪರೂಪದ ಗಿಡಗಳನ್ನು ನೀಡಿದ್ದಾರೆ. ದೇವಳದ ವ್ಯವಸ್ಥಾಪಕ ರಾಜಶೇಖರ್‌ ಭಟ್ ಮತ್ತು ಸಿಬಂದಿಗೂ ಈ ವನರಾಶಿಯ ಮೇಲೆ ವಿಶೇಷ ಪ್ರೀತಿ. ಅವರು ಸಸ್ಯಗಳನ್ನು ಜಾಗರೂಕತೆಯಿಂದ ಬೆಳೆಸಿದ್ದಾರೆ. ದೇಗುಲದ ಕೆರೆ, ಮೂರು ಬಾವಿಗಳಿಂದ ಇದಕ್ಕೆ ನೀರು ಹಾಕಲಾಗುತ್ತಿದೆ. ಅನೇಕರು ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಸ್ಯಶಾಸ್ತ್ರ ವಿದ್ಯಾರ್ಥಿಗಳ ತಂಡ ಕೂಡ ಇಲ್ಲಿ ಅಧ್ಯಯನ ನಡೆಸಿದೆ.

ಎಲ್ಲೆಡೆ ಬೆಳೆಯಲಿ:

ಇದು ಪೇಜಾವರ ಮಠದ ಆಡಳಿತಕ್ಕೊಳಪಟ್ಟ ದೇಗುಲ. ಅನಂತೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ 4 ಸ್ಕಂದಾಲಯಗಳಲ್ಲಿ ಆಗ್ನೇಯ ಮೂಲದ ಸ್ಕಂದಾಲಯವಿದು. 12 ವರ್ಷಗಳ ಹಿಂದೆ ದೇಗುಲದ ಜೀರ್ಣೋದ್ಧಾರ ಸಂದರ್ಭದಲ್ಲೂ ಪ್ರಾಂಗಣದಲ್ಲಿದ್ದ ಬೃಹತ್‌ ಮರಗಳನ್ನು ಉಳಿಸಿಕೊಳ್ಳಲಾಗಿದೆ. ಅನಂತರ ಪಕ್ಕದಲ್ಲೇ ಅಪರೂಪದ ಸಸ್ಯಗಳ ವನ ನಿರ್ಮಿಸಲಾಗಿದೆ. ಇಂಥ ಸಸ್ಯರಾಶಿ ಎಲ್ಲೆಡೆ ಬೆಳೆಸಬೇಕಿದೆ. – ವಾಸುದೇವ ಭಟ್ ಪೆರಂಪಳ್ಳಿ,ಪರಿಸರ ಕಾರ್ಯಕರ್ತರು
ಪ್ರಥಮ ಪ್ರಯತ್ನ:

ದೇವಳದ ಪರಿಸರದಲ್ಲಿ ಈ ರೀತಿಯ ಅಪರೂಪದ ಸಸ್ಯಗಳನ್ನೊಳಗೊಂಡ ಇಷ್ಟು ದೊಡ್ಡ ವನ ನಿರ್ಮಿಸಿರುವುದು ಇದೇ ಮೊದಲು. ಇತರ ದೇವಸ್ಥಾನಗಳಲ್ಲಿಯೂ ಲಭ್ಯ ಇರುವ ಜಾಗದಲ್ಲಿ ಇಂಥ ವನ ನಿರ್ಮಿಸಿದರೆ ಅತ್ಯಂತ ಉಪಯುಕ್ತವಾಗಿರುವ ಅಪರೂಪದ ಸಸ್ಯಗಳನ್ನು ರಕ್ಷಿಸಿದಂತೆ ಆಗುತ್ತದೆ. ಇತರ ಸಸ್ಯಗಳಂತೆಯೇ 2-3 ವರ್ಷ ಸರಿಯಾಗಿ ನೀರು ಗೊಬ್ಬರ ಹಾಕಿ ಕಾಳಜಿ ವಹಿಸಿದರೆ ಅನಂತರ ಅವುಗಳಷ್ಟಕ್ಕೇ ಬೆಳೆಯುತ್ತವೆ. ಇಲ್ಲಿ ಬೆಳೆಸುತ್ತಿರುವ ಅಪರೂಪದ ಮರಗಳ ಪೈಕಿ ಒಂದೆರಡು ಜಾತಿಯ ಮರಗಳು ಹಿಂದೆ ಉಡುಪಿ ನಗರದಲ್ಲೇ ಇದ್ದವು. -ಗೋಪಾಲಕೃಷ್ಣ ಭಟ್,ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕರು, ಉಡುಪಿ
Advertisement
Advertisement

Udayavani is now on Telegram. Click here to join our channel and stay updated with the latest news.

Next