ಕುಷ್ಟಗಿ: ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಡಿಮೆ ವೆಚ್ಚದಲ್ಲಿ ನಿಡಶೇಸಿ ಕೆರೆ ಅಭಿವೃದ್ಧಿ ಕಾರ್ಯ ಸರ್ಕಾರಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.
ತಾಲೂಕಿನ ನಿಡಶೇಸಿ ಕೆರೆ ಅಭಿವೃದ್ಧಿ ಬಳಿಕ ತುಂಬಿರುವ ಹಿನ್ನೆಲೆಯಲ್ಲಿ ಗಂಗಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಕೆರೆ ಅಭಿವೃದ್ಧಿಯನ್ನು ಕಡಿಮೆ ಹಣದಲ್ಲೂ ಈ ರೀತಿಯಾಗಿ ಮಾಡಬಹುದು ಎಂಬುದು ರಾಜ್ಯಕ್ಕೆ ತೋರಿಸಿಕೊಟ್ಟಿದ್ದಿರಿ. ಸರ್ಕಾರದ ಎಸ್.ಆರ್ ದರದ ಪ್ರಕಾರ ಅಂದಾಜು ವೆಚ್ಚ ಸಮೀಕರಿಸಿ, ಸಣ್ಣ ನೀರಾವರಿ ಇಲಾಖೆ ಟೆಂಡರ್ ನಲ್ಲಿ ಈ ದರದಲ್ಲಿ ಮಾಡಬಹುದಾಗಿದೆ ಎಂದುಉಲ್ಲೇಖೀಸಬಹುದಾಗಿದೆ. ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ, ಲೆಕ್ಕ ಪತ್ರ ನಿರ್ವಹಣೆಯ ರೀತಿಯ ನಿಖರ ವಿವರಗಳನ್ನು ತಮಗೆ ನೀಡಿದರೆ ಅದು ಮುಂದಿನ ದಿನಗಳಲ್ಲಿ ರೆಫರೆನ್ಸ್ ತರಹ ಆಗಲಿದೆ ಎಂದರು.
ಈ ಮಾದರಿ ಕೆಲಸವನ್ನು ಮುಖ್ಯ ಕಾರ್ಯದರ್ಶಿಯವರ ಗಮನಕ್ಕೂ ತರಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಖುದ್ದಾಗಿ ಆಗಮಿಸಿ ಪರಿಶೀಲಿಸಿದ್ದು, ಸಂಬಂಧಿ ಸಿದ ಸಚಿವರು ಈಕೆರೆಯನ್ನು ನೋಡಿ ಹೋಗಿದ್ದಾರೆ. ಮಾದರಿ ಕೆಲಸ ಕುರಿತು ಇತರೇ ಜಿಲ್ಲೆಗಳಿಗೆ ಮಾಹಿತಿ ಹೋಗಿದೆ. ಕೆರೆ ಅಭಿವೃದ್ಧಿ ಸಂತಸ ತಂದಿದ್ದು, ಊರಿಗೆ ಅಷ್ಟೇ ಅಲ್ಲ ದೇಶಕ್ಕೆ ಪ್ರೇರಣೆಯಾಗಿದೆ. ನಿಡಶೇಸಿ ಕೆರೆ ಅಭಿವೃದ್ಧಿಯಿಂದ ಊರಿಗೆ ಹೆಮ್ಮೆ ತಂದಿದೆ. ಈ ಕೆರೆಯ ಅಭಿವೃದ್ಧಿ ಸರ್ಕಾರದಿಂದ ಸಾಧ್ಯವಾಗಿಲ್ಲ
ಎನ್ನುವುದು ಎಲ್ಲೋ ನೋವಿತ್ತು, ಆದರೆ ಜನರ, ಊರಿನವರ ಚಿಕ್ಕಚಿಕ್ಕ ಸಹಾಯದಿಂದ ಈ ದೊಡ್ಡ ಕೆಲಸ ನೆರವೇರಿದೆ. ಸರ್ಕಾರದಿಂದ ಉದ್ಯಾನವನ ಅಭಿವೃದ್ಧಿಗೆ 1.50 ಕೋಟಿ ರೂ. ಮಂಜೂರಾಗಿರುವುದು ತೃಪ್ತಿ ತಂದಿದೆ ಎಂದರು. ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಮಾತನಾಡಿ, ಯಾವುದೇ ವ್ಯಕ್ತಿ ನಿಷ್ಟುರ, ಹಣಕಾಸುವ್ಯವಹಾರದಲ್ಲಿ 1 ರೂ. ಲೋಪವಾಗದಂತೆ ನಿರ್ವಹಿಸಿದರೆ ಹೆಸರು ಬರುತ್ತದೆ ಎನ್ನುವುದಕ್ಕೆನಿಡಶೇಸಿ ಕೆರೆ ಅಭಿವೃದ್ಧಿ ಕಾರ್ಯ ಸಾಕ್ಷಿಯಾಗಿದೆ.ಯಾವೂದೇ ಸರ್ಕಾರ ಬಂದಿರಬಹುದು ಹಣಕಾಸಿನ ತೊಂದರೆ ಇಲ್ಲ, ಕೆರೆಯ ಮುಂದಿನಅಭಿವೃದ್ಧಿಗೆ ಪೂರಕವಾದ ಕ್ರಿಯಾಯೋಜನೆಯಪ್ರಸ್ತಾವನೆ ಸಲ್ಲಿಸಿದರೆ ಆ ಮೂಲಕ ಕೆರೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ಹೇಳಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ವೈಯಕ್ತಿಕ ಕೆಲಸಕ್ಕೆ ತೃಪ್ತಿ, ಸಾರ್ವಜನಿಕರ ಕೆಲಸಕ್ಕೆ ಆತ್ಮಸಂತೃಪ್ತಿ ಆಗುತ್ತದೆ ಎಂಬುದಕ್ಕೆ ನಿಡಶೇಸಿ ಕೆರೆ ಕೆಲಸ ನಿದರ್ಶನವಾಗಿದೆ.ನಿರೀಕ್ಷೆಯಂತೆ ಹಿಂಗಾರು ಮಳೆಯಾಗಿ ಕೆರೆ ತುಂಬಿರುವುದು ಅಕ್ರಮ ಮರಳು ಸಾಗಣೆ ತಪ್ಪಿಸಿದಂತಾಗಿದೆ ಎಂದರು.
ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ನೀರಿಲ್ಲದೇ ಸಾಕಷ್ಟು ಸಮಸ್ಯೆ ಅನುಭವಿಸಿದ್ದೇವೆ. ನೀರನ್ನು ದುಡ್ಡುಕೊಟ್ಟು ಖರೀದಿಸುವ ಪರಿಸ್ಥಿತಿ ಎದುರಿಸಿದ್ದೇವೆ. ಬಿಜಕಲ್ ಶ್ರೀಗಳಿಗೆ ಮಠ ಇಲ್ಲದಿದ್ದರೂ ನಿಡಶೇಸಿ ಕೆರೆ ಅಭಿವೃದ್ಧಿಗೆ 1 ಲಕ್ಷ ರೂ. ನೀಡಿದ್ದಾರೆ. ಹಲವಾರು ಜನರು ಉದಾರವಾಗಿ ದೇಣಿಗೆ ನೀಡಿರುವುದು ನಮ್ಮಲ್ಲಿ ಶ್ರೀಮಂತರು ಇಲ್ಲದಿದ್ದರೂ, ಹೃದಯವಂತರಿದ್ದಾರೆ ಎನ್ನುವುದಕ್ಕೆ ಹೆಮ್ಮೆ ಇದೆ ಎಂದರು. ಮಾಜಿ ಶಾಸಕ ಕೆ. ಶರಣಪ್ಪ, ತಹಶೀಲ್ದಾರ್ ಎಂ.ಸಿದ್ದೇಶ, ಸಿಪಿಐ ಜಿ. ಚಂದ್ರಶೇಖರ, ಕೆರೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪರಸಪ್ಪ ಕತ್ತಿ ಮತ್ತಿತರಿದ್ದರು. ಪ್ರಾ| ಟಿ.ಬಸವರಾಜ್ ನಿರೂಪಿಸಿದರು. ಕಲ್ಲೇಶ ತಾಳದ ಸ್ವಾಗತಿಸಿದರು.