ಮಾದನಹಿಪ್ಪರಗಿ: ಜೀವನದ ಮೌಲ್ಯ ಅರಿಯಬೇಕಾದರೆ ಶರಣರ ಚರಿತ್ರೆ ಓದಬೇಕು. ಶರಣರ ತತ್ವಗಳು ಅವರ ಬದುಕಿನ ಘಟನೆಗಳೇ ಅವರು ರಚಿಸಿದ ವಚನಗಳಲ್ಲಿದ್ದು, ಅವು ವಿಶ್ವಕ್ಕೆ ಮಾದರಿಯಾಗಿವೆ ಎಂದು ಪ್ರವಚನಕಾರ ಶರಣಕುಮಾರ ಶಾಸ್ತ್ರೀ ಹೇಳಿದರು.
ಸ್ಥಳೀಯ ಶಿವಲಿಂಗೇಶ್ವರ ಮಠದ ಲಿಂ. ಶಾಂತಲಿಂಗ, ಶಿವಲಿಂಗ ಸ್ವಾಮೀಜಿ ಪುಣ್ಯಸ್ಮರಣೋತ್ಸವ ನಿಮಿತ್ತ ನಡೆಯುತ್ತಿರುವ ವಚನ ಪ್ರವಚನ ಕಾರ್ಯಕ್ರಮ ಮಾಲಿಕೆಯಲ್ಲಿ ಅವರು ಪ್ರವಚನ ನೀಡಿದರು.
ನಾವಾಡುವ ಮಾತು ವಚನವಾಗಿರಬೇಕು. ಮಾತು ಗಾಳಿಮಾತಾಗಬಾರದು. ಮಾತು ಕೃತಿಯಲ್ಲಿರಬೇಕು. ನಮ್ಮ ನಡೆ-ನುಡಿ ಇನ್ನೊಬ್ಬರಿಗೆ ಆದರ್ಶವಾಗಿರಬೇಕು ಎಂದು ನುಡಿದರು.
ಅಕ್ಕಲಕೋಟದ ಬಸವಲಿಂಗ ಸ್ವಾಮೀಜಿ, ಶಿವಯೋಗಾಶ್ರಮದ ಶಿವದೇವಿ ಮಾತಾಜಿ, ದುಧನಿಯ ಡಾ| ಶಾಂತಲಿಂಗ ಸ್ವಾಮೀಜಿ, ಶ್ರೀ ಮಠದ ಅಭಿನವ ಶಿವಲಿಂಗ ಸ್ವಾಮೀಜಿ ವೇದಿಕೆ ಮೇಲಿದ್ದರು. ಇದೆ ವೇಳೆ ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದರ್ಗಾಶಿರೂರ ಕೇರೂರ ಚಲಗೇರಾ ಖೇಡಉಮರಗಾ ನಿಂಗದಳ್ಳಿ ಸಲಗರ ಮದಗುಣಕಿ ಮುಂತಾದ ಗ್ರಾಮದ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.
ರಸಪ್ರಶ್ನೆ ವಿಜೇತರು
ಶುಕ್ರವಾರ ಅಭಿನವ ಶ್ರೀ ಯುವಭಕ್ತ ಬಳಗದವರಿಂದ ಮಠದಿಂದ ವಿದ್ಯಾರ್ಥಿಗಳಿಗಾಗಿ ವಲಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಸರ್ಕಾರಿ ಪ್ರೌಢಶಾಲೆ ಸರಸಂಬಾ (ಪ್ರಥಮ), ಸ್ಥಳೀಯ ಶಿವಲಿಂಗೇಶ್ವರ ಪ್ರೌಢಶಾಲೆ (ದ್ವಿತೀಯ), ಶ್ರೀಮಂತ ದೋತ್ರೆ ಪ್ರೌಢಶಾಲೆ ಮೋಘಾ ಬಿ (ತೃತೀಯ) ವಿದ್ಯಾಥಿಗಳು ಬಹುಮಾನ ಪಡೆದರು ಎಂದು ಆನಂದರಾಜ ಪಾಟೀಲ ತಿಳಿಸಿದ್ದಾರೆ.