Advertisement

ಪ್ರಗತಿಗೆ ಸಿದ್ದು ಮಾದರಿ; ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಟಾಂಗ್‌

06:00 AM Feb 11, 2018 | Team Udayavani |

ಹೊಸಪೇಟೆ: ದೇಶವನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ನೋಡಿ ಕಲಿಯಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

Advertisement

ನಗರದ ವಿಜಯನಗರ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ “ಜನಾಶೀರ್ವಾದ ಯಾತ್ರೆ’ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಭಾಷಣವನ್ನು ಮೋದಿ, ಬಿಜೆಪಿ ನಾಯಕರ ವಿರುದ್ಧ ಟೀಕೆ, ವಾಗ್ಧಾಳಿ, ವ್ಯಂಗ್ಯಕ್ಕೆ ಮೀಸಲಿಟ್ಟರು. ಸಿಎಂ ಸಿದ್ದರಾಮಯ್ಯರಿಗೆ ಶಹಬ್ಟಾಸ್‌ಗಿರಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಭವಿಷ್ಯದ ದೃಷ್ಟಿಕೋನದ ಕೊರತೆಯಿದೆ. ಬರೇ ಹಳೆಯ ವಿಷಯಗಳನ್ನೇ ಕೆದಕುತ್ತಿದ್ದಾರೆಯೇ ವಿನಃ ದೇಶದ ಭವಿಷ್ಯಕ್ಕೇನು ಮಾಡುತ್ತಾರೆ ಎಂಬುದನ್ನು ಹೇಳುತ್ತಿಲ್ಲ. ಕನ್ನಡಿಯಲ್ಲಿ (“ರಿಯರ್‌ ವ್ಯೂಮಿರರ್‌’) ನೋಡಿಕೊಂಡು ಆಡಳಿತ ನಡೆಸುತ್ತಿದ್ದಾರೆ.

ಇದಕ್ಕಾಗಿ ಜನತೆ ಅವರನ್ನು ಪ್ರಧಾನಿ ಆಗಿ ಆರಿಸಿಲ್ಲ. ಅದೇ ಇನ್ನೊಂದೆಡೆ ಕರ್ನಾಟಕದಲ್ಲಿ ಸಿದ್ಧರಾಮಯ್ಯ ಅವರು ಸರ್ವರಹಿತ, ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಆಡಳಿತ ನಡೆಸುತ್ತಿದ್ದಾರೆ. ಇದನ್ನು ನೋಡಿ ಮೋದಿಯವರು ಕಲಿಯಬೇಕು ಎಂದು ತಿಳಿಸಿದರು.

ದಲಿತರ ಉದ್ಧಾರವಾಗದು: ದಲಿತರು, ಬಡವರ ಅಭಿವೃದ್ಧಿ ಕೇವಲ ಭಾಷಣದಿಂದ ಆಗುವುದಿಲ್ಲ. ಅದಕ್ಕೆ ಅಗತ್ಯ ಅನುದಾನ ನೀಡಬೇಕು. ಅದನ್ನು ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಮಾಡಿ ತೋರಿಸಿದೆ ಎಂದರು. ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ನರೇಂದ್ರ ಮೋದಿ ಸರಕಾರ ಇಡೀ ದೇಶಕ್ಕೆ 55 ಸಾವಿರ ಕೋಟಿ ರೂ. ನೀಡಿದ್ದರೆ, ಸಿದ್ದರಾ ಮಯ್ಯ ಸರಕಾರ ಕೇವಲ ಕರ್ನಾಟಕದಲ್ಲೇ 27ಸಾವಿರ ಕೋಟಿ ರೂ. ವೆಚ್ಚ ಮಾಡಿದೆ. ಇದು ದಲಿತರು, ಬಡವರ ಬಗೆಗಿನ ನೈಜ ಕಾಳಜಿ ಮೋದಿಯವರೇ ಎಂದು ಟಾಂಗ್‌ ನೀಡಿದರು.

Advertisement

ಪ್ರತಿ ವರ್ಷ ಎರಡು ಕೋಟಿ ಯುವಕರಿಗೆ ಉದ್ಯೋಗ, ಕಪ್ಪು ಹಣ ವಾಪಸ್‌ ಪಡೆದು ಪ್ರತಿ ವ್ಯಕ್ತಿಗೆ 15ಲಕ್ಷ ನೀಡುವ ಭರವಸೆ ಈಡೇರಿಲ್ಲ. ದಿನಕ್ಕೆ 450 ಯುವಕರಿಗೆ ಉದ್ಯೋಗ ನೀಡುವುದಾಗಿ ಪ್ರಧಾನಿ ಹೇಳಿದ್ದರು.

ಆದರೆ ಸಂಸತ್ತಲ್ಲಿ ಸುಮಾರು ಒಂದು ತಾಸು ಮಾತನಾಡಿದ ವೇಳೆ ಅವರು ನಿರುದ್ಯೋಗ, ರೈತರು, ಬಡವರು, ದಲಿತರು, ಸಣ್ಣ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಒಂದೇ ಒಂದು ಮಾತನಾಡಲಿಲ್ಲ. ಬದಲಾಗಿ ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಿಯೇ ಭಾಷಣ
ಮುಗಿಸಿದರು ಎಂದು ಆರೋಪಿಸಿದರು.

ಮುಂದಾಲೋಚನೆ ಇಲ್ಲದೆ ಕೈಗೊಂಡ ಕೆಟ್ಟ ತೀರ್ಮಾನಕ್ಕೆ ನೋಟುಗಳ ಅಪನಗದೀಕರಣ ಪ್ರಮುಖ ಸಾಕ್ಷಿಯಾಗಿದೆ. ಇದರಿಂದ ಸಣ್ಣ ವ್ಯಾಪಾರಿಗಳು, ಜನ ಸಾಮಾನ್ಯರು ಸಮಸ್ಯೆಎದುರಿಸುವಂತಾಗಿದೆ. ಇನ್ನು ಪರಿಷ್ಕೃತ ಜಿಎಸ್‌ಟಿ ಗಬ್ಬರ್‌ ಸಿಂಗ್‌ ತೆರಿಗೆಯಂತಾಗಿದ್ದು, ಕೆಲವೇ ಕೆಲವು ಉದ್ಯಮಪತಿಗಳಿಗೆ ಲಾಭವಾಗಿದೆ ಎಂದರು.

ಗುಜರಾತ್‌ ಬದಲಾಯಿಸಿದ್ದೇನೆ ಎಂದು ಮೋದಿ ದೇಶದಲ್ಲೆಲ್ಲ ಪ್ರಚಾರ ಮಾಡಿದ್ದರು. ವಾಸ್ತವ ಬೇರೆಯೇ ಇದೆ. ಗುಜರಾತ್‌ನ ರೈತರು, ಸಣ್ಣ ಉದ್ದಿಮೆದಾರರು,ವ್ಯಾಪಾರಿಗಳು ಗುಜರಾತ್‌ ಕಟ್ಟಿದ್ದಾರೆ. ಆದರೆ, ಇಡೀ ಗುಜರಾತ್‌ನ್ನು10 ಜನ ಉದ್ಯಮಿಗಳ ಕೈಗೆ ಕೊಟ್ಟಿರುವುದೇ ಮೋದಿ ಅವರ ಸಾಧನೆ ಹಾಗೂ ಬದ ಲಾವಣೆ ಮಂತ್ರವಾಗಿದೆ ಎಂದರು.

ಗುಜರಾತ್‌ನಲ್ಲಿ ಟಾಟಾ ನ್ಯಾನೋ ಕಾರು ಉತ್ಪಾದನಾ ಘಟಕಕ್ಕೆ ಸುಮಾರು 33 ಸಾವಿರ ಕೋಟಿ ರೂ. ಹಾಗೂ ಒಂದು ಸಾವಿರ ಎಕರೆ ಜಮೀನು ನೀಡಲಾಗಿತ್ತು. ಇಂದು ಒಂದೇ ಒಂದು ನ್ಯಾನೊ ಕಾರು ಉತ್ಪಾದನೆ ಆಗುತ್ತಿಲ್ಲ. ಇಷ್ಟೇ ಹಣದಲ್ಲಿ ಹಿಂದಿನ ಯುಪಿಎ ಸರಕಾರ ಇಡೀ ದೇಶಕ್ಕೆ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಿತ್ತು. ಗುಜರಾತ್‌ನಲ್ಲಿ ಉದ್ಯಮಿಯೊಬ್ಬರಿಗೆ ಹೆಕ್ಟೇರ್‌ಗೆ 1 ರೂ.ನಂತೆ ಸುಮಾರು 40ಸಾವಿರ ಹೆಕ್ಟೇರ್‌ ಭೂಮಿಯನ್ನು ಮೋದಿ ನೀಡಿದ್ದರು. ಆ ಉದ್ಯಮಿ ನಂತರ ಅದನ್ನು 30 ಸಾವಿರ ರೂ.ಗೆ ಹೆಕ್ಟೇರ್‌ನಂತೆ ಮಾರಾಟ ಮಾಡಿಕೊಂಡ. ಇದು “ಮೋದಿ ಮಾಡೆಲ್‌’ ಎಂದರು.

ಪ್ರಧಾನಿಯಾದವರು ಕೇವಲ ಟೀಕೆ ಹಾಗೂ ಭಾಷಣಕ್ಕೆ ಸೀಮಿತವಾಗದೆ, ಭವಿಷ್ಯಕ್ಕಾಗಿ ಏನು ನೀಡುತ್ತೀರಿ ಎಂಬುದನ್ನು ಹೇಳಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು.ಮೋದಿ ಅದನ್ನು ಮಾಡುವಲ್ಲಿ ವಿಫ‌ಲರಾಗಿದ್ದಾರೆಂದು ಆರೋಪಿಸಿದರು.

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next