ದೇವನಹಳ್ಳಿ: ಬಯಲು ಸೀಮೆ ಪ್ರದೇಶದ ರೈತರು ಮಳೆ ಇಲ್ಲದಿದ್ದರೂ ಸಹ ಕೊಳವೆ ಬಾವಿಗಳಲ್ಲಿ ಇರುವ ಅಲ್ಪಸ್ವಲ್ಪದ ನೀರಿನಲ್ಲಿಯೇ ತೋಟಗಾರಿಕೆ ಬೆಳೆಗಳನ್ನು ತಾಲೂಕಿನ ಚಪ್ಪರದ ಕಲ್ಲು ವೃತ್ತದಲ್ಲಿರುವ ಬೀರಸಂದ್ರದ ರೈತ ರಾಜಣ್ಣ ವಿವಿಧ ತೋಟಗಾರಿಕಾ ಬೆಳೆ ಬೆಳೆಯುತ್ತಿದ್ದಾರೆ.
ಬಯಲ ಸೀಮೆಯ ಪ್ರದೇಶವಾಗಿರುವುದರಿಂದ ನದಿ ಮೂಲಗಳು ನಾಲೆಗಳಿಲ್ಲ. ಒಂದು ಕಡೆ ರೈತರ ಭೂಮಿ ಭೂಸ್ವಾಧೀನ ಪ್ರಕ್ರಿಯೆಗಳು ರೈತರನ್ನು ಕಾಡುತ್ತಿದೆ. ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಡಿಬಿ ಸ್ವಾಧೀನ ಹಾಗೂ ಕುಂದಾಣ ಹೋಬಳಿಯಲ್ಲಿ ಐಟಿಐಆರ್ ಭೂ ಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿದ್ದರೂ ರೈತರಿರುವ ಅಲ್ಪ ಸ್ವಲ್ಪದ ಜಮೀನುಗಳಲ್ಲಿ ತೋಟಗಾರಿಕೆ, ಹೂ ಬೆಳೆದು ಕೃಷಿ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ಬೆಂಗಳೂರಿಗೆ ಪ್ರತಿನಿತ್ಯ ರೈತರು ತಾವು ಬೆಳೆದ ತರಕಾರಿ ಹೂ ಹಣ್ಣುಗಳನ್ನು ಬೆಂಗಳೂರಿನ ಜನರಿಗೆ ನೀಡುತ್ತಿದ್ದಾರೆ.
ಮಿಶ್ರ ಬೆಳೆ: ಬೀರಸಂದ್ರ ಗ್ರಾಮದ ರೈತ ರಾಜಣ್ಣ ಒಂದೇ ಎಕರೆ ಪ್ರದೇಶದಲ್ಲಿ 15 ಗುಂಟೆ ಹೂಕೋಸು, ಉಳಿದ ಜಾಗದಲ್ಲಿ ಸಾವಂತಿಗೆ ಹೂ ಮತ್ತು ಕಾರಮಣಿ ಬೆಳೆಯಲಾಗಿದೆ. ಮಳೆ ಅಭಾವವಿದ್ದರು ಕೊಳವೆಬಾವಿ ನೀರು ಆಧರಸಿ ಸಾಲಸೋಲ ಮಾಡಿ ಬೆಳೆ ಬೆಳೆಯ ಲಾಗಿದೆ. ಬೆಳೆಯನ್ನಿಡಲು ಸಕಾಲದಲ್ಲಿ ಔಷಧಿ ಗೊಬ್ಬರ ವನ್ನು ಹಾಕಲಾಗಿದೆ. ಕಾರಮಣಿ ಕಾಯಿ ಸಾಂಬಾರ್ ನಲ್ಲಿ ಹಾಕುತ್ತಾರೆ. ಆಂಧ್ರದ ಹೈದರಾಬಾದ್, ತಮಿಳುನಾಡು ಕಡೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ಆರೋಗ್ಯಕ್ಕೂ ಸಹಕಾರಿ ಅಂತಾರೆ ರೈತ ರಾಜಣ್ಣ.
ಲಾಭದ ನಿರೀಕ್ಷೆ: ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ ಹೊಂದಿರುವ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು-ಬೀರಸಂದ್ರ ಸಮೀಪದ ರೈತ ರಾಜಣ್ಣ ಅವರ ತೋಟದಲ್ಲಿ ಮೂರು ತರಹದ ತೋಟಗಾರಿಕಾ ಬೆಳೆಯನ್ನಿಟ್ಟು, ಸಮೃದ್ಧವಾಗಿ ಬೆಳೆ ಬೆಳೆದು, ವಿಶೇಷವಾಗಿ ತೋಟದಲ್ಲಿ ಹೂಕೋಸು, ಗೋಲ್ಡ್ ಸಾವಂತಿಗೆ ಹೂ ಮತ್ತು ಕಾರಮಣಿಕಾಯಿ ಬೆಳೆದಿದ್ದು, ಬೆಳೆಯು ಉತ್ತಮ ಇಳುವರಿ ಬಂದಿರುವುದರಿಂದ ರೈತ ರಾಜಣ್ಣ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಳೆ ಅಭಾವದ ಕ್ಲಿಷ್ಟ ಸಂದರ್ಭದಲ್ಲೂ ಧೃತಿಗೆಡದೆ, ನೀರಾವರಿಗೆ ಪರ್ಯಾಯ ಮಾರ್ಗ ಹುಡುಕಿಕೊಂಡು ಮಿಶ್ರ ಬೆಳೆ ಬೆಳೆದು ಮಾದರಿ ರೈತ ಎನ್ನಿಸಿಕೊಂಡಿದ್ದಾರೆ.
ಬೆಲೆ ಸಿಕ್ಕರಷ್ಟೇ ಲಾಭ: ರೈತ ಹನುಮಂತಗೌಡ ಮಾತನಾಡಿ, ತೋಟದಲ್ಲಿ ಬೆಳೆಗಳಿಗೆ ಸಕಾಲದಲ್ಲಿ ನೀರು ಹಾಯಿಸುವುದು, ಔಷಧಿ ಸಿಂಪಡಿಸುವುದು, ಹೀಗೆ ದಿನನಿತ್ಯ ಕೃಷಿ ಕಾಯಕವನ್ನು ಮಾಡಿದ್ದ ಫಲವಾಗಿ ಸಮೃದ್ಧ ಬೆಳೆ ತೆಗೆಯಲಾಗಿದ್ದು, ಕೋವಿಡ್ ಸಂದರ್ಭದಿಂದ ಪ್ರಾರಂಭವಾದ ಕೃಷಿಕತನ ಮುಂದುವರೆಸಿಕೊಂಡು ಹೋಗಲಾಗಿದೆ. ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿದರೆ, ಲಾಭದಾಯಕವಾಗಿರುತ್ತದೆ ಎಂದರು.
ಮಳೆಯಿಲ್ಲದೆ ರೈತರು ಕಂಗೆಟ್ಟಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಆದರೂ ಕೃಷಿ ಚಟುವಟಿಕೆ ಮುಂದುವರಿಸಿಕೊಂಡು ಬಂದಿದ್ದೇವೆ. ಔಷಧಿ ಮತ್ತು ರಸಗೊಬ್ಬರ ಬೆಲೆ ಏರಿಕೆಹೆಚ್ಚಿದೆ. ರೈತರ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನೀಡಬೇಕು ಹಾಗೂ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.
– ಬೀರಸಂದ್ರ ರಾಜಣ್ಣ, ಮಾದರಿ ರೈತ
-ಎಸ್.ಮಹೇಶ್