Advertisement

ಮೆಸ್ಕಾಂನಿಂದ ಮಾದರಿ ವಿದ್ಯುತ್‌ ಗ್ರಾಮ: ಜಿಲ್ಲೆಯ 30 ಗ್ರಾಮಗಳು ಆಯ್ಕೆ

08:50 PM Sep 12, 2020 | mahesh |
ಉಡುಪಿ: ವಿದ್ಯುತ್‌ ಶಕ್ತಿಯ ಸಮರ್ಥ ಬಳಕೆಗೆ ಕ್ರಮ ಕೈಗೊಂಡಿರುವ ರಾಜ್ಯ ಸರಕಾರವು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ 5 ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ರೂಪಿಸುವ ಯೋಜನೆಗೆ ಉಡುಪಿ ಜಿಲ್ಲೆಯ 30 ಗ್ರಾಮಗಳು ಆಯ್ಕೆಯಾಗಿವೆ. ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರು ಆಯ್ಕೆ ಮಾಡಿರುವ ಗ್ರಾಮಗಳಲ್ಲಿ ವಿದ್ಯುತ್‌ ಸಂಬಂಧಿತ ಕೆಲಸ ಕಾರ್ಯಗಳು ನಡೆಯಲಿವೆ. ಸ್ಥಳೀಯ ವಿದ್ಯುತ್‌ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್‌ ಪರಿವರ್ತಕ ಕೇಂದ್ರಗಳನ್ನು ಸ್ಥಾಪಿಸುವುದು ಮಾದರಿ ಗ್ರಾಮ ಯೋಜನೆಯ ಆದ್ಯತೆಯಾಗಿದೆ. ವಿದ್ಯುತ್‌ ಪೋಲಾಗದಂತೆ ತಡೆಗಟ್ಟುವ ಜತೆಗೆ ಎಲ್ಲ ಕಡೆಗಳಲ್ಲಿ ತ್ರೀ ಫೇಸ್‌ ವಿತರಣೆಗೆ ಮಾರ್ಗ ನಿರ್ಮಿಸುವ ಹಾಗೂ ನಿರಂತರ ವಿದ್ಯುತ್ಛಕ್ತಿ ಲಭ್ಯತೆಗೆ ವಿಕೇಂದ್ರಿಕೃತ ವಿತರಣೆ, ಉತ್ಪಾದನೆ ಸಹ ಯೋಜನೆಯಲ್ಲಿ ಒಳಗೊಂಡಿದೆ.
12 ಕೋ.ರೂ. ವೆಚ್ಚದ ಯೋಜನೆ
ಒಟ್ಟು 12 ಕೋ.ರೂ.ಯೋಜನೆಯ ಕಾಮಗಾರಿ ಇದಾಗಿದೆ. ಆಯ್ಕೆಯಾಗಿರುವ ಪ್ರತೀ ಗ್ರಾಮಗಳಲ್ಲಿ 40 ಲ.ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಟೋಟರ್‌ ಟರ್ನ್ ಕೀ ಪ್ರಾಜೆಕ್ಟ್ ಇದಾಗಿದ್ದು ಎಲ್ಲ ಸಾಮಗ್ರಿಗಳನ್ನು ಗುತ್ತಿಗೆದಾರರೇ ತರಲಿದ್ದಾರೆ. ಒಬ್ಬ ಗುತ್ತಿಗೆದಾರನಿಗೆ 1ರಿಂದ 2 ಗ್ರಾಮಗಳನ್ನು ನೀಡಲಾಗಿದೆ. ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದ್ದು, ಜನವರಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. 1 ವರ್ಷಗಳ ಕಾಲ ಗುತ್ತಿಗೆದಾರರೇ ನಿರ್ವಹಣೆ ನೋಡಿಕೊಳ್ಳಲಿದ್ದಾರೆ. ಅನಂತರ ಮೆಸ್ಕಾಂಗೆ ಹಸ್ತಾಂತರ ನಡೆಯಲಿದೆ.
ನಡೆಯಲಿರುವ ಅಭಿವೃದ್ಧಿ ಕೆಲಸಗಳು
ಮಾದರಿ ವಿದ್ಯುತ್‌ ಗ್ರಾಮ ಯೋಜನೆಯು ವಿದ್ಯುತ್‌ ವ್ಯವಸ್ಥೆ ಬಲವರ್ಧನೆಗೆ ಆದ್ಯತೆ ನೀಡುತ್ತದೆ. ಅಪಾಯ ಕಾರಿ ಸ್ಥಿತಿಯಲ್ಲಿರುವ ವಿದ್ಯುತ್‌ ಕಂಬ, ಮಾರ್ಗ, ಪರಿವರ್ತಕ ದುರಸ್ತಿ ಮಾಡುವುದು, ಇಡೀ ಮಾರ್ಗಕ್ಕೆ ಸುರಕ್ಷಾ ವ್ಯವಸ್ಥೆ ಕಲ್ಪಿಸುವುದು, ಗ್ರಾಮದಲ್ಲಿ ಸೋಲಾರ್‌ ದೀಪ ಹಾಗೂ ಟೈಮರ್‌ ಸ್ವಿಚ್‌ ಅಳವಡಿಕೆ ಮೊದಲಾದ ಅಂಶಗಳನ್ನು ಒಳಗೊಂಡಿದೆ.
ಮಾದರಿ ಗ್ರಾಮ ಆಯ್ಕೆ ಹೇಗೆ?
ಅಗತ್ಯಕ್ಕೆ ಅನುಗುಣವಾಗಿ ಪ್ರತಿ ಹೋಬಳಿಗೆ ಒಂದು ಗ್ರಾಮದಂತೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 1000ದಿಂದ 2,000 ಜನಸಂಖ್ಯೆ ಇರುವ 5 ಗ್ರಾಮಗಳನ್ನು ಗುರುತಿಸಲಾಗುತ್ತದೆ. ಈ ಮೂಲಕ ಆ ಗ್ರಾಮಗಳಿಗೆ ಅನುದಾನ ಮೀಸಲಿಟ್ಟು ವಿದ್ಯುತ್‌ ಸುಸ್ಥಿತಿಗೆ ಆಗಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯುತ್‌ ಮಾರ್ಗ, ವಿದ್ಯುತ್‌ ಕಂಬ, ವಿದ್ಯುತ್‌ ಪರಿವರ್ತಕ ಸರಿಪಡಿಸುವುದು, ವೋಲ್ಟೆàಜ್‌ ತೊಂದರೆಯಾಗದಂತೆ ಅಗತ್ಯ ಪರಿವರ್ತಕ ಜೋಡಣೆ, ಹಳೆಯ ತಂತಿಗಳ ಬದಲಾವಣೆ, ಆಧುನಿಕ ರೀತಿಯಲ್ಲಿ ಬೀದಿ ದೀಪಗಳ ವ್ಯವಸ್ಥೆಗಳು ಈ ಯೋಜನೆಯಲ್ಲಿ ಇರಲಿದೆ.
ಗುರುತಿಸಲಾಗಿರುವ ಗ್ರಾಮಗಳು
ಕಾಪು ವಿಧಾನ ಸಭಾ ಕ್ಷೇತ್ರ
ಮಟ್ಟು, ಹೇರೂರು, ಪಿಲಾರು, ಮರ್ಣೆ, ಬೆಳ್ಳರ್ಪಾಡಿ
ಕಾರ್ಕಳ ವಿಧಾನ ಸಭಾ ಕ್ಷೇತ್ರ
ಹೆಬ್ರಿ, ವರಂಗ, ಸಾಣೂರು, ಬಜಗೋಳಿ, ನಿಟ್ಟೆ
ಉಡುಪಿ ವಿಧಾನಸಭಾ ಕ್ಷೇತ್ರ
ಮೂಡುತೋನ್ಸೆ, ಕಳತ್ತೂರು, ಹಲುವಳ್ಳಿ, ಕೆಂಜೂರು, ಹಾರಾಡಿ
ಕುಂದಾಪುರ ವಿಧಾನಸಭಾ ಕ್ಷೇತ್ರ
ಕಾಡೂರು, ಶಿರೂರು, ಅಮಾಸೆಬೈಲು, ಮಡಾಮಕ್ಕಿ, ಶೇಡಿಮನೆ 
ಬೈಂದೂರು ವಿಧಾನಸಭಾ ಕ್ಷೇತ್ರ ಅಂಪಾರು, ಸಿದ್ಧಾಪುರ, ನಾಡಾ, ಕಾಲತೋಡು, ಜಡ್ಕಲ್‌ 
ಉಡುಪಿ-ಚಿಕ್ಕಮಗಳೂರು ಲೋ. ಕ್ಷೇತ್ರ ಬೆಳ್ಮಣ್‌, ಅಲೆವೂರು, ನಾಲ್ಕೂರು, ಮೊಳಹಳ್ಳಿ, ಕಿರಿಮಂಜೇಶ್ವರ
05 ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಆಯ್ಕೆಯಾಗುವ ಗ್ರಾಮಗಳು
40 ಲ.ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ
Advertisement

Udayavani is now on Telegram. Click here to join our channel and stay updated with the latest news.

Next