Advertisement

ಮಹತ್ವಾಕಾಂಕ್ಷಿ ಯೋಜನೆಯಡಿ ಮಾದರಿ ಕಾಲೇಜು ನಿರ್ಮಾಣ

07:09 AM Feb 04, 2019 | |

ಶಹಾಪುರ: ದೇಶದ ಹಿಂದುಳಿದ ಜಿಲ್ಲೆ (ಆಸ್ಪರೇಶನ್‌) ಅಭಿವೃದ್ಧಿ ಯೋಜನೆಯಡಿ ನಗರಕ್ಕೆ ಸರ್ಕಾರಿ ಮಾದರಿ ಪದವಿ ಕಾಲೇಜು ಮಂಜೂರಾಗಿದ್ದು, 12 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಹೇಳಿದರು.

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ, ಉನ್ನತ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಉಚ್ಛತರ್‌ ಶಿಕ್ಷಾ ಅಭಿಯಾನ ಯೋಜನೆ ಅಡಿಯಲ್ಲಿ ಕಾಲೇಜು ಕಟ್ಟಡ ಕಾಮಗಾರಿ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದ ರಾಯಚೂರು, ಯಾದಗಿರಿ ಜಿಲ್ಲೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಈ ಯೋಜನೆ ಮಂಜೂರಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇದಿಂದ ಸಕಲ ವ್ಯವಸ್ಥೆ ಒಳಗೊಂಡಿರುವ ಮಾದರಿ ಕಾಲೇಜು ಇದಾಗಲಿದೆ ಎಂದರು.

ಈಗಾಗಲೇ ಪ್ರಧಾನ ಮಂತ್ರಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ಡಿಜಿಟಲ್‌ ಲಾಂಚ್ ಮಾಡಿದ್ದು, ಈ ಯೋಜನೆ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉನ್ನತಿ ಸಾಧಿಸಬೇಕು ಎಂದು ಹೇಳಿದ್ದಾರೆ.

ಗುಲ್ಬರ್ಗಾ ವಿಶ್ವ ವಿದ್ಯಾಲಯ ಉಪ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ್‌ ಮಾತನಾಡಿ, ಗುಲಬರ್ಗಾ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ 480 ಕಾಲೇಜು, 65 ಬಿ.ಎಡ್‌. ಕಾಲೇಜು ಬರುತ್ತವೆ. ರಾಯಚೂರು ಪ್ರತ್ಯೇಕ ವಿಶ್ವ ವಿದ್ಯಾಲಯ ಮಾಡುವ ಯೋಜನೆ ಇದ್ದು, ಇನ್ನೂ ಗೆಜೆಟ್ ಆಗಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ. ವಿದ್ಯಾರ್ಥಿಗಳ ಮನಸ್ಥಿತಿ ಬದಲಾಗಬೇಕು. ತಾಂತ್ರಿಕತೆ ಅಗತ್ಯವಾದಷ್ಟು ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

Advertisement

ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆ ಇದ್ದು, ಅದಕ್ಕೆ ಪೂರಕ ವಾತಾವರಣ ರೂಪಿಸಬೇಕಿದೆ. ಅವಕಾಶ ಹಾಗೂ ಆಯ್ಕೆಯನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಉನ್ನತಿ ಸಾಧಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದೇಶದ ವಿಶ್ವ ವಿದ್ಯಾಲಯದ ಅಭ್ಯಾಸ ಮಾಡುವ ಸಾಮರ್ಥ್ಯವನ್ನು ಬೆಳೆಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ ಸಂಗಮೇಶ ಜಿಡಗೆ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಪ್ರೊ| ಮಲ್ಲೇಶಪ್ಪ, ಪ್ರಾಚಾರ್ಯ ವಿ.ಎಂ. ಹಿರೇಮಠ, ಉಪನ್ಯಾಸಕ ಡಾ| ಹಯ್ನಾಳಪ್ಪ ಹಯ್ನಾಳಕರ್‌, ಸುರೇಶ, ಆನಂದ ಜೋಶಿ, ಚನ್ನಾರಡ್ಡಿ ಪಾಟೀಲ, ನೀಲಕಂಠ ಬಡಿಗೇರ ಇದ್ದರು.

ಆಸ್ಪರೇಷನ್‌ ಯೋಜನೆಯಡಿ ಆಯ್ಕೆಯಾದ ಕಾಲೇಜುಗಳನ್ನು ದೇಶದ ಎಲ್ಲೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರದಾದ್ಯಂತ ವಿಡಿಯೋ ಕಾನ್ಫರೆನ್ಸ್‌ ಮೂಲಕ ಡಿಜಿಟಲ್‌ ಲಾಂಚ್ ಮಾಡಿದ್ದಾರೆ. ಇದು ಉತ್ತಮ ಯೋಜನೆಯಾಗಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು.
•ಎಂ. ಕೂರ್ಮಾರಾವ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next