Advertisement

ಕಾಲಮಿತಿಯಲ್ಲಿ ಪ್ರಮಾಣಪತ್ರ ನೀಡದಿದ್ರೆ ಕ್ರಮ

07:49 AM Nov 16, 2017 | Team Udayavani |

ವಿಧಾನಪರಿಷತ್ತು: “ಸಕಾಲ ಯೋಜನೆಯಡಿ 21 ದಿನಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

Advertisement

ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ರಘುನಾಥರಾವ್‌ ಮಲ್ಕಾಪುರೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ವಿತರಣೆಯನ್ನು ಸಕಾಲ ಯೋಜನೆಯಡಿ ಸೇರಿಸಲಾಗಿದ್ದು, ಅದರಂತೆ ಪ್ರಮಾಣಪತ್ರಗಳನ್ನು 21 ದಿನಗಳೊಳಗೆ ವಿತರಿಸಬೇಕು. ನಿಗದಿತ ಅವಧಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ರಘುನಾಥ್‌ ರಾವ್‌ ಮಲ್ಕಾಪುರೆ, ಸಚಿವರು ಕೊಟ್ಟ ಉತ್ತರದಲ್ಲಿ 2015-16 ಹಾಗೂ 2016-17ರಲ್ಲಿ ಬೀದರ್‌ ಜಿಲ್ಲೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ 82 ಸಾವಿರ ಅರ್ಜಿಗಳು ಸ್ವೀಕೃತವಾಗಿದ್ದು, 39,638 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 39,547 ಅರ್ಜಿಗಳು ತಿರಸ್ಕೃತಗೊಂಡಿವೆ. 2,824 ಅರ್ಜಿಗಳ ವಿಲೇವಾರಿ ಬಾಕಿ ಇವೆ ಎಂದು ಹೇಳಲಾಗಿದೆ. ಎರಡು ವರ್ಷಗಳಲ್ಲಿ ಸಲ್ಲಿಕೆಯಾದ ಒಟ್ಟು ಅರ್ಜಿಗಳಲ್ಲಿ ಶೇ.60 ಅರ್ಜಿಗಳು ತಿರಸ್ಕೃತವಾಗಿರುವುದು ಗಂಭೀರ ವಿಷಯವಾಗಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಧಿವೇಶನ ಮುಗಿದ ಬಳಿಕ ಬೀದರ್‌ ಮತ್ತು ಕಲಬುರಗಿ ಜಿಲ್ಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. 

ವಿಳಂಬ ಅನ್ನುವುದು ಸಂಸ್ಕೃತಿಯಾಗಿದೆ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆ ವಿಳಂಬದ ಬಗ್ಗೆ ಸದಸ್ಯರು ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ಸಚಿವ ಕಾಗೋಡು ತಿಮ್ಮಪ್ಪ, ವಿಳಂಬ ಆಗುತ್ತಿರುವುದಕ್ಕೆ ಕ್ಷಮೆ ಕೇಳುತ್ತೇನೆ. ಆದರೆ, ಈ ವಿಳಂಬ ಇಂದು-ನಿನ್ನೆಯದ್ದಲ್ಲ.ಆಡಳಿತದಲ್ಲಿ ವಿಳಂಬ ಅನ್ನುವುದು ಒಂದು ಸಂಸ್ಕೃತಿಯಾಗಿ ಬೆಳೆದು ಬಂದಿದೆ. ಇದಕ್ಕೆ ಕಬ್ಬಿಣ ಕಾಯಿಸಿ ಶಿಕ್ಷಿಸುವ ಅಗತ್ಯವಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ 
ಹೇಳಿದರು.

Advertisement

ಅಕ್ರಮ- ಸಕ್ರಮ ಕುರಿತು ಉತ್ತರ ಸಿಗದಿದ್ದಕ್ಕೆ ಧರಣಿ
ವಿಧಾನಪರಿಷತ್ತು: ಪ್ರಶ್ನೆಗೆ ಉತ್ತರಿಸಲು ಕಂದಾಯ ಸಚಿವರು ಕಾಲಾವಕಾಶ ಕೇಳಿದ್ದಕ್ಕೆ ಆಕ್ರೋಶಗೊಂಡ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಭಾಪತಿಗಳ ಪೀಠದೆದುರು ಧರಣಿ ನಡೆಸಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ವೇಳೆಯಲ್ಲಿ ಬುಧವಾರ ಕಾಂಗ್ರೆಸ್‌ ಸದಸ್ಯ ಐವನ್‌ ಡಿಸೋಜ ಕೇಳಿದ್ದ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿಗಳ ಇತ್ಯರ್ಥದ ಕುರಿತು ಪ್ರಶ್ನೆಗೆ ಉತ್ತರಿಸಲು ಕಂದಾಯ ಸಚಿವರು ಕಾಲಾವಕಾಶ ಕೇಳಿದ್ದಾರೆ ಎಂದು ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಪ್ರಕಟಿಸಿದರು. ಇದಕ್ಕೆ ಅಸಮಧಾನಗೊಂಡ ಕೋಟ ಶ್ರೀನಿವಾಸ ಪೂಜಾರಿ, “ನಾನೂ ಅದೇ ಪ್ರಶ್ನೆ ಕೇಳಿದ್ದೇನೆ. ಲಕ್ಷಾಂತರ ಜನ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಸಚಿವರು ಉತ್ತರ ಕೊಡುವುದು ಬಿಟ್ಟು ಕಾಲಾವಕಾಶ ಕೇಳುತ್ತಿದ್ದಾರೆ. ಈ ಧೋರಣೆ ಸರಿಯಲ್ಲ ‘ ಎಂದು ಸಭಾಪತಿಗಳ ಪೀಠದೆದುರು ಧಾವಿಸಿ ಧರಣಿ ಆರಂಭಿಸಿದರು. ಅಧಿವೇಶನ ಮುಗಿಯುವುದರೊಳಗೆ ಉತ್ತರ ಕೊಡಿಸುವುದಾಗಿ ಸಭಾನಾಯಕ ಎಂ.ಆರ್‌. ಸೀತಾರಾಂ ಹಾಗೂ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಹೇಳಿದ ನಂತರ ಧರಣಿ ವಾಪಸ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next