Advertisement
ಈ ಬಗ್ಗೆ ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಕಾದಿರಿಸಲಾಗಿದ್ದ ತೀರ್ಪನ್ನು ಬುಧವಾರ ಪ್ರಕಟಿಸಿರುವ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ರ ಪ್ರಕ್ರಿಯೆಯನ್ನು ಪಾಲಿಸಲಾಗಿಲ್ಲ. ಅವರು ಶಾಸಕರಾಗಿದ್ದಾಗ ಸೆಕ್ಷನ್ 17 ಎ ಅಡಿಯಲ್ಲಿ ಕ್ರಮ ಕೈಗೊಳ್ಳಲು ವಿಧಾನಸಭೆ ಸ್ಪೀಕರ್‌ನ ಪೂರ್ವಾನುಮತಿ ಪಡೆದುಕೊಂಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಅರ್ಜಿದಾರರ ಪರ ಸಂದೀಪ್ ಪಾಟೀಲ್ ವಕಾಲತ್ತು ವಹಿಸಿದ್ದು, ಹಿರಿಯ ನ್ಯಾಯವಾದಿ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿದ್ದರು. ಪ್ರಕರಣದ ದೂರುದಾರ ಶ್ರೇಯಸ್ ಕಶ್ಯಪ್‌ರ ಕಂಪೆನಿಗೆ ಮಾಡಾಳು ವಿರೂಪಾಕ್ಷಪ್ಪ ಅಧ್ಯಕ್ಷರಾಗಿದ್ದ ಕೆಎಸ್‌ಡಿಎಲ್‌ಯಿಂದ ಟೆಂಡರ್ ಕಾರ್ಯಾದೇಶ ನೀಡಲು ಶೇ.30ರಷ್ಟು ಕಮಿಷನ್ ಕೇಳಲಾಗಿದೆ ಎಂಬ ಆರೋಪವಿದೆ. ಆದರೆ ಟೆಂಡರ್ ಅಂತಿಮಗೊಳಿಸಿ ಕಾರ್ಯದೇಶ ನೀಡುವ ಅಧಿಕಾರ ವಿರೂಪಾಕ್ಷಪ್ಪರಿಗೆ ಇಲ್ಲ. ಅವರು ಲಂಚಕ್ಕೆ ಬೇಡಿಕೆಯಿಟ್ಟ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ. ಪುತ್ರನೊಂದಿಗೆ ಮಾತನಾಡುವಂತೆ ಅರ್ಜಿದಾರರು ತಿಳಿಸಿರುವುದಾಗಿ ಆರೋಪಿಸಲಾಗಿದೆ. ಒಂದು ರೂಪಾಯಿಯನ್ನೂ ಪಡೆಯದೆ ಟೆಂಡರ್ ಕಾರ್ಯಾದೇಶ ನೀಡಲಾಗಿದೆ. ಅಲ್ಲದೆ, ಪ್ರಕರಣ ಸಂಬಂಧ ವಿರೂಪಾಕ್ಷಪ್ಪ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ. ಅವರು ಲಂಚಕ್ಕೆ ಬೇಡಿಕೆಯಿಟ್ಟಿಲ್ಲ ಹಾಗೂ ಸ್ವೀಕರಿಸಿಯೂ ಇಲ್ಲ ಎಂದು ವಿರೂಪಾಕ್ಷಪ್ಪ ವರ ವಕೀಲರು ವಾದಿಸಿದ್ದರು.
Related Articles
ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳು 40 ಲಕ್ಷ ರೂ. ಲಂಚ ಕೇಳಿದ ಪ್ರಕರಣವಿದು. ಮೆರ್ಸೆಸ್ ಡಿಲಿಸಿಯಾ ಕೆಮಿಕಲ್ಸ್ ಕಂಪೆನಿಯಿಂದ ಕೆಮಿಕಲ್ ಆಯಿಲ್ ಖರೀದಿಯ ಟೆಂಡರ್ ಹಂಚಿಕೆ ಮಾಡಿರುವುದಕ್ಕೆ ಪ್ರತಿಯಾಗಿ ದೂರುದಾರ ಶ್ರೇಯಸ್ ಕಶ್ಯಪ್ ಈ ಮೊತ್ತ ನೀಡಿದ್ದರು. ಪ್ರಶಾಂತ್ ಮಾಡಾಳು ಲಂಚ ಕೇಳಿದ್ದ ಹಿನ್ನೆಲೆಯಲ್ಲಿ ಶ್ರೇಯಸ್ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾ.2ರಂದು ಎಫ್ಐಆರ್ ದಾಖಲಿಸಿದ್ದರು. ಅದರಲ್ಲಿ ವಿರೂಪಾಕ್ಷಪ್ಪ ಮೊದಲ ಹಾಗೂ ಪ್ರಶಾಂತ್ ಮಾಡಾಳು 2ನೇ ಆರೋಪಿಯಾಗಿದ್ದರು. 2023ರ ಮಾರ್ಚ್ 7ರಂದು ಹೈಕೋರ್ಟ್‌ಗೆ ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣ ಜಾಮೀನು ಮಂಜೂರು ಮಾಡಿತ್ತು.
Advertisement
ಹೈಕೋರ್ಟ್ ಹೇಳಿದ್ದೇನು?“ನ್ಯಾಯಾಲಯದ ಈ ತೀರ್ಪು ಮತ್ತು ಅಭಿಪ್ರಾಯಗಳು ಮಾಡಾಳು ವಿರೂಪಾಕ್ಷಪ್ಪ ಅವರ ಪ್ರಕರಣಕ್ಕೆ ಮಾತ್ರ ಅನ್ವಯಿಸಲಿವೆ. ಪ್ರಕರಣದ ಇತರ ಆರೋಪಿಗಳ ವಿರುದ್ಧದ ತನಿಖೆ ಮತ್ತು ಯಾವುದೇ ನ್ಯಾಯಾಲಯದ ವಿಚಾರಣೆ ಮೇಲೆ ಪ್ರಭಾವ ಬೀರುವುದಿಲ್ಲ. ಪ್ರಕರಣದ ಎರಡನೇ ಆರೋಪಿ ವಿರೂಪಾಕ್ಷಪ್ಪ ಅವರ ಪುತ್ರ ಎಂ.ವಿ. ಪ್ರಶಾಂತ್ ಕುಮಾರ್ ಮೇಲಿನ ಆರೋಪಗಳಿಗೆ ಸಾಕ್ಷವಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ, ಅವರ ವಿರುದ್ಧದ ವಿಚಾರಣೆ ನಡೆಯಬೇಕಿದೆ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. “ಮಾಡಾಳ್ ವಿರೂಪಾಕ್ಷಪ್ಪ ಲಂಚಕ್ಕೆ ಬೇಡಿಕೆಯಿಟ್ಟ ಹಾಗೂ ಲಂಚ ಸ್ವೀಕರಿಸಿದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ದೂರಿನಲ್ಲಿ 2ನೇ ಆರೋಪಿ ಅರ್ಜಿದಾರರ ಪುತ್ರ ಪ್ರಶಾಂತ್ ವಿರುದ್ಧ ಲಂಚದ ಆರೋಪವಿದ್ದು, ಅವರ ಮನೆಯಲ್ಲಿ 6.10 ಕೋ. ರೂ. ಪತ್ತೆಯಾಗಿದೆ. ಆದರೆ ಈ ಹಣಕ್ಕೂ ಮಾಡಾಳ್ ವಿರೂಪಾಕ್ಷಪ್ಪ ಆವರಿಗೂ ಸಂಬಂಧ ಕಲ್ಪಿಸುವ ದಾಖಲೆ ದೊರೆತಿಲ್ಲ. ಪುತ್ರನ ಬಳಿ ದೊರೆತ ಹಣಕ್ಕೆ ಅಪ್ಪನನ್ನು ವಿಚಾರಣೆಗೆ ಒಳಪಡಿಸುವುದು ಸರಿಯಲ್ಲ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. “ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ರ ಪ್ರಕಾರ ಸರಕಾರಿ ಸೇವಕರ ವಿರುದ್ಧ ಎಫ್ಐಆರ್ ದಾಖಲಿಸಬೇಕಾದರೆ ಸಂಬಂಧಪಟ್ಟ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯ ಬೇಕಾಗುತ್ತದೆ. ಈ ನಿಯಮವನ್ನು ವಿರೂಪಾಕ್ಷಪ್ಪ ಅವರ ವಿರುದ್ಧದ ಪ್ರಕರಣದಲ್ಲಿ ಪಾಲಿಸಿಲ್ಲ. ಇಂತಹ ಸಂದರ್ಭದಲ್ಲಿ ಪ್ರಕರಣ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗಲಿದೆ’ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ವಿರೂಪಾಕ್ಷಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಿಸಿದ್ದ ಎಫ್ಐಆರ್ ಮತ್ತು ವಿಚಾರಣ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಿ ಆದೇಶಿಸಿದೆ.