Advertisement

ಎಫ್ಬಿಯಲ್ಲಿ ಅವಹೇಳನ: ಮೇಯರ್‌ ದೂರು

01:00 AM Jul 21, 2019 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ಮಹಾಪೌರರು ಈ ಬಾರಿ ಹಿಂದೂಗಳಿಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಬಿಡುವುದಿಲ್ಲ ಎಂಬ ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಅವಾಚ್ಯ ಪದಗಳಿಂದ ನಿಂದಿಸುತ್ತಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮೇಯರ್‌ ಗಂಗಾಂಬಿಕೆ ಅವರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

Advertisement

ದೂರು ಸ್ವೀಕರಿಸಿದ ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌, ಪ್ರಕರಣವನ್ನು ಸಿದ್ಧಾಪುರ ಠಾಣೆಗೆ ವರ್ಗಾವಣೆ ಮಾಡಿದ್ದು, ಈ ಸಂಬಂಧ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ “ಮಣಿಕಂಠ ಭಾರದ್ವಾಜ್‌’ ಮತ್ತು “ಮೋದಿ ಭಕ್ತ’ ಎಂಬ ಫೇಸ್‌ಬುಕ್‌ ಖಾತೆದಾರರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

“ಈ ಬಾರಿ ಮೇಯರ್‌ ಗಂಗಾಂಬಿಕೆ ಅವರು ಹಿಂದೂಗಳಿಗೆ ಗಣೇಶ ಮೂರ್ತಿಯನ್ನು ರಸ್ತೆಯಲ್ಲಿ ಪ್ರತಿಷ್ಠಾಪನೆ ಮಾಡಲು ಬಿಡುವುದಿಲ್ಲ’ ಎಂದು ಮಣಿಕಂಠ ಭಾರದ್ವಾಜ್‌ ಮತ್ತು ಮೋದಿ ಭಕ್ತ ಎಂಬ ಫೇಸ್‌ಬುಕ್‌ ಖಾತೆಯಲ್ಲಿ, ಸುಳ್ಳು ಸಂದೇಶ ರವಾನಿಸುವ ಜತೆಗೆ ಮೇಯರ್‌ರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಅದನ್ನು ಇತರೆ ಖಾತೆಗಳಿಗೆ ಶೇರ್‌ ಮಾಡಿದ್ದಾರೆ.

ಜತಗೆ ಮೇಯರ್‌ ಗಂಗಾಂಬಿಕೆ ಅವರ ಪತಿಯ ಬಗ್ಗೆಯೂ ಆರೋಪ ಮಾಡಿದ್ದಾರೆ. ಇದರಿಂದಾಗಿ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದ್ದು, ಹಿಂದೂ ಧರ್ಮದ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿರುವ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮೇಯರ್‌ ಗಂಗಾಂಬಿಕೆ ದೂರಿನಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next