ನೆಲಮಂಗಲ: ತಾಲೂಕಿನ ಮುಖ್ಯರಸ್ತೆಯಲ್ಲಿರುವ ಯಮ ಸ್ವರೂಪಿ ಗುಂಡಿಗಳನ್ನು 15 ದಿನದಲ್ಲಿ ಮುಚ್ಚದಿದ್ದರೆ ಶಾಸಕರ ಮನೆಯವರೆಗೂ ಅಣಕು ಶವಯಾತ್ರೆ ಮಾಡಲಾಗುತ್ತದೆ ಎಂದು ನಮ್ಮ ಕರವೇ ಸಂಸ್ಥಾಪಕ ಅಧ್ಯಕ್ಷ ಲಯನ್ ಜಯ ರಾಜ್ ನಾಯ್ಡು ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಬೆಸ್ಕಾಂ ಇಲಾಖೆಯ ಎದುರಿನ ಬಿ.ಹೆಚ್ ರಸ್ತೆಯಲ್ಲಿರುವ ಗುಂಡಿಗಳಲ್ಲಿ ನಮ್ಮ ಕರವೇ ಕಾರ್ಯಕರ್ತರು ಹೋಮ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು. ರಸ್ತೆಗಳಿಗೆ ಕೋಟಿಕೋಟಿ ಅನುದಾನ ಖರ್ಚುಮಾಡಿ ಡಾಂಬರೀಕರಣ ಮಾಡಿದ ಕೆಲವೇ ದಿನಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ ಎಂದು ಆರೋಪಿಸಿದರು.
ಇದರಿಂದ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತಿದ್ದಾರೆ, ಕೆಲವರು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು, ಅಪಘಾತಕ್ಕೆ ಕಾರಣವಾಗಿರುವ ಗುಂಡಿಗಳಿಗೆ ತೇಪೆಯಾಕುವಂತಹ ಕೆಲಸ ಮಾಡುವುದನ್ನು ಬಿಟ್ಟು ಸಂಪೂರ್ಣ ಡಾಂಬರೀಕರಣ ಮಾಡಬೇಕು ಎಂದು ಪ್ರತಿಭಟನೆಗಾರರು ಆಗ್ರಹಿಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ಎನ್.ಸಿ ರುದ್ರೇಶ್ ಮಾತನಾಡಿ ಪಟ್ಟಣದ ರಸ್ತೆಗಳಲ್ಲಿ ಸಾಲುಸಾಲು ಗುಂಡಿಗಳಿದ್ದು ವಾಹನ ಸವಾರರು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ, ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.
ಕಚೇರಿ ಖಾಲಿ: ಪ್ರತಿಭಟನೆ ಮಾಡಿದ ನಮ್ಮ ಕರವೇ ಕಾಯಕರ್ತರು ಲೋಕೋಪಯೋಗಿ ಇಲಾಖೆಗೆ ಮನವಿ ಪತ್ರ ಸಲ್ಲಿಸಲು ಕಚೇರಿಗೆ ತೆರಳಿದಾಗ ಕಚೇರಿಯಲ್ಲಿ ಯಾವುದೇ ಅಧಿಕಾರಿ ಇಲ್ಲದ್ದು, ಕಂಡು ಅಧಿಕಾರಿಗಳ ಪತ್ತೆ ಮಾಡಿಕೊಡಿ ಎಂದು ಘೋಷಣೆ ಕೂಗಿದರು.
ನಮ್ಮ ಕರವೇ ಮಹಿಳಾ ಅಧ್ಯಕ್ಷೆ ಮಂಜುಳಾ ನಾಯ್ಡು,ತಾ. ಪ್ರಧಾನ ಕಾರ್ಯದರ್ಶಿ ಮರಿಯಪ್ಪ, ಉಪಾಧ್ಯಕ್ಷರು ನಟರಾಜ್,ಕಾರ್ಯಾಧ್ಯಕ್ಷ ಹರೀಶ್‌ರಾಜ್, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಸಂಚಾಲಕ ಪ್ರಸಾದ್, ಗೌರವಾಧ್ಯಕ್ಷ ರೇಣುಕಾ ಪ್ರಶಾಂತ್, ಜಂಟಿ ಕಾರ್ಯದರ್ಶಿ ಶ್ರೀನಿವಾಸ್,ದಯಾನಂದ್, ರಘುವೀರ್, ಯುವರಾಜು ಮತ್ತಿತರರಿದ್ದರು.