Advertisement
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಣಕು ಸಂಸತ್ ಸ್ಪರ್ಧೆಯ ಚಿತ್ರಣಗಳಿವು. ನೀರಾವರಿ ಯೋಜನೆಗಳ ವೈಫಲ್ಯ, ಕನ್ನಡ ಶಾಲೆಗಳ ಅಭಿವೃದ್ಧಿಗೆ ಅನಾದರದ ಬಗ್ಗೆ ಪ್ರತಿಪಕ್ಷದ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
Related Articles
Advertisement
ಲಕ್ಷಾಂತರ ಟನ್ ಗೋದಿ ವಿತರಣೆಯಾಗದೆ ಗೋದಾಮುಗಳಲ್ಲಿ ಕೊಳೆಯುತ್ತಿದೆ. ಆದರೆ, ಅನ್ನಭಾಗ್ಯದ ಹೆಸರಲ್ಲಿ ಸರ್ಕಾರ ಕೋಟಿ ಕೋಟಿ ಲೂಟಿ ಮಾಡುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಆಹಾರ ಖಾತೆ ಸಚಿವರು, ಕೆಲ ಜಿಲ್ಲೆಗಳಲ್ಲಿ 600 ಕ್ವಿಂಟಲ್ ಗೋದಿ ವಿತರಣೆಯಾಗದೆ ಉಳಿದಿದೆ.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ನೀರಾವರಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಕೊಡುವುದಾಗಿ ಹೇಳಿದ್ದ ಸರ್ಕಾರ ಮಾತು ತಪ್ಪಿದೆ. ರಾಂಪುರ ಏತ ನೀರಾವರಿ, ಸಿಂಗಟಲಾಲೂರು ಏತ ನೀರಾವರಿ ಯೋಜನೆಗಳು ಇನ್ನೂ ಮುಗಿದೇ ಇಲ್ಲ ಎಂದು ಪ್ರತಿಪಕ್ಷದ ನಾಯಕರು ತರಾಟೆಗೆ ತೆಗೆದುಕೊಂಡರು.
ಮಾಹಿತಿ ಇಲ್ಲದೇ ಮಾತನಾಡಬೇಡಿ ಎಂದು ಜರಿದ ಜಲಸಂಪನ್ಮೂಲ ಖಾತೆ ಸಚಿವ, ಈಗಾಗಲೇ ಬಹುತೇಕ ಏತ ನೀರಾವರಿ ಯೋಜನೆಗಳು ಮುಗಿಯುವ ಹಂತದಲ್ಲಿವೆ. ಆಲಮಟ್ಟಿ ಜಲಾಶಯದ ಎತ್ತರ ಐದು ಅಡಿಗೆ ಎತ್ತರಿಸುವ ಯೋಚನೆಯಿದೆ. ನಮ್ಮದು ರೈತಪರ ಸರ್ಕಾರ ಎಂದರು.
ಪ್ರತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆಯಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದ್ದಂತೆ, ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಪ್ರತಾಪ, ಸಿಐಡಿ ತನಿಖೆ ನಡೆಯುತ್ತಿದೆ. ನಮಗೆ ಎಲ್ಲದರ ಕಾಳಜಿ ಇದೆ. ಬೇಕಾಬಿಟ್ಟಿ ಆರೋಪ ಮಾಡಬೇಡಿ ಎಂದು ತಾಕೀತು ಮಾಡಿದರು. ಸದನದಲ್ಲಿ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಸುರಿಯಿತು. ಸಭೆ ನಿಯಂತ್ರಿಸುವಲ್ಲಿ ಸಭಾಧ್ಯಕ್ಷರು ಹೈರಾಣವಾದರು.
ನೆಲ ಡೊಂಕು ಎಂದಂತೆ: ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಆಡಳಿತ ಪಕ್ಷದವರು ತಡಕಾಡಿದರು. ಯಾವುದೋ ಪ್ರಶ್ನೆಗೆ ಮತ್ತೇನೋ ವಿವರಣೆ ನೀಡುತ್ತಿದ್ದರು. ಇದರಿಂದ ಪ್ರತಿಪಕ್ಷದ ನಾಯಕಿ ಚಂದ್ರಿಕಾ, ಕುಣಿಯೋಕೆ ಬಾರದವರು ನೆಲಡೊಂಕು ಎಂದಂತೆ ಪ್ರತಿಪಕ್ಷದವರಿಗೆ ಉತ್ತರಿಸೋಕೆ ಬಾರದೆ ಅರಚಾಡುತ್ತಿದ್ದಾರೆ ಎಂದು ಟೀಕಿಸಿದರು.
ಆಂಗ್ಲ ಭಾಷೆ ಬಳಕೆ: ಮಾತನಾಡುವಾಗ ಆಂಗ್ಲ ಭಾಷೆ ಬಳಸಿದ್ದು ಗಮನಕ್ಕೆ ಬಂದಾಕ್ಷಣ ಸದಸ್ಯರು ಸಭಾಧ್ಯಕ್ಷರಿಗೆ ದೂರುತ್ತಿದ್ದರು. ಅಪ್ಪಿ ತಪ್ಪಿಯೂ ಯಾರು ಆಂಗ್ಲ ಭಾಷೆ ಬಳಸುತ್ತಿರಲಿಲ್ಲ. ಪ್ರತಿಪಕ್ಷದ ನಾಯಕ ಆಂಗ್ಲ ಪದ ಬಳಸಿದ್ದಕ್ಕೆ ಎಲ್ಲರೂ ತರಾಟೆಗೆ ತೆಗೆದುಕೊಂಡರು. ತಪ್ಪಿನ ಅರಿವಾಗಿ ಕ್ಷಮಿಸಿ ಎಂದು ಕೇಳುವ ಬದಲು ಪುನಃ ಆಂಗ್ಲ ಭಾಷೆಯಲ್ಲಿ ಸಾರಿ ಎಂದು ಕೇಳಿಬಟ್ಟರು. ಇದರಿಂದ ಸಭೆ ಮತ್ತಷ್ಟು ಗದ್ದಲಕ್ಕೇರಿತು.
ಭಿನ್ನ ವೇಷಭೂಷಣ ಕಾರ್ಯಕ್ರಮಕ್ಕೂ ಮುನ್ನ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಪ್ರತಿತಾಲೂಕಿನಿಂದ ಆಡಳಿತ ಪಕ್ಷಕ್ಕೆ ಎಂಟು, ಪ್ರತಿಪಕ್ಷಕ್ಕೆ ಏಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಗಬ್ಬೂರು
ಪ್ರೌಢಶಾಲೆ ವಿದ್ಯಾರ್ಥಿ ಅಕ್ಷತಾ ಸಭಾಧ್ಯಕ್ಷೆಯಾಗಿ ಆಯ್ಕೆಯಾದರೆ, ತಿಡಿಗೋಳ ಶಾಲೆ ವಿದ್ಯಾರ್ಥಿ ಪ್ರತಾಪ
ಮುಖ್ಯಮಂತ್ರಿಯಾಗಿ, ಉದಾಳ ಶಾಲೆಯ ಚಂದ್ರಿಕಾ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾದರು.
ಮಕ್ಕಳು ಅಪ್ಪಟ ಜನನಾಯಕರಂತೆ ವೇಷ ಭೂಷಣ ಧರಿಸಿದ್ದು ಗಮನ ಸೆಳೆಯಿತು. ಒಟ್ಟಾರೆ ಮಕ್ಕಳು ಭಾವಿ ನಾಯಕರಂತೆ ಭಾಷಣ ಮಾಡುತ್ತಿರುವುದು ಗಮನ ಸೆಳೆಯಿತು. ಜಿಲ್ಲಾ ಮಟ್ಟದಲ್ಲಿ
ಆಯ್ಕೆಯಾದ ಮಕ್ಕಳನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು ಎಂದು ಆಯೋಜಕರು ತಿಳಿಸಿದರು ಪ್ರಜಾಪ್ರಭುತ್ವ ದೇಶದ ಬುನಾದಿ ಪ್ರಜಾಪ್ರಭುತ್ವ ದೇಶದ ಬುನಾದಿಯಿದ್ದಂತೆ. ಇಲ್ಲಿ ಅನೇಕ ವಿಚಾರಗಳು ಏಕಕಾಲಕ್ಕೆ
ಹರಿಯುತ್ತವೆ. ಇಂಥ ವ್ಯವಸ್ಥೆ ಬಗ್ಗೆ ಭಾವಿ ಪ್ರಜೆಗಳು ಅರಿಯುವುದು ಸೂಕ್ತ ಎಂದು ಜಿಪಂ ಸಿಇಒ ಅಭಿರಾಂ ಜಿ. ಶಂಕರ ಹೇಳಿದರು. ಜಿಲ್ಲಾ ಮಟ್ಟದ ಅಣಕು ಸಂಸತ್ ಸ್ಪರ್ಧೆ ಉದ್ಘಾಟಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮುಕ್ತವಾಗಿ ಬಾಳಲು ಪ್ರಜಾಪ್ರಭುತ್ವ ಬೇಕು. ಅಂಥ ವ್ಯವಸ್ಥೆ ರಕ್ಷಣೆಯಾಗಬೇಕಾದರೆ ಯುವಕರು ರಾಜಕೀಯಕ್ಕೆ ಬರಬೇಕು ಎಂದು ಹೇಳಿದರು. ಡಿಡಿಪಿಐ ಬಷೀರ್ ಅಹ್ಮದ್ ನಂದನೂರು ಮಾತನಾಡಿ, ಇದು ಆಡಳಿತ ವ್ಯವಸ್ಥೆ ಪ್ರತಿಬಿಂಬ. ಬಲಿಷ್ಠ ಪ್ರಜಾಪ್ರಭುತ್ವ ಅಣಿಗೊಳಿಸಲು ಇಂಥ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸೈಯ್ಯದ್ ಸಿರಾಜುದ್ದೀನ್, ಸಮಾಜ ವಿಜ್ಞಾನ ಶಿಕ್ಷಕರ ವೇದಿಕೆ ಅಧ್ಯಕ್ಷ ವೆಂಕಟೇಶ ಜಾಲಿಬೆಂಚಿ ಸೇರಿ ಇತರರಿದ್ದರು.