Advertisement

ಹೊಸವರ್ಷದಿಂದ ಮೊಬೈಲಿಟಿ ಕಾರ್ಡ್‌

11:43 AM Oct 09, 2019 | Suhan S |

ಬೆಂಗಳೂರು: ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ “ಒಂದು ದೇಶ ಒಂದು ಕಾರ್ಡ್‌’ ವ್ಯವಸ್ಥೆಯನ್ನು “ನಮ್ಮ ಮೆಟ್ರೋ’ ಮೊದಲ ಹಂತದ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲು ಸಿದ್ಧತೆ ನಡೆದಿದ್ದು, ಇದಕ್ಕೆ ಅಗತ್ಯವಿರುವ ಆಟೋಮೆಟಿಕ್‌ ಫೇರ್‌ ಕಲೆಕ್ಷನ್‌ ಗೇಟ್‌ಗಳು ಬರುವ ತಿಂಗಳಲ್ಲೇ ಪೂರೈಕೆ ಆಗಲಿವೆ.

Advertisement

2020ರ ಜನವರಿ 1ರಿಂದ ಕಾರ್ಯಾಚರಣೆ ಮಾಡಲಿವೆ. ಈ ಸಂಬಂಧ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ (ಬಿಇಎಲ್‌) ಹಾಗೂ ಸೆಂಟರ್‌ ಫಾರ್‌ ಡೆವಲಪ್‌ ಮೆಂಟ್‌ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್‌ (ಸಿಡಿಎಸಿ) ಜತೆಗೆ ಬಿಎಂಆರ್‌ಸಿಎಲ್‌ ಕಳೆದ ವಾರ ಮಾತುಕತೆ ನಡೆಸಿದ್ದು, ಬರುವ ತಿಂಗಳಲ್ಲಿ “ಸ್ವಾಗತ್‌’ ಎಂಬ ಎರಡು ಜೋಡಿ ಆಟೋಮೆಟಿಕ್‌ ಫೇರ್‌ ಕಲೆಕ್ಷನ್‌ ಗೇಟ್‌ ಗಳನ್ನು ಪೂರೈಸುವುದಾಗಿ ಭರವಸೆ ನೀಡಿದ್ದು, ಅವುಗಳ ಜೋಡಣೆ ಮಾಡಿ ಕಾರ್ಯಾಚರಣೆಗೊಳ್ಳಲು ಕನಿಷ್ಠ 45 ದಿನಗಳು ಬೇಕಾಗುತ್ತದೆ. ಹೊಸ ವರ್ಷದಿಂದ ಈ ಹೊಸ ವ್ಯವಸ್ಥೆಯ ಸೇವೆ ನಗರದ ಮೆಟ್ರೋ ಪ್ರಯಾಣಿಕರಿಗೂ ಲಭ್ಯವಾಗಲಿದೆ ಎಂದು ನಿಗಮದ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಪ್ರಾಯೋಗಿಕಾಗಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಒಂದು ಜೋಡಿ ಅಂದರೆ ಎರಡು ಗೇಟ್‌ ಗಳು ಹಾಗೂ ಉಳಿದೆರಡು ಗೇಟ್‌ಗಳನ್ನು ಯಾವ ನಿಲ್ದಾಣದಲ್ಲಿ ಅಳವಡಿಸುವುದು ಸೂಕ್ತ ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ವಿಜಯನಗರ ಅಥವಾ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಪರಿಚಯಿಸುವ ಚಿಂತನೆ ಇದೆ. ಆದರೆ, ಅಂತಿಮವಾಗಿಲ್ಲ ಎಂದು ತಿಳಿದುಬಂದಿದೆ.

ಇದು ಸಾಧ್ಯವಾದರೆ, ದೇಶದ ಯಾವುದೇ ಮೆಟ್ರೋದಲ್ಲಿ ಬಳಸುವ ಕಾರ್ಡ್‌ಗಳನ್ನು ಪ್ರಯಾಣಿಕರು ಬೆಂಗಳೂರಿನ ಮೆಟ್ರೋದಲ್ಲಿ ತೋರಿಸಿ ಸಂಚರಿಸಬಹುದು. ಅದೇ ಕಾರ್ಡ್‌ನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲೂ ಓಡಾಡಬಹುದು (ಇದಕ್ಕೆ ಬಿಎಂಟಿಸಿ ಇಟಿಎಂ ಅಪ್‌ ಗ್ರೇಡ್ ಮಾಡಿಕೊಳ್ಳುವುದು ಕಡ್ಡಾಯ). ಈ ಮೂಲಕ ದೆಹಲಿ ಹೊರತುಪಡಿಸಿದರೆ, ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ. ಈ ಗೇಟ್‌ಗಳ ಸಾಫ್ಟ್ವೇರ್‌, ವಿನ್ಯಾಸ ಎಲ್ಲವೂ ದೇಶೀಯವಾಗಿದೆ. ಆದರೆ, ಅದಕ್ಕೆ ಬಳಸುವ ಚಿಪ್‌ ಮಾತ್ರ ಹೊರದೇಶದ್ದಾಗಿದೆ. ಇದಕ್ಕೆ ಬಳಸುವ ಕಾರ್ಡ್‌ ಅನ್ನು ರಸ್ತೆ ಸಾರಿಗೆ, ಟೋಲ್‌ಗ‌ಳಲ್ಲೂ ಬಳಸಬಹುದು.

ಬೈಯಪ್ಪನಹಳ್ಳಿಯೇ ಯಾಕೆ?: ಬೈಯಪ್ಪನಹಳ್ಳಿಯು ಮೆಟ್ರೋ ಮೊದಲ ಹಂತದ ಮೊದಲ ಡಿಪೋ ಹಾಗೂ ಕೊನೆಯ ನಿಲ್ದಾಣ. ಹೆಚ್ಚು ಪ್ರಯಾಣಿಕರು ಸಂಚರಿಸುವ ನೇರಳೆ ಮಾರ್ಗದಲ್ಲಿ ಬರುತ್ತದೆ. ಮುಂದಿನ ದಿನಗಳಲ್ಲಿ ಇದು ವೈಟ್‌ಫೀಲ್ಡ್ಗೆ ಸಂಪರ್ಕ ಕಲ್ಪಿಸಲಿದ್ದು, ಆ ಮಾರ್ಗದಲ್ಲಿ ಐಟಿ-ಬಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಇದರ ಜತೆಗೆ ನ. 1ರಿಂದ ಬೈಯಪ್ಪನಹಳ್ಳಿಯಿಂದ ಸೆಂಟ್ರಲ್‌ ಸಿಲ್ಕ್  ಬೋರ್ಡ್‌ ನಡುವಿನ 18 ಕಿ.ಮೀ. ಮಾರ್ಗದಲ್ಲಿ ಬಿಎಂಟಿಸಿಯು ಪ್ರತ್ಯೇಕ ಬಸ್‌ ಪಥವನ್ನು ಪ್ರಾಯೋಗಿಕವಾಗಿ ಪರಿಚಯಿಸುತ್ತಿದೆ. ಇಲ್ಲಿಗೆ ಬಂದಿಳಿಯುವ ಪ್ರಯಾಣಿಕರು, ಅದೇ ಕಾರ್ಡ್‌ನಿಂದ ಬಸ್‌ ಏರಿ ಪ್ರಯಾಣಿಸಬಹುದಾಗಿದೆ.

Advertisement

ಇದರಿಂದ ಸಮಯ ಉಳಿತಾಯ ಆಗಲಿದ್ದು, ಈ ಪ್ರಯೋಗವು ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸಲಿದೆ. ಮೂರರಿಂದ ನಾಲ್ಕು ಸಾವಿರ ಪ್ರಯಾಣಿಕರು ಆರಂಭದಲ್ಲಿ ಈ ಸೇವೆ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇದಕ್ಕಾಗಿ ಬಿಎಂಟಿಸಿಯು ತನ್ನ ಐಟಿ ವ್ಯವಸ್ಥೆಯನ್ನು ಅಪ್‌ ಗ್ರೇಡ್ ಮಾಡಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ (ಎನ್ಸಿಎಂಸಿ) ಬಳಸಲು ಸಾಧ್ಯ. ಈ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಕೂಡ ಆಸಕ್ತಿ ತೋರಿಸುತ್ತಿದೆ ಎಂದೂ ಮೂಲಗಳು ತಿಳಿಸಿವೆ.

 

ಮೊಬಿಲಿಟಿ ಕಾರ್ಡ್‌ ಕಾರ್ಯ ಹೇಗೆ? :  ಮೆಟ್ರೋದಲ್ಲಿ ಈಗಿರುವ ಕಾಂಟ್ಯಾಕ್ಟ್ಲೆಸ್‌ ಸ್ಮಾರ್ಟ್‌ ಕಾರ್ಡ್‌ ಕ್ಲೋಸ್‌ ಲೂಪ್‌ ವ್ಯವಸ್ಥೆ ಹೊಂದಿದೆ. ಅಂದರೆ, ಆ ಕಾರ್ಡ್‌ ಅನ್ನು ಆಟೋಮೆಟಿಕ್‌ ಫೇರ್‌ ಗೇಟ್‌ನಲ್ಲಿ ಸ್ವೆ„ಪ್‌ ಮಾಡಿದಾಗ, ಕಡಿತಗೊಳ್ಳುವ ಹಣ ನೇರವಾಗಿ ಬಿಎಂಆರ್‌ಸಿಎಲ್‌ ಖಾತೆಗೆ ಜಮೆ ಆಗುತ್ತದೆ. ಹಾಗಾಗಿ, ಅದನ್ನು ಬೇರೆ ಸಾರಿಗೆ ವ್ಯವಸ್ಥೆಯಲ್ಲಿ ಬಳಕೆ ಮಾಡಲು ಬರುವುದಿಲ್ಲ. ಆದರೆ, ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ ಓಪನ್‌ ಲೂಪ್‌ ವ್ಯವಸ್ಥೆ ಹೊಂದಿದೆ. ಅದನ್ನು ಯಾವುದೇ ಸಾರಿಗೆ ವ್ಯವಸ್ಥೆಯಲ್ಲಿ ಬಳಕೆ ಮಾಡಿದರೂ, ಒಂದೇ ಖಾತೆಗೆ ಹಣ ಜಮೆ ಆಗುತ್ತದೆ. ಅಲ್ಲಿಂದ ಆಯಾ ಸಂಸ್ಥೆಗೆ ಹೋಗುತ್ತದೆ. ಈ ಸಂಬಂಧ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿ ಕೊಳ್ಳಲಾಗುತ್ತದೆ. ಮೂಲಗಳ ಪ್ರಕಾರ ಸದ್ಯ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

 

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next