ನಿದ್ದೆ ಮನುಷ್ಯನ ಅಗತ್ಯತೆಗಳಲ್ಲೊಂದು. ಪ್ರತಿದಿನ ಕನಿಷ್ಟ 6 ಗಂಟೆಯಾದರೂ ನಿದ್ರಿಸಬೇಕು. ಅಷ್ಟೇ ಅಲ್ಲ ರಾತ್ರಿ ಹೊತ್ತು ಬೇಗನೆ ಮಲಗುವುದು ಉತ್ತಮ ಆರೋಗ್ಯಕ್ಕೆ ಸಹಕಾರಿ. ಆದರೆ, ಇತ್ತೀಚಿಗೆ ಮೊಬೈಲ್ ಬಳಕೆ ಹೆಚ್ಚಾದಂತೆ ಮಲಗುವ ಸಮಯದಲ್ಲಿ ಏರುಪೇರಾಗಿದೆ.
ರಾತ್ರಿ 10 ಗಂಟೆಗೆ ನಿದ್ದೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ತಜ್ಞ-ವೈದ್ಯರು ಹೇಳಿದ್ದಾರೆ. ಆದರೆ, ಎಷ್ಟು ಜನರು ಇದನ್ನು ಪಾಲಿಸುತ್ತಿದ್ದಾರೆ ? ಅದರಲ್ಲೂ ಅಂಗೈಯಲ್ಲಿ ಮೊಬೈಲ್ ಫೋನ್ ಕುಣಿದಾಡುತ್ತಿರುವಾಗ ನಿದ್ರಾ ದೇವತೆ ಹೇಗೆ ತಾನೇ ನಮ್ಮ ಬಳಿ ಸುಳಿದಾಳು ?
ನಿದ್ರಾಹೀನತೆಗೆ ಕಾರಣಗಳಲ್ಲಿ ಮೊಬೈಲ್ ಬಳಕೆಯೂ ಒಂದು ಎಂದು ಇದುವರೆಗೆ ಬರೀ ಬಾಯಿ ಮಾತಿನಲ್ಲಿ ಹೇಳಲಾಗುತ್ತಿತ್ತು. ಆದರೆ ಸಮೀಕ್ಷೆಯೊಂದು ಇದಕ್ಕೆ ಅಂಕಿ ಅಂಶಗಳ ಆಧಾರ ಒದಗಿಸಿದೆ.
ಇತ್ತೀಚಿಗೆ ಗೋಡ್ರೆಜ್ ಇಂಟೀರಿಯೊ ಸಂಸ್ಥೆ 1000 ಜನರನ್ನು ಸಂದರ್ಶಿಸಿ ಅಧ್ಯಯನ ನಡೆಸಿದೆ. ಇದರ ಪ್ರಕಾರ ಪ್ರತಿ ಹತ್ತು ಜನರಲ್ಲಿ ಏಳು ಮಂದಿ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದಿರುವುದಾಗಿ ಕಂಡು ಬಂದಿದೆ. ಜತೆಗೆ ಇದಕ್ಕೆ ಕಾರಣ ‘ಅತಿಯಾದ ಮೊಬೈಲ್ ವೀಕ್ಷಣೆ’ ಎಂದು ಸಮೀಕ್ಷೆಗೆ ಒಳಗಾದವರು ಹೇಳಿಕೊಂಡಿದ್ದಾರೆ.
ಶೇಕಡಾ 56 ಜನರು ವರ್ಕ್ ಫ್ರಮ್ ಹೋಮ್ ( ಕಚೇರಿ ಕಾರ್ಯಕ್ಕೆ ಮೊಬೈಲ್ ಬಳಕೆ)ನಿಂದಾಗಿ ಸರಿಯಾದ ಸಮಯಕ್ಕೆ ನಿದ್ದೆ ಮಾಡಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ 80% ಜನರು ಮೊಬೈಲ್ ಬಳಕೆಯಿಂದಲೇ ನಿದ್ದೆ ದೂರವಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತ ದೇಶದ ಜನರ ಆರೋಗ್ಯ ಹಾಗೂ 10 ಗಂಟೆಗೆ ನಿದ್ದೆ ಮಾಡುವುನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಮೀಕ್ಷೆ ನಡೆಸಿರುವುದಾಗಿ ಗೋಡ್ರೆಜ್ ಇಂಟೀರಿಯೊ ಸಂಸ್ಥೆಯ ಸಿಒಒ ಅನಿಲ್ ಮಥುರ್ ಹೇಳಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವ ಅಗತ್ಯತೆ ಹಾಗೂ ನಮಗೆ ಉತ್ತಮ ಆರೋಗ್ಯ ಹೊಂದುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಿಕೊಡಲು ಈ ಅಧ್ಯಯನ ನಡೆದಿದೆ ಎಂದು ಅನಿಲ್ ತಿಳಿಸಿದ್ದಾರೆ.