Advertisement

Inna ಗ್ರಾಮಸ್ಥರ ಹೋರಾಟಕ್ಕೆ ಜಯ : ವಿದ್ಯುತ್‌ ಟವರ್‌ ನಿರ್ಮಾಣಕ್ಕೆ ತಾತ್ಕಾಲಿಕ ತಡೆ

11:28 PM Jun 06, 2024 | Team Udayavani |

ಬೆಳ್ಮಣ್‌: ಇನ್ನಾ ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಅವರ ಕೃಷಿ ಜಮೀನಿನ ನಡುವೆ ವಿದ್ಯುತ್‌ ಟವರ್‌ ಸ್ಥಾಪಿಸುವ ಕಾಮಗಾರಿಗೆ ತಾತ್ಕಾಲಿಕ ತಡೆಯನ್ನು ಕಾರ್ಕಳದ ನ್ಯಾಯಾಲಯ ಗುರುವಾರ ನೀಡಿದೆ.

Advertisement

ಉಡುಪಿಯ ಎಲ್ಲೂರು ಗ್ರಾಮದ ನಂದಿಕೂರಿನಿಂದ ಕೇರಳ ಕಾಸರಗೋಡಿಗೆ ವಿದ್ಯುತ್‌ ಸರಬರಾಜು ಮಾಡಲು ಇನ್ನಾ ಗ್ರಾಮದಲ್ಲಿ ಟವರ್‌ ನಿರ್ಮಾಣಕ್ಕೆ ಹಲವು ಸಮಯದಿಂದ ಸರ್ವೇ ಕಾರ್ಯ ನಡೆಯುತ್ತಿತ್ತು. ಟವರ್‌ ನಿರ್ಮಾಣದಿಂದ ಕೃಷಿ ಭೂಮಿ ನಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಗ್ರಾಮಸ್ಥರಿಂದ ಸಾಕಷ್ಟು ಹೋರಾಟ, ಮಾತಿನ ಚಕಮಕಿ ನಡೆದಿತ್ತು. ಆದರೆ ಕಾಮಗಾರಿಯನ್ನು ಗುತ್ತಿಗೆದಾರ ಸಂಸ್ಥೆಯು ಪೊಲೀಸ್‌ ಭದ್ರತೆಯಲ್ಲಿ ಬುಧವಾರ ಜೆಸಿಬಿ ಮೂಲಕ ಬೃಹತ್‌ ಹೊಂಡಗಳನ್ನು ನಿರ್ಮಿಸಿ ಕಾಮಗಾರಿಗೆ ಆರಂಭಿಸಿತ್ತು. ಗುರುವಾರವೂ ಕಾಮಗಾರಿ ಆರಂಭವಾದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರೂ ಜಿಲ್ಲಾಧಿಕಾರಿಗಳ ಆದೇಶವಿದೆ ಎಂದು ಹೇಳಿ ಕಂಪೆನಿಯ ಸಿಬಂದಿ ಪೊಲೀಸರ ಸಹಕಾರದಲ್ಲಿ ಕಾಮಗಾರಿ ನಡೆಸಿದರು. ಮಧ್ಯಾಹ್ನದ ವೇಳೆಗೆ ನ್ಯಾಯಾಲಯ ತಾತ್ಕಾಲಿಕ ತಡೆಯನ್ನು ನೀಡಿದ ಹಿನೆ‌°ಲೆಯಲ್ಲಿ ಕಾಮಗಾರಿ ಸ್ಥಗಿತವಾಗಿದೆ.

ಸ್ಥಳಕ್ಕೆ ಇನ್ನಾ ಗ್ರಾಮಕರಣಿಕ ಹಣಮಂತ, ಜಿ.ಪಂ. ಮಾಜಿ ಸದಸ್ಯೆ ರೇಷ್ಮಾ ಉದಯ್‌ ಶೆಟ್ಟಿ, ಗ್ರಾ.ಪಂ. ಸದಸ್ಯ ದೀಪಕ್‌ ಕೋಟ್ಯಾನ್‌, ಚಂದ್ರಹಾಸ್‌ ಶೆಟ್ಟಿ, ಗ್ರಾಮಸ್ಥರಾದ ಅಮರನಾಥ್‌ ಶೆಟ್ಟಿ, ಪ್ರವೀಣ್‌ ಶೆಟ್ಟಿ ಭೇಟಿ ನೀಡಿದ್ದರು.

ಹೋರಾಟ ನಿಲ್ಲದು
ಟವರ್‌ ನಿರ್ಮಾಣದಿಂದ ಫ‌ಲವತ್ತಾದ ಕೃಷಿ ಭೂಮಿಗೆ ಅಪಾರ ಹಾನಿಯಾಗುತ್ತಿದೆ. ಯಾವುದೇ ಅಧಿಕಾರಿಗಳು ಕೃಷಿ ಉಳಿಸುವತ್ತ ಮನ ಮಾಡಿಲ್ಲ; ಕೃಷಿಕರ ಬವಣೆಯನ್ನು ಆಲಿಸುವ ಪ್ರಯತ್ನವನ್ನೂ ಮಾಡಿಲ್ಲ. ಕಂಪೆನಿಯ ಸಿಬಂದಿ ಗ್ರಾಮಸ್ಥರನ್ನು ಗದರಿಸಿ ಕಾಮಗಾರಿ ಮಾಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಹಾಗೂ ಇಡೀ ಈ ಯೋಜನೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ಕಾಮಗಾರಿಯನ್ನು ಮುಂದಿನ ಆದೇಶದ ವರೆಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
– ನರಸಪ್ಪ , ಕಾರ್ಕಳ ತಹಶೀಲ್ದಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next