ಬೆಂಗಳೂರು: ಚೂರಿ ತೋರಿಸಿ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ. ಆತನಿಂದ ಬರೋಬ್ಬರಿ 40 ಫೋನ್ ಜಪ್ತಿ ಮಾಡಲಾಗಿದೆ.
ಪಾದರಾಯನಪುರ ನಿವಾಸಿ ನಬೀದ್ ಪಾಷಾ(27) ಬಂಧಿತ. ಆರೋಪಿಯಿಂದ 6.80 ಲಕ್ಷ ರೂ. ಮೌಲ್ಯದ 40 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ನಬೀದ್ ಪಾಷಾ ಒಂಟಿಯಾಗಿ ಓಡಾಡುವವರನ್ನೇ ಗುರಿಯಾಗಿಸಿ ಚೂರಿ ತೋರಿಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ. ನಗರದ ಕಾಟನ್‌ಪೇಟೆ, ಕಲಾಸಿಪಾಳ್ಯ, ವಿವಿ ಪುರಂ, ಉಪ್ಪಾರಪೇಟೆ ಸೇರಿದಂತೆ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಸುಲಿಗೆ, ದರೋಡೆ, ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೆಲ ಪ್ರಕರಣ ಗಳಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ. ಕೃತ್ಯ ಮುಂದುವರಿಸಿದ್ದ.
ಆರೋಪಿ ಲಾಕ್ ಆಗಿದ್ದೇ ರೋಚಕ: ಬಿಜನ್ ಎಂಬುವವವರು ಸೆ.10ರ ಬೆಳಗ್ಗೆ 6.50ಕ್ಕೆ ಕೆ. ಆರ್.ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬರುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಯು ಚೂರಿ ತೋರಿಸಿ ಬಿಜನ್ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ.
ಇದೇ ಸಮಯಕ್ಕೆ ಕಲಾಸಿಪಾಳ್ಯ ಠಾಣೆ ಕಾನ್ ಸ್ಟೆಬಲ್ ಲಕ್ಷ್ಮಣ ರಾಥೋಡ್ ಅದೇ ಮಾರ್ಗದಲ್ಲಿ ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಆರೋಪಿಯು ಮೊಬೈಲ್ ಕಸಿದುಕೊಳ್ಳುತ್ತಿರುವುದನ್ನು ಗಮನಿಸಿದ ಇವರು ಆತನನ್ನು ಬೆನ್ನಟ್ಟಿ ಹಿಡಿಯಲು ಯತ್ನಿಸಿದ್ದರು. ಜೊತೆಗೆ ತನ್ನ ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.