Advertisement

ಕೋವಿಡ್ ಸೋಂಕು ದೃಢಪಟ್ಟವರಲ್ಲಿ ಶೇ.20ರಷ್ಟು ಜನರ ಮೊಬೈಲ್‌ ಸ್ವಿಚ್‌ಆಫ್ ; ಆರ್‌. ಅಶೋಕ್‌

07:20 PM Apr 28, 2021 | Team Udayavani |

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ದೃಢ ದೃಢಪಟ್ಟ ಅಂದಾಜು ಎರಡರಿಂದ ಮೂರು ಸಾವಿರ ಜನ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡಿದ್ದಾರೆ. ನಾಪತ್ತೆ ಆದವರ ಪತ್ತೆ ಕಾರ್ಯಾಚರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

Advertisement

ದಾಸರಹಳ್ಳಿ ವಲಯದ ಬಾಗಲಗುಂಟೆ ವಾರ್ಡ್‌ನ ಕಾರ್ಮಿಕ ಭವನದಲ್ಲಿ 127 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕು ದೃಢಪಟ್ಟವರಲ್ಲಿ ಶೇ.20ರಷ್ಟು ಜನ ಮೊಬೈಲ್‌ ಸ್ವಿಚ್‌ಆಫ್ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಇವರ ಪತ್ತೆ ಕಾರ್ಯಾಚರಣೆ ಪೊಲೀಸರು ಮಾಡುತ್ತಿದ್ದಾರೆ. ಕೆಲವರು ಮನೆ ಸಹ ಖಾಲಿ ಮಾಡಿದ್ದಾರೆ. ಒತ್ತಡದ ಸಂದರ್ಭದಲ್ಲಿ ಪೊಲೀಸರ ಮೂಲಕ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಕೆಲವರು ತೀರಾ ಉಸಿರಾಟದ ಸಮಸ್ಯೆ ಆದಾಗ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆ ಬೇಕೆಂದು ಬರುತ್ತಿದ್ದಾರೆ. ಕೊರೊನಾ ದೃಢ ಪಟ್ಟ ತಕ್ಷಣ ಐಸೋಲೇಟ್‌ ಆಗಿ ಔಷಧ, ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಂಡಾಗ ಕೋವಿಡ್‌ ಸೋಂಕು ಹರಡುವುದನ್ನು ತಡೆಯಬಹುದು ಎಂದು ಹೇಳಿದರು.

ಇದನ್ನೂ ಓದಿ :ಕೋವಿಡ್ ನಿಂದ ಮೃತಪಟ್ಟ ಮಹಿಳೆ: ಅಂತ್ಯಕ್ರಿಯೆ ನಡೆಸಲು ಬಾರದ ಆರೋಗ್ಯ ಇಲಾಖೆ ಸಿಬ್ಬಂದಿ

ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 12 ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಅದರಲ್ಲಿ 10 ಆಕ್ಸಿಜನ್‌ ಹಾಸಿಗೆಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಸೋಂಕಿನ ಸೌಮ್ಯ ಲಕ್ಷಣ ಇರುವವರ ಆರೈಕೆಯ ಅವಶ್ಯಕತೆಗೆ ಅನುಗುಣವಾಗಿ, ಮುಂದಿನ ದಿನಗಳಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆಗೆಯಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಕಾರ್ಮಿಕ ಭವನದಲ್ಲಿ ಕೋವಿಡ್‌ ಆರೈಕೆ ಕೇಂದ್ರ ಸುಸಜ್ಜಿತವಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ನಿಯೋಜಿಸಲಾಗಿದೆ. ಒಂದು ಪಾಳಿಯಲ್ಲಿ 14 ಮಂದಿ ಕೆಲಸ ಮಾಡಲಿದ್ದಾರೆ. ಸೋಂಕಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಶೌಚಾಲಯ, ಸ್ನಾನಕ್ಕೆ ವ್ಯವಸ್ಥೆ , ಅಡುಗೆ ವ್ಯವಸ್ಥೆ, ಊಟ ಕೊಠಡಿ, ಮನರಂಜನಾ ಕೊಠಡಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ ಸೋಂಕು ದೃಢಪಟ್ಟು, ಮನೆಯಲ್ಲಿ ಐಸೋಲೇಟ್‌ ಆಗಲು ವ್ಯವಸ್ಥೆ ಇಲ್ಲದೆ ಇರುವವರು ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಾಗಬಹುದು ಎಂದರು.

Advertisement

ಎರಡು ಸಾವಿರಕ್ಕೂ ಹೆಚ್ಚು ಐಸಿಯು ಬೆಡ್‌: ನಗರದಲ್ಲಿ ಎರಡು ಸಾವಿರ ಐಸಿಯು ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಯಾರು ತಪ್ಪಿಸಿಕೊಳ್ಳಬೇಡಿ. ಕೋವಿಡ್‌ ಆರೈಕೆ ಕೇಂದ್ರಕ್ಕೆ ಬನ್ನಿ. ಇಲ್ಲಿ ವೈದ್ಯರು ಆರೈಕೆ ಮಾಡಲಿದ್ದು, ಔಷಧಿ ನೀಡಲಿದ್ದಾರೆ. ತುರ್ತು ಆಗತ್ಯ ಇದ್ದರೆ ಇಲ್ಲಿಂದಲೇ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗುತ್ತದೆ. ಹೀಗಾಗಿ, ಯಾರು ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ವಸೂಲಿ ಮಾಡುವ ಆಸ್ಪತ್ರೆಗೆ ಬೀಗ !
ನಗರದಲ್ಲಿ ಯಾವುದಾದರು ಖಾಸಗಿ ಆಸ್ಪತ್ರೆ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು ಕಂಡು ಬಂದರೆ ಬೀಗ ಹಾಕಲಾಗುವುದು. ಈಗಾಗಲೇ ನಿಯಮ ಉಲ್ಲಂಘನೆ ಮಾಡುವವರಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿದೆ ಎಂದರು.

ಈ ವೇಳೆ ದಾಸರಹಳ್ಳಿ ವಲಯ ಕೋವಿಡ್‌ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಮಂಜುನಾಥ್‌, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ವಲಯ ಆಯುಕ್ತ ರವೀಂದ ಹಾಗೂ ಜಂಟಿ ಆಯುಕ್ತ ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next