ಈಚೆಗೆ ಒಂದು ದಿನ ಕಾಲೇಜು, ಕ್ಲಾಸು ಎಲ್ಲಾ ಮುಗಿಸಿ ಮನೆಗೆ ಬಂದು ಬ್ಯಾಗ್ ನೋಡ್ತೀನಿ, ಮೊಬೈಲ್ ಇಲ್ಲ. ಮೇಲೆ, ಕೆಳಗೆ, ಉಲ್ಟಾ ಪಲ್ಟಾ ಎಲ್ಲಾ ಮಾಡಿ, ಹುಡುಕಿದ್ದೇ ಹುಡುಕಿದ್ದು! ಎಷ್ಟೇ ಹುಡುಕಿದ್ರೂ ಮೊಬೈಲ್ ಇದ್ರೆ ತಾನೇಸಿಗೋದು?! ಸತ್ಯ ಅರಗಿಸಿಕೊಳ್ಳೋದಕ್ಕೆ ಸ್ವಲ್ಪ ಸಮಯನೇ ಬೇಕಾಯಿತು.
ಎಲ್ಲಿ ಮೊಬೈಲ್ ಬಿಟ್ಟೆ ಅನ್ನೋ ನೆನಪು ಕೂಡ ಇರಲಿಲ್ಲ ನನಗೆ! ಕಂಪ್ಯೂಟರ್ ಕ್ಲಾಸು, ಝೆರಾಕ್ಸ್ ಅಂಗಡಿ, ಹೀಗೆ ಎಲ್ಲೆಲ್ಲಾ ಹೋಗಿದ್ದೆ ಅಂತ ನೆನಪು ಮಾಡ್ಕೊಳ್ಳೋ ಪ್ರಯತ್ನ ಮಾಡಿದೆ. ಆದ್ರೆ ನೆನಪಾಗಬೇಕಲ್ಲ! ಉಹ್ಞೋ! ನೆನಪಾಗಲೇ
ಇಲ್ಲ! ಮನೇಲಿ ಹೇಳಿದೆ. ಎಲ್ಲರೂ ಬೈಯ್ಯೋದಕ್ಕೆ ಶುರು ಮಾಡಿದ್ರು! ಅವ್ರಿಗೆಲ್ಲಾ ಏನೋ ಒಂದು ಉತ್ತರ ಕೊಟ್ಟು, ಅಕ್ಕನ ಹತ್ತಿರ ಕೂಡಲೇ ನನ್ನ ನಂಬರ್ ಗೆ ಕರೆ ಮಾಡೋಕೆ ಹೇಳ್ದೆ. ಝೆರಾಕ್ಸ್ ಅಂಗಡಿಯಲ್ಲಿ ಬಿಟ್ಟಿರಬಹುದು ಅಂತ ನಾನಿದ್ದೆ ಕರೆ ಏನೋ ಸ್ವೀಕಾರ ಆಯ್ತು. ಆದ ತಕ್ಷಣ ಸಂತೆಕಟ್ಟೆ ಸಂತೆಕಟ್ಟೆ ಅಂತ ಕೇಳಿಸ್ತು. ಓಹ್! ನನ್ನ ಮೊಬೈಲ್ ಕಳ್ದು ಹೋಗಿದ್ದು ಬಸ್ ಅಲ್ಲಿ ಅಂತ ಆವಾಗ್ಲೆ ಗೊತ್ತಾಗಿದ್ದು. ಕಂಡಕ್ಟರ್ ರಿಸೀವ್ ಮಾಡಿ, “ಮೊಬೈಲ್ ಬಿಟ್ಟು ಹೋಗಿದ್ದಾರೆ ಬಸ್ಸಿನಲ್ಲೇ’ ಅಂತ ಹೇಳಿದ್ರು. ಅದು ದುರ್ಗಾಂಬ ಬಸ್ ಅನ್ನೋದು ಬಿಟ್ಟು, ಕಲರ್ – ರೂಟ್ ಏನೂ ಗೊತ್ತಿರ್ಲಿಲ್ಲ. ಅಕ್ಕ ಅದನ್ನು ಅವರಿಗೆ ಕೇಳ್ದಾಗ ಒರಟಾಗಿ, “ನಾವೇನು ಮೊಬೈಲ್ ಇಟ್ಕೊಳ್ಳ ರೀ, ನಾನು ಈಗ ತಾನೇ ಕಾಲ್ ಮಾಡಿ ಒಬ್ರಿಗೆ ಹೇಳಿದ್ದೆ. ಈ ವಿಷಯ ಅವರಿಗೆ ತಿಳಿಸಿ ಅಂತ, ನಾವು ಉಡುಪಿಯಿಂದ ವಾಪಸ್ ಬರ್ತಾ ನಿಮ್ಗೆ ಕೊಡ್ತೀವಿ’ ಅಂತ ಹೇಳಿ, ಮನೆ ಎಲ್ಲಿ ಕೇಳಿ, ಎಲ್ಲಿ ನಿತ್ಕೊಳ್ಬೇಕು ಅಂತೆಲ್ಲಾ ಹೇಳಿದ್ರು.
“ಅವಳಿಗೆ ಏನೂ ನೆನಪಿಲ್ಲ, ಅದಕ್ಕೆ ಕೇಳಿದ್ದಷ್ಟೇ’ ಅಂದು ನನಗೆ ಬೈಯ್ಯುತ್ತಾ, ಕಂಡಕ್ಟರ್‌ಗೆ ಥ್ಯಾಂಕ್ಸ್ ಹೇಳಿ ಕಾಲ್‌ಇಟ್ಟಳು ನನ್ನಕ್ಕ! ಇದು ಇಷ್ಟೇ ಆಗಿದ್ರೇ ಸ್ವಲ್ಪಸಮಾಧಾನ ಆಗ್ತಿತ್ತು. ಆದ್ರೆ ಈ ಕಂಡಕ್ಟರ್ ಪುಣ್ಯಾತ್ಮ ಕಾಲ್ ಮಾಡಿದ್ರಲ್ಲ, ಅದು ನನ್ನ ಕಾಲ್‌ಲಿಸ್ಟ್‌ನಲ್ಲಿ ಮೊದಲು ಇದ್ದ ನನ್ನ ಸ್ನೇಹಿತೆಗೆ.ಅವಳಿಗೆ ನನ್ನ ನಂಬರ್ ಬಿಟ್ಟು ನಮ್ಮಮನೆಯವರ ನಂಬರ್ ಗೊತ್ತಿಲ್ಲ. ಅವಳ ಪಕ್ಕದಮನೆಯಲ್ಲಿ, ನೌಕರಿಯ ಕಾರಣಕ್ಕೆ ಆ ಊರಲ್ಲಿದ್ದನನ್ನ ಚಿಕ್ಕಪ್ಪ ಇದ್ದರು. ಅವಳು ಅವರ ಮನೆಗೆಹೋಗಿ ನನ್ನ ಚಿಕ್ಕಪ್ಪನ ನಂಬರ್ ತಗೊಂಡು ಕಾಲ್ ಮಾಡಿ ವಿಷಯ ತಿಳಿಸಿದ್ವಿ. ಅಷ್ಟರಲ್ಲಿ ನಮಗೆ ವಿಷಯ ಗೊತ್ತಾಗಿದ್ರೂ, ನನ್ನ ಬೇಜವಾಬ್ದಾರಿತನ, ಈ ಪುಟ್ಟ ವಿಷಯವನ್ನು ದೊಡ್ಡದೇ ಮಾಡಿಬಿಟ್ಟಿತ್ತು!
ಕಂಡಕ್ಟರ್ ಕಾಲ್ ಮಾಡಿ 10 ನಿಮಿಷದಲ್ಲಿ ಬಸ್ ಸ್ಟ್ಯಾಂಡ್‌ಗೆ ಬರ್ತೀವಿ ಅಂತ ಹೇಳಿ ಕಾಲ್ ಇಟ್ಟು, 2 ನಿಮಿಷ ಬಿಟ್ಟು ಮತ್ತೆ ಕಾಲ್ ಮಾಡಿ, ಮೊಬೈಲ್ ಕೊಡ್ಬೇಕಾದ್ರೆ 2000 ಕೊಡ್ಬೇಕು, ಇಲ್ಲಾಂದ್ರೆ ಕೊಡಲ್ಲ ಅಂತ ಖಡಕ್ ಆಗೇ ಹೇಳಿ ಕಾಲ್ ಇಟ್ಟರು. ಇದನ್ನು ಅಪ್ಪನಿಗೆ ಹೇಳ್ದಾಗ, ತಮಾಷೆಗೆ ಹೇಳಿರ್ತಾರೆ ಅಂದ್ರೂ ನನಗೇನೋ ಹಾಗೆ ಅನ್ನಿಸಿರ್ಲಿಲ್ಲ. ಬಸ್ ಬಂತು. ಕಂಡಕ್ಟರ್ ಇಳಿದು, ನಗುನಗುತ್ತಲೇ ಬಂದು ಮೊಬೈಲ್ ಕೊಟ್ಟು, ನಮ್ಮ ಥ್ಯಾಂಕ್ಸ್ ಎಲ್ಲಾ ತಗೊಂಡು ಟಾಟಾ ಹೇಳಿ ಹೋದರು.
ಬಸ್‌ನಲ್ಲಿ ಮೊಬೈಲ್ ಅನ್ನು ಬ್ಯಾಗಿಂದ ತೆಗೆದೇ ಇರಲಿಲ್ಲ. ಸ್ನೇಹಿತೆಯ ಜತೆ ಮಾತಾಡ್ತಾ ಬರ್ತಿದ್ದ ನನಗೆ ಬ್ಯಾಗ್ ನಿಂದಮೊಬೈಲ್ ಜಾರಿದ್ದು ಗೊತ್ತಾಗಲೇ ಇಲ್ಲ! ದುಡ್ಡು ತೆಗೆಯುವಾಗ ಬಿದ್ದಿರಬಹುದು ಅನ್ನೋ ಊಹೆ ಮಾಡ್ಕೋ ಬೇಕಾಯ್ತು ಅಷ್ಟೇ! ಮೊಬೈಲ್
ಯಾರೋ ಪ್ಯಾಸೆಂಜರ್‌ಗೆ ಸಿಕ್ಕಿದ್ರೆ ಅಥವಾ ಕಂಡಕ್ಟರ್ ಮೊಬೈಲ್ ಕೊಡದೇ ಅವ್ರೇ ಸ್ವಿಚ್ ಆಫ್ ಮಾಡಿ ಇಟ್ಕೊಂಡಿದ್ರೆ ಅಂತೆಲ್ಲಾ ಯೋಚನೆ ಮಾಡ್ತಾ, ಅದೆಲ್ಲಾ ಆಗ್ದೇ ಇರೋದಕ್ಕೆ ದೇವ್ರಿಗೆ, ಕಂಡಕ್ಟರ್‌ಗೆ ಥ್ಯಾಂಕ್ಸ್ ಹೇಳಿದ್ದಂತೂ ಆಯ್ತು.
-ಅರುಂಧತಿ, ಸಾಲಿಗ್ರಾಮ, ಉಡುಪಿ ಜಿಲ್ಲೆ