Advertisement

ಮೊಬೈಲ್‌ ಕಸಿದು ರೈಲಿನಿಂದ ತಳ್ಳಿದರು

12:18 AM Sep 25, 2019 | Team Udayavani |

ಬೆಂಗಳೂರು: ಚಲಿಸುತ್ತಿದ್ದ ರೈಲುಗಳಲ್ಲಿನ ಪ್ರಯಾಣಿಕರನ್ನು ಟಾರ್ಗೆಟ್‌ ಮಾಡಿಕೊಂಡಿರುವ ಮೊಬೈಲ್‌ ಚೋರರು, ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬರನ್ನು ರೈಲಿನಿಂದ ಕೆಳಗೆ ತಳ್ಳಿ ಮೊಬೈಲ್‌ ಕಸಿದು ಪರಾರಿಯಾಗಿರುವ ಕೃತ್ಯ ಕೆಂಗೇರಿ ಬಳಿ ನಡೆದಿದೆ. ದುಷ್ಕರ್ಮಿಗಳ ಈ ಕೃತ್ಯದಿಂದ ಎರಡು ಪಕ್ಕೆಲುಬು ಮುರಿದುಕೊಂಡಿರುವ ವಿದ್ಯಾರ್ಥಿ ಸುಮಂತ್‌ ಕುಮಾರ್‌ (23) ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಮಂಡ್ಯದ ಶಂಕರನಗರ ನಿವಾಸಿ ಸುಮಂತ್‌ಕುಮಾರ್‌ ನಗರದ ಖಾಸಗಿ ಕಾಲೇಜೊಂದರಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದಾರೆ. ಸೆ.21ರಂದು ರಾತ್ರಿ 7.30ರ ಸುಮಾರಿಗೆ ನಗರ ರೈಲ್ವೇ ನಿಲ್ದಾಣದಲ್ಲಿ ಮೆಮೊ ಪ್ಯಾಸೆಂಜರ್‌ ರೈಲಿನಲ್ಲಿ ಮಂಡ್ಯಕ್ಕೆ ಪ್ರಯಾಣ ಬೆಳೆಸಿದ್ದು ಸೀಟು ಸಿಗದ ಕಾರಣ ಸುಮಂತ್‌ ಬೋಗಿಯ ಬಾಗಿಲ ಸಮೀಪ ಕುಳಿತಿದ್ದರು.

ರೈಲು ಕೆಂಗೇರಿ ರೈಲ್ವೇ ನಿಲ್ದಾಣ ಬಿಡುತ್ತಿದ್ದಂತೆ ಮೂವರು ದುಷ್ಕರ್ಮಿಗಳು ಸುಮಂತ್‌ನನ್ನು ಸುತ್ತುವರಿದಿದ್ದಾರೆ. ಅದರಲ್ಲಿ ಒಬ್ಟಾತ ಸುಮಂತ್‌ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದ್ದು, ಸುಮಂತ್‌ ಪ್ರತಿರೋಧ ತೋರಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮೊಬೈಲ್‌ ಕಸಿದುಕೊಂಡು ಕೆಳಗಡೆ ನೂಕಿ, ಅವರು ಧುಮುಕಿ ಪರಾರಿಯಾಗಿದ್ದಾರೆ.

ರೈಲ್ವೇ ಹಳಿಯ ಬಳಿ ಜೋರಾಗಿ ಬಿದ್ದ ಪರಿಣಾಮ ಸುಮಂತ್‌ ಗಂಭೀರವಾಗಿ ಗಾಯಗೊಂಡಿದ್ದು, ಅರ್ಧ 20 ನಿಮಿಷಗಳಿಗೂ ಹೆಚ್ಚು ಕಾಲ ಒಬ್ಬರೇ ನರಳಾಡಿದ್ದಾರೆ. ಕಡೆಗೆ, ಪ್ರಯಾಸದಿಂದ ಸಮೀಪ ರಸ್ತೆಗೆ ನಡೆದುಕೊಂಡು ಹೋಗಿ ಸ್ಥಳೀಯರ ಸಹಾಯದಿಂದ ಎಚ್‌.ಕೆ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಂತ್‌ ಅವರ ಎರಡೂ ಪಕ್ಕೆಲುಬು ಮುರಿದಿದ್ದು ಪ್ರಾಣಾಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳಿಗೆ ಕಡ್ಡಿ, ಕಲ್ಲೇ ಅಸ್ತ್ರ!: ಚಲಿಸುತ್ತಿರುವ ರೈಲುಗಳಲ್ಲಿ ಪ್ರಯಾಣಿಕರ ಮೊಬೈಲ್‌ ಕಳವು ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ದುಷ್ಕರ್ಮಿಗಳು, ಮೆಜೆಸ್ಟಿಕ್‌, ಕೆಂಗೇರಿ ರೈಲು ನಿಲ್ದಾಣಗಳ ಬಿಟ್ಟ ಸ್ವಲ್ಪವೇ ದೂರದಲ್ಲಿ ರೈಲ್ವೇ ಹಳಿಯ ಪಕ್ಕದಲ್ಲಿಯೇ ದುಷ್ಕರ್ಮಿಗಳು ಕಾದು ಕುಳಿತಿರುತ್ತಾರೆ. ಉದ್ದನೆಯ ಕೋಲು ಅಥವಾ ಕಲ್ಲು ಬಳಸಿ ಬೋಗಿಯ ಬಾಗಿಲಿನ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದವರನ್ನು ಗುರಿಯಾಗಿಸಿ ಅವರ ಕೈಗೆ ಹೊಡೆಯುತ್ತಾರೆ. ಏಟು ಬಿದ್ದ ಕೂಡಲೇ ಮೊಬೈಲ್‌ ಬೀಳುತ್ತದೆ. ಮತ್ತೂಬ್ಬ ಮೊಬೈಲ್‌ ಕದ್ದೊಯ್ಯುತ್ತಾನೆ ಎಂದು ಪೊಲೀಸರು ಹೇಳುತ್ತಾರೆ.

Advertisement

ವಿಶೇಷ ಕಾರ್ಯಾಚರಣೆ: ಚಲಿಸುತ್ತಿದ್ದ ರೈಲುಗಳಲ್ಲಿ ಮೊಬೈಲ್‌, ಚಿನ್ನಾಭರಣ ಸೇರಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ನಿರಂತರವಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರತಿಯೊಂದು ಪ್ರಕರಣವನ್ನೂ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದ್ದು, ಅಪರಾಧ ತಡೆಗಟ್ಟಲು ಕ್ರಮವಹಿಸಲಾಗಿದೆ. ಪ್ರಯಾಣಿಕರು ಕೂಡ ಅಪರಿಚಿತರ ಬಗ್ಗೆ ಎಚ್ಚರಿಕೆ ವಹಿಸಬೇಕು. ಬೋಗಿ ಬಾಗಿಲುಗಳಲ್ಲಿ ನಿಲ್ಲಬಾರದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸೈನಿಕನನ್ನೇ ನೂಕಿ ಮೊಬೈಲ್‌ ಕಿತ್ತಿದ್ದರು! : ಕಳೆದ ಆಗಸ್ಟ್‌ನಲ್ಲಿ ಭಾರತೀಯ ಸೇನೆ ಯೋಧ ಮಾದೇಗೌಡ ಎಂಬುವವರನ್ನು ಕೂಡ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ನೂಕಿದ್ದ ದುಷ್ಕರ್ಮಿಗಳು ಮೊಬೈಲ್‌ ಕಿಸಿದು ಪರಾರಿಯಾಗಿದ್ದರು. ಕುಟುಂಬದ ಜತೆ ಮಂಡ್ಯಕ್ಕೆ ಪ್ರಯಾಣಿಸುತ್ತಿದ್ದ ಮಾದೇಗೌಡ, ಶೌಚಾಲಯಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿತ್ತು.

ರೈಲ್ವೇ ಹಳಿ ಮೇಲೆ ಬಿದ್ದು ಕೋಮಾ ಸ್ಥಿತಿ ತಲುಪಿದ್ದ ಮಾದೇಗೌಡ ಅವರು ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಈ ಪ್ರಕರಣ ಸಂಬಂಧ ಸದ್ದಾಂ ಹುಸೇನ್‌ ಹಾಗೂ ಫ‌ಯಾಜ್‌ ಎಂಬುವವರನ್ನು ಬಂಧಿಸಿದ್ದು ಜೈಲಿಗೆ ಕಳುಹಿಸಲಾಗಿದೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.

ಎಚ್ಚರ ವಹಿಸಬೇಕಾದ ಅಂಶಗಳು!
-ಬೋಗಿಯ ಬಾಗಿಲುಗಳಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡಬೇಡಿ
-ಅನುಮಾನ ಬಂದ ಕೂಡಲೇ ರೈಲ್ವೆ ಸಹಾಯವಾಣಿಗೆ ಮಾಹಿತಿ ನೀಡಿ
-ಮೊಬೈಲ್‌ ಕೆಳಗೆ ಬಿದ್ದ ಕೂಡಲೇ ನೀವು ಇಳಿಯಲು ಯತ್ನಿಸಬೇಡಿ
-ನಿಮ್ಮ ಅಕ್ಕ-ಪಕ್ಕ ಯಾರಿದ್ದಾರೆ ಎಂಬ ಅರಿವು ನಿಮಗಿರಲಿ
-ಅಪರಿಚಿತರನ್ನು ಪರಿಚಯ ಮಾಡಿಕೊಳ್ಳುವ ಮುನ್ನ ಎಚ್ಚರ

* ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next