Advertisement

ಇನ್ನಾದರೂ ನಿಲ್ಲಲಿ ಸೆಲ್ಫಿ ಗೀಳು

10:31 AM Oct 05, 2017 | |

ಕಳೆದ ವಾರ ವಿದ್ಯಾರ್ಥಿಗಳ ತಂಡವೊಂದು ಕೆರೆಯಲ್ಲಿ ಇಳಿದು ಮೊಬೈಲ್‌ನಲ್ಲಿ ಸೆಲ್ಫಿ ಫೋಟೊ ತೆಗೆಯುತ್ತಿರುವಾಗ ಓರ್ವ ವಿದ್ಯಾರ್ಥಿ ಮುಳುಗಿ ಮೃತಪಟ್ಟಿದ್ದಾನೆ. ಸೆಲ್ಫಿ ತೆಗೆಯುತ್ತಿರುವವರಿಗೆ ತಮ್ಮೊಂದಿಗಿದ್ದ ವ್ಯಕ್ತಿ ಬೆನ್ನ ಹಿಂದೆಯೇ ಮುಳುಗುತ್ತಿದ್ದರೂ ಸೆಲ್ಫಿ ಕ್ಲಿಕ್ಕಿಸುವ ಸಂಭ್ರಮದಲ್ಲಿ ಗೊತ್ತಾಗಿರಲಿಲ್ಲ. ಇದಾಗಿ ಒಂದು ವಾರದಲ್ಲಿ ಇದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ರೈಲು ಹಳಿಯಲ್ಲಿ ಸೆಲ್ಫಿ ತೆಗೆಯುವ ಸಾಹಸದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇವೆರಡು ಬರೀ 10 ದಿನಗಳ ಅಂತರದಲ್ಲಿ ಬೆಂಗಳೂರಿನಲ್ಲಿ ಸಂಭವಿಸಿರುವ ಘಟನೆಗಳು. ಈ ಮಾದರಿಯ ಸೆಲ್ಫಿ ಅವಘಡಗಳು ನಿತ್ಯ ಎಂಬಂತೆ ಸಂಭವಿಸುತ್ತಲೇ ಇರುತ್ತದೆ. ಬ್ಲೂವೇಲ್‌ ಗೇಮ್‌ನಂತೆ ಆಧುನಿಕ ತಂತ್ರಜ್ಞಾನ ತಂದೊಡ್ಡಿರುವ ಹೊಸ ಗಂಡಾಂತರವಿದು. ಮೊಬೈಲ್‌ ಫೋನಿನಲ್ಲಿ ಅಪಾಯಕಾರಿ ಸ್ಥಳದಲ್ಲಿ ನಿಂತು ಸ್ವಯಂ ಫೋಟೊ ತೆಗೆದುಕೊಳ್ಳುವ ಅಥವ ವೀಡಿಯೊ ಶೂಟ್‌ ಮಾಡಿಕೊಳ್ಳುವ ಸೆಲ್ಫಿ ಗೀಳು ಈಗ ಕಳವಳಕಾರಿಯಾಗಿ ಹೆಚ್ಚುತ್ತಿದೆ. ಬ್ಲೂವೇಲ್‌ ಗೇಮ್‌ನಂತೆಯೇ ಜಗತ್ತಿನಾದ್ಯಂತ ಸೆಲ್ಫಿ ಗೀಳು ಕೂಡ ಆತಂಕ ಸೃಷ್ಟಿಸಿದೆ. ಅದರಲ್ಲೂ ಭಾರತದಲ್ಲಿ ಅತ್ಯಧಿಕ ಸೆಲ್ಫಿ ಸಾವುಗಳು ಸಂಭವಿಸುತ್ತಿವೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ. 

Advertisement

ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಮತ್ತು ಮೊಬೈಲ್‌ ಬಳಕೆಯಲ್ಲಿ ಎಲ್ಲ ದೇಶಗಳನ್ನು ಹಿಂದಿಕ್ಕುವ ಧಾವಂತದಲ್ಲಿರುವ ಭಾರತದಲ್ಲಿ ಇಷ್ಟರ ತನಕ ಸೆಲ್ಫಿ ಹುಚ್ಚಿಗೆ ಬಲಿಯಾದವರ ಸಂಖ್ಯೆ ಚಿಕ್ಕದಾಗಿದ್ದರೂ ಈ ಅಪಾಯಕಾರಿ ಹವ್ಯಾಸ ತಂದೊಡ್ಡುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಸಮೀಕ್ಷಗಳು ಹೇಳುವಂತೆ ಜಗತ್ತಿನ ಒಟ್ಟು ಸೆಲ್ಫಿ ಸಾವುಗಳಲ್ಲಿ ಶೇ.60 ಭಾರತದಲ್ಲಿ ಸಂಭವಿಸಿದೆ. ಒಂದೂವರೆ ವರ್ಷದಲ್ಲಿ 127 ಮಂದಿ ಸೆಲ್ಫಿಗೆ ಬಲಿಯಾಗಿದ್ದು, ಈ ಪೈಕಿ 76 ಮಂದಿ ಭಾರತದವರು. ಸೆಲ್ಫಿ ಗೀಳು ಈಗ ಮಕ್ಕಳು, ಹರೆಯದವರು, ಮಹಿಳೆಯರು, ಪುರುಷರು ವೃದ್ಧರು ಎಂಬ ಬೇಧವಿಲ್ಲದೆ ಎಲ್ಲರನ್ನೂ ಆವರಿಸಿಕೊಂಡಿದೆ. ಅದರಲ್ಲೂ ಯುವ ಜನಾಂಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವು ಒಂದು ಲೈಕ್‌ ಅಥವಾ ಒಂದು ಕಮೆಂಟ್‌ಗಾಗಿ ಪ್ರಾಣವನ್ನೇ ಪಣಕ್ಕೊಡ್ಡಿ ಸೆಲ್ಫಿ ಫೊಟೊ ತೆಗೆಯುವ ಸಾಹಸಕ್ಕಿಳಿಯುತ್ತಿರುವುದು ನಿಜಕ್ಕೂ ಗಂಭೀರವಾಗಿ ಚಿಂತಿಸಬೇಕಾದ ವಿಷಯ. ಹೆಚ್ಚಿನ ಸೆಲ್ಫಿ ಸಾವುಗಳು ಸಂಭವಿಸಿರುವುದು ನೀರಿನಲ್ಲಿ. ಅತಿ ಎತ್ತರದ ಜಾಗ, ರೈಲು ಹಳಿ, ಕಡಿದಾದ ಪ್ರದೇಶಗಳು,ಜಲಪಾತ, ನದಿ, ಕೆರೆ, ಸಮುದ್ರ ಕಿನಾರೆ ಸಾಮಾನ್ಯವಾಗಿ ಸೆಲ್ಫಿ ತೆಗೆಯುವವರ ಮೆಚ್ಚಿನ ಜಾಗಗಳು. ಅದರಲ್ಲೂ ಈಗ ಚಲಿಸುತ್ತಿರುವ ರೈಲಿನ ಜತೆಗೆ ಸೆಲ್ಫಿ ತೆಗೆದು ಸೋಷಿಯಲ್‌ ಮೀಡಿಯಾಗಳಲ್ಲಿ ಹಾಕಿ ಮೆಚ್ಚುಗೆ ಪಡೆಯುವುದು ಹೊಸ ಪ್ರವೃತ್ತಿ. ಇದು ಅತ್ಯಂತ ಅಪಾಯಕಾರಿಯಾದ ಸೆಲ್ಫಿ ಸಾಹಸ. ಫೋಟೊ ತೆಗೆಯುವುದರಲ್ಲಿ ಮಗ್ನರಾಗಿರುವಾಗ ರೈಲು ಸಮೀಪ ಬಂದಿರುವುದು ತಿಳಿಯುವುದಿಲ್ಲ. ಬೆಂಗಳೂರಿನಲ್ಲಿ ಆಗಿರುವುದು ಇದೇ. ಇದೇ ರೀತಿಯಲ್ಲಿ ಡ್ರೈವಿಂಗ್‌ ಮಾಡುವಾಗ ಸೆಲ್ಫಿ ತೆಗೆಯುವ ಸಾಹಸ ಮಾಡುವವರೂ ಇದ್ದಾರೆ. ಮುಂಬೈನ ಸಮುದ್ರ ಕಿನಾರೆಯಲ್ಲಿ ಸೆಲ್ಫಿ ತೆಗೆಯುವವರು ನೀರುಪಾಲಾದ ಘಟನೆಗಳು ಸಂಭವಿಸಿದ ಬಳಿಕ  16 ಸ್ಥಳಗಳನ್ನು ಸೆಲ್ಫಿ ನಿಷೇಧಿತ ಪ್ರದೇಶವೆಂದು ಘೋಷಿಸಿದೆ. 

ಸೆಲ್ಫಿ ಗೀಳಿಗೆ ಬುದ್ಧಿವಂತರು, ದಡ್ಡರು, ಅಮಾಯಕರು, ವಿದ್ಯಾವಂತರು, ಅವಿದ್ಯಾವಂತರೂ ಎಂಬ ಬೇಧವಿಲ್ಲ. ಭಾರೀ ಬುದ್ಧಿವಂತರೂ ಕೂಡ ಸೆಲ್ಫಿ ತೆಗೆಯಲು ಹೋಗಿ ಎಡವಟ್ಟು ಮಾಡಿಕೊಂಡಿರುವ ಹಲವು ಉದಾಹರಣೆಗಳಿವೆ.  ಪುರುಷರಿಗಿಂತಲೂ ಮಹಿಳೆಯರಿಗೆ ಸೆಲ್ಫಿ ಹುಚ್ಚು ಹೆಚ್ಚು. ಆದರೆ ಅಪಾಯಕಾರಿ ಸೆಲ್ಫಿ ತೆಗೆಯುವುದರಲ್ಲಿ ಮಹಿಳೆಯರಿಗಿಂತ ಪುರುಷರು ಮುಂದು. ಮನಶಾÏಸ್ತ್ರಜ್ಞರ ಪ್ರಕಾರ ಮನುಷ್ಯನೊಳಗಿರುವ ತನ್ನನ್ನು ಪ್ರಚಾರಪಡಿಸಿಕೊಳ್ಳುವ ಬಯಕೆ ಕಾರಣ. ತಮ್ಮನ್ನು ಉಳಿದವರು ಮೆಚ್ಚಿಕೊಳ್ಳಬೇಕು, ಹೊಗಳಬೇಕು ಎಂದು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಗಳು, ಸಿಗುವುದರಿಂದ ಎಷ್ಟೇ ಅಪಾಯವಿದ್ದರೂ ಲೆಕ್ಕಿಸದೆ ಸೆಲ್ಫಿ ಫೋಟೊ ತೆಗೆಯುತ್ತಾರೆ. ಬಹುತೇಕ ಸೆಲ್ಫಿ ಹುಚ್ಚಿಗೆ ಬಲಿಯಾದವರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಎನ್ನುವ ಅಂಶ ಈ ವಿಷಯವನ್ನು ದೃಢಪಡಿಸುತ್ತದೆ. ನಾನು ಮಹಾನ್‌ ವ್ಯಕ್ತಿ ಎಂಬ ಅತಿಯಾದ ಮೇಲರಿಮೆಯ ಭಾವನೆ ಅಥವ ನಾನೇನೂ ಅಲ್ಲ ಎಂಬ ತೀರಾ ಕೀಳರಿಮೆಯ ಭಾವನೆ ಇರುವ ವ್ಯಕ್ತಿಗಳೇ ಹೆಚ್ಚಾಗಿ ಅಪಾಯಕಾರಿ ಸೆಲ್ಫಿ ತೆಗೆಯಲು ಮುಂದಾಗುತ್ತಾರೆ ಎನ್ನುವುದು ಈ ಕುರಿತು ಅಧ್ಯಯನ ಮಾಡಿದವರು ಕಂಡುಕೊಂಡಿರುವ ವಿಚಾರ. ಏನೇ ಆದರೂ ಕಾನೂನು ಮಾಡಿ ಸೆಲ್ಫಿ ಹುಚ್ಚು ಬಿಡಿಸುವುದು ಅಸಾಧ್ಯ. ಅಪಾಯಕಾರಿ ಸೆಲ್ಫಿ ತೆಗೆಯುವುದೆಂದರೆ ನಮ್ಮ ಪ್ರಾಣವನ್ನು ನಾವೇ ತೆಗೆಯುವುದು ಎಂಬ ಅರಿವು ಮೂಡಿದರೆ ಈ ಹುಚ್ಚಿಗೆ ತುಸು ಅಂಕುಶ ಹಾಕಬಹುದು.

Advertisement

Udayavani is now on Telegram. Click here to join our channel and stay updated with the latest news.

Next