ಬೆಂಗಳೂರು: ಕೋವಿಡ್-19 ನಿಯಂತ್ರಣ ಕಾರ್ಯದಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೋಲೀಸರಿಗೆ ವಿಶ್ರಾಂತಿ ಪಡೆಯಲು ಆರು ಕಡೆ ಮೊಬೈಲ್ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸಲು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಸೋಮವಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಮಹಾರಾಷ್ಟ್ರದ ಗಡಿ ಭಾಗದ ನಿಪ್ಪಾಣಿ, ಧೂಳಖೇಡ್, ಕಲಬುರ್ಗಿ, ರಾಯಚೂರು, ವಿಜಯಪುರ ಹಾಗೂ ತಮಿಳುನಾಡು ಗಡಿ ಭಾಗದ ಅತ್ತಿಬೆಲೆಯಲ್ಲಿ ಮೊಬೈಲ್ ವಿಶ್ರಾಂತಿ ಕೊಠಡಿ ಸ್ಥಾಪಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಕೋವಿಡ್-19 ಕರ್ತವ್ಯದಲ್ಲಿ ನಿರತ ಹಾಗೂ ಕ್ವಾರಂಟೈನ್ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರ ಕಡ್ಡಾಯವಾಗಿ ಕೋವಿಡ್-19 ತಪಾಸಣೆಗೊಳಪಡಿಸುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಚೆಕ್‌ಪೋಸ್ಟ್ ಹಾಗೂ ಕಂಟೇನ್ಮೆಂಟ್ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಾಟನ್ ಕೈಗವಸು, ಮಾಸ್ಕ್, ಹೆಡ್ ವೈಸರ್ ಜೊತೆ ವೈಪರ್, ಪಿಪಿಐ ಕಿಟ್ ಗಳನ್ನು ನೀಡುವುದು. ಗಡಿ ಭಾಗದಲ್ಲಿ ಶಿಫ್ಟ್ ಮೇಲೆ ಕರ್ತವ್ಯ ನಿರ್ವಹಿಸುವುದು. ಅವರಿಗೆ ಮಾಸ್ಕ್, ಗ್ಲೌಸ್, ಪಿಪಿಐ ಕಿಟ್ ಗಳನ್ನು ಒದಗಿಸುವುದು, ಪೊಲೀಸ್ ಠಾಣೆಗಳಲ್ಲಿ ಸ್ವತ್ಛತೆ ಕಾಪಾಡುವುದು ಹಾಗೂ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಜೊತೆಗೆ ನಿರಂತರ ಸಂಪರ್ಕದಲ್ಲಿರುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಬೊಮ್ಮಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.