Advertisement

Mobile Phones: ಸಂಬಂಧ ಕಳಚುತ್ತಿರುವ ಮೊಬೈಲ್‌ ಬಾಂಧವ್ಯ

05:58 PM Nov 06, 2024 | Team Udayavani |

ಸ್ನೇಹ, ಸಂಬಂಧಗಳು ಈಗ ಬರೀ ವಾಟ್ಸ್‌ ಆ್ಯಪ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಹೀಗೆ ಸಾಮಾಜಿಕ ಮಾಧ್ಯಮಗಳಿಗಷ್ಟೇ ಸೀಮಿತವಾಗಿದೆ. ಮಕ್ಕಳು ದೈಹಿಕ ಆಟಗಳನ್ನು ಮರೆತು ಮೊಬೈಲ್‌ ಆಟ, ರೀಲ್ಸ್‌ಗಳನ್ನು ನೋಡುವುದರಲ್ಲಿ ಮಗ್ನರಾಗಿದ್ದಾರೆ, ಅದರ ದಾಸರಾಗಿದ್ದಾರೆ. ಸುದೀರ್ಘ‌ವಾಗಿ ಬೆಳೆದು ಬಂದ ಒಂದು ಪರಂಪರೆಯ ಕೊಂಡಿ ಕಳಚಲು ಪ್ರಾರಂಭವಾಗಿದೆ. ತಂತ್ರಜ್ಞಾನ ಯುಗ ಎಂದು ಹೇಳಲು ಭಯವಾಗುವ ದಿನಗಳು ಬಂದು ಬಾಗಿಲ ಒಳಗಡೆ ನಿಂತು, ತನ್ನ ಪ್ರಾಬಲ್ಯ ಮೆರೆದು, ಅಸ್ತಿತ್ವ ಸ್ಥಾಪಿಸಿ ಅಪಹಾಸ್ಯ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ಏಕೆ ಈ ಸ್ಥಿತಿ ಬಂದೊದಗಿದೆ ಎಂಬುದನ್ನು ತಿಳಿಯಲು ಯಾರಿಗಾದರೂ ಆಸಕ್ತಿ ಇದೆಯೆ? ಸಮಯವಾದರೂ ಇದೆಯೆ?, ಇದ್ದರೂ ಅದರ ಬಗ್ಗೆ ಯೋಚಿಸುವ ವ್ಯವಧಾನ ಇದೆಯೇ ಅನ್ನುವುದು ಸಹಜ ಮಾತಾಗಿದೆ.

Advertisement

ರಜಾ ದಿನಗಳು ಬಂದರೆ ಸಾಕು ಮಾವನ ಮನೆ ಅರಮನೆಯಂತೆ ಕಾಣುತ್ತಿದ್ದ ದಿನಗಳು ಮರೆಯಾಗುತ್ತಿವೆ. ಎಷ್ಟೊಂದು ಸುಂದರ ದಿನಗಳು ದಸರೆಯ ಮೆರಗು ಕಂಡ ಹಾಗೆ, ಆದರೆ ಇತ್ತೀಚಿನ ಕಾಲದ ಮಕ್ಕಳು ಎಲ್ಲ ಬಾಂಧವ್ಯಗಳನ್ನು ಜಂಗಮವಾಣಿಯೊಂದಿಗೆ ಹೊಂದಿರುವುದು ವಿಷಾದನೀಯ. ತಲೆ ತಲಾಂತರದಿಂದ ಬಂದ ಆಟೋಟಗಳು ಕಣ್ಮರೆಯಾಗಿವೆ.

ಮಕ್ಕಳು ದಸರಾ ಹಬ್ಬದ ರಜೆಯ ದಿನಗಳಲ್ಲಿ ಅಜ್ಜನ ಮನೆಗೆ ಹೋಗಿ ಅಲ್ಲಿ ಆಟ ಆಡುತ್ತಾ, ಕೀಟಲೆ ಮಾಡುತ್ತಾ ಇದ್ದಂತಹ ದಿನಗಳೆಲ್ಲ ಈಗ ನೆನೆಯುವಾಗ ಒಂದು ಕನಸಿನ ರೀತಿ ಭಾಸವಾಗುತ್ತಿದೆ. ಪ್ರಸ್ತುತ ಅಜ್ಜ, ಅಜ್ಜಿ ಮತ್ತು ಮಾವನ ಬಾಂಧವ್ಯವನ್ನು ಗಾಳಿಗೆ ತೂರಿ ನಮಗೂ ಅವರಿಗೆ ಏನೂ ಸಂಬಂಧವಿಲ್ಲ ಅನ್ನುವಂತೆ ಇರುವುದು ನೋಡಿದರೆ ಬಹಳಷ್ಟು ಮನಸ್ಸಿಗೆ ಖೇದವನ್ನುಂಟು ಮಾಡುತ್ತದೆ.

ಇದನ್ನೆಲ್ಲ ನೋಡಿದರೆ ಇನ್ನು ಮುಂದೆ ಇತಿಹಾಸದ ಪುಟಗಳಲ್ಲಿ ಸಂಬಂಧಗಳ ವಿವರಗಳನ್ನು ಓದಿ ತಿಳಿದುಕೊಳ್ಳುವ ಕಾಲ ದೂರವಿಲ್ಲ ಅನ್ನಬಹುದು. ಇದನ್ನು ಸರಿಪಡಿಸಬೇಕಾಗಿದೆ. ಸಂಬಂಧಗಳ ಕೊಂಡಿಯನ್ನು ಮತ್ತೆ ಬಿಗಿಗೊಳಿಸಲು ಪೋಷಕರು ಮತ್ತು ಶಿಕ್ಷಣದ ಪದ್ಧತಿಯಿಂದ ಸಾಧ್ಯ. ಸಂಬಂಧಗಳು ಮತ್ತು ಬಾಂಧವ್ಯಗಳ ಕೊಂಡಿಗಳು ಗಟ್ಟಿಯಾಗಿಸುವತ್ತ ಹೆಜ್ಜೆ ಹಾಕೋಣ.

-ಸುನಿಲ್‌ ತೆಗೋರ

Advertisement

ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next