Advertisement
ಎಟಿಎಂ, ಆನ್‌ಲೈನ್ ಬ್ಯಾಂಕಿಂಗ್‌ನಂತಹ ಆಧುನಿಕ ಸೇವೆಗಳನ್ನು ಪರಿಚಯಿಸಿದ ಬಳಿಕ ಭಾರತೀಯ ಅಂಚೆ ಕರಾವಳಿಯಲ್ಲಿ ಇಂತಹದೊಂದು ಬದಲಾವಣೆಗೆ ತೆರೆದುಕೊಳ್ಳುತ್ತಿದೆ.
ಸದ್ಯ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಮನಿ ಆರ್ಡರ್, ಪಾರ್ಸೆಲ್‌ನಂತಹ ಬಟವಾಡೆಗಳನ್ನು ಪೋಸ್ಟ್‌ಮನ್ ವಿಳಾಸದಾರರಿಗೆ ಹಸ್ತಾಂತರಿಸಿದ ಬಳಿಕ ಮುದ್ರಿತ ನಮೂನೆಯಲ್ಲಿ ಸಹಿ ಪಡೆದುಕೊಳ್ಳುತ್ತಾರೆ. ಕಚೇರಿಗೆ ಮರಳಿದ ಬಳಿಕ ಆಯಾ ದಿನದ ಒಟ್ಟು ಬಟವಾಡೆ ವಿವರಗಳನ್ನು ಅಂಚೆ ಇಲಾಖೆಯ ದಾಖಲೆಯಲ್ಲಿ ನಮೂದಿಸುತ್ತಾರೆ. ಇನ್ನು ಮುಂದೆ ಬಟವಾಡೆಯ ಬಳಿಕ ಮೊಬೈಲ್‌ನಲ್ಲಿ ಸಹಿ ಮಾಡಿಸಿಕೊಂಡು ಸಂಪರ್ಕ ದೂರವಾಣಿ ಸಂಖ್ಯೆಯನ್ನು ನಮೂದಿಸುತ್ತಾರೆ. ಅನಂತರ ಡೆಲಿವರಿ ಮಾಡಿದ ವಸ್ತು, ಸಮಯ, ವಿಳಾಸ ಮತ್ತಿತರ ಮಾಹಿತಿಗಳನ್ನು ಬಾರ್‌ಕೋಡ್ ಮೂಲಕ ಮೊಬೈಲ್ ಆ್ಯಪ್‌ನಲ್ಲಿ ನಮೂದಿಸುತ್ತಾರೆ. ವಿವರಗಳು ಪ್ರಧಾನ ಕಚೇರಿಯ ಕಂಪ್ಯೂಟರ್‌ನಲ್ಲಿ ಸೇರ್ಪಡೆಗೊಳ್ಳುತ್ತವೆ. ಇದರಿಂದ ತ್ವರಿತಗತಿಯ ಅಂಚೆ ಸೇವೆ ಸಾಧ್ಯವಾಗಲಿದೆ. ಸಹಿ ಮಾಡುವಂತೆ ಹೆಬ್ಬೆಟ್ಟು ಒತ್ತುವವರಿಗೂ ಆಯ್ಕೆಯಿದೆ.
Related Articles
ಕೆಲವೆಡೆ ಪೋಸ್ಟ್‌ಮನ್‌ಗಳು ತಾವಿರುವ ಸ್ಥಳಕ್ಕೆ ವಿಳಾಸದಾರರನ್ನು ಕರೆದು ಬಟವಾಡೆ ಮಾಡುವ ಪರಿಸ್ಥಿತಿ ಇದೆ. ಈ ಕಾರಣದಿಂದ ಮುಂದೆ ಇದೇ ಆ್ಯಪ್‌ನಲ್ಲಿ ಜಿಪಿಎಸ್ ಅಳವಡಿಕೆ ಕೂಡ ಮಾಡಲಾಗುತ್ತದೆ. ಇದರಿಂದ ಬಟವಾಡೆ ಎಲ್ಲಿ ನಡೆದಿದೆ ಎಂಬ ಮಾಹಿತಿ ದಾಖಲಾಗುತ್ತದೆ. ಇಲಾಖೆಯಲ್ಲಿ ಇದೊಂದು ಮಹತ್ತರ ಬದಲಾವಣೆ ಎಂದು “ಉದಯವಾಣಿ’ ಜತೆಗೆ ಮಾತನಾಡಿದ ಮಂಗಳೂರಿನ ಪೋಸ್ಟ್‌ಮನ್ ಒಬ್ಬರು ತಿಳಿಸಿದ್ದಾರೆ.
Advertisement
3,000 ಪೋಸ್ಟ್ಮನ್ಗಳುದ.ಕ. ಹಾಗೂ ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿ ಅಂಚೆ ಇಲಾಖೆಯಲ್ಲಿ ಮಂಗಳೂರು, ಪುತ್ತೂರು ಹಾಗೂ ಉಡುಪಿ ವಿಭಾಗಗಳಿವೆ. ಮಂಗಳೂರು ಹಾಗೂ ಪುತ್ತೂರು ವಿಭಾಗದಲ್ಲಿ ಮುಖ್ಯ ಅಂಚೆ ಕಚೇರಿ, ಉಪ ವಿಭಾಗದ ಅಂಚೆ ಕಚೇರಿ ಹಾಗೂ ಗ್ರಾಮೀಣ ಅಂಚೆ ಕಚೇರಿ ಸೇರಿ ಒಟ್ಟು 540 ಹಾಗೂ ಉಡುಪಿಯಲ್ಲಿ 263 ಅಂಚೆಕಚೇರಿಗಳು ಸೇರಿ ಕರಾವಳಿಯಲ್ಲಿ ಒಟ್ಟು 803 ಅಂಚೆ ಕಚೇರಿಗಳಿವೆ. ಮಂಗಳೂರು ವಿಭಾಗ ವ್ಯಾಪ್ತಿಯಲ್ಲಿ ಸುಮಾರು 600 ಹಾಗೂ ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಸುಮಾರು 1,000ರಷ್ಟು ಪೋಸ್ಟ್‌ಮನ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಉಡುಪಿ ವ್ಯಾಪ್ತಿಯಲ್ಲಿ ಸುಮಾರು 1,500 ಮಂದಿ ಇದ್ದಾರೆ. ಈ ಎರಡು ಜಿಲ್ಲೆಗಳಲ್ಲಿ ಒಟ್ಟು ಸುಮಾರು 3,000ದಷ್ಟು ಪೋಸ್ಟ್‌ಮನ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ತಂತ್ರಜ್ಞಾನ ಆಧಾರಿತ ಮೊಬೈಲ್ ಸೇವೆ
ಗ್ರಾಹಕರಿಗೆ ತ್ವರಿತಗತಿಯಲ್ಲಿ ಅಂಚೆ ವಿಲೇವಾರಿಗೆ ಹಾಗೂ ಅಂಚೆ ಬಟ ವಾಡೆಯ ಬಗ್ಗೆ ಸಕಾಲದಲ್ಲಿ ಮಾಹಿತಿ ಪಡೆ ಯಲು ಮೊಬೈಲ್ ಆ್ಯಪ್ ಸೇವೆಯನ್ನು ಪರಿಚಯಿಸಲಾಗಿದೆ. ಸದ್ಯ ಮಂಗಳೂರು ವ್ಯಾಪ್ತಿಯ 30ರಷ್ಟುಪೋಸ್ಟ್‌ಮನ್ ಈ ಸೇವೆ ಬಳಸುತ್ತಿದ್ದು, ಹಂತ ಹಂತವಾಗಿ ಎಲ್ಲರಿಗೂ ವಿಸ್ತರಿಸಲಾಗುವುದು.
– ವಿಘ್ನೇಶ್ ಪೈ ಪಿ., ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಪ್ರಧಾನ ಅಂಚೆ ಕಚೇರಿ, ಮಂಗಳೂರು