Advertisement

ಠೀವಿಯಿಂದ…ಟಿ.ವಿ ಅಂಗಳದಲ್ಲಿ ಮೊಬೈಲ್‌ ಫೋನ್‌ ಬ್ರಾಂಡ್‌ಗಳು!

10:32 AM Sep 17, 2019 | Sriram |

ಸ್ಮಾರ್ಟ್‌ ಫೋನ್‌ ತಯಾರಿಕಾ ಕಂಪೆನಿಗಳು ಈಗ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿವೆ. ಶಿಯೋಮಿ ಕಂಪೆನಿಯ ಯಶಸ್ಸಿನಿಂದ ಉತ್ತೇಜಿತವಾದ ಒನ್‌ಪ್ಲಸ್‌, ಹುವಾವೇ, ಮೋಟೋ ಕಂಪೆನಿಗಳು ತಮ್ಮ ಹೊಸ ಸ್ಮಾರ್ಟ್‌ ಟಿವಿಗಳನ್ನು ಸೆಪ್ಟೆಂಬರ್‌ 16, 17, 18 ಮತ್ತು 26ರಂದು ಬಿಡುಗಡೆ ಮಾಡುತ್ತಿವೆ!

Advertisement

25 ವರ್ಷಗಳ ಹಿಂದೆ ಟಿವಿಗಳದೇ ಕಾರುಬಾರು. ಭಾರತದ ಟಿವಿ ಮಾರುಕಟ್ಟೆಯಲ್ಲಿ ಡಯನೋರಾ, ಬಿಪಿಎಲ್‌, ಸಾಲಿಡೇರ್‌, ಆಪಾrನಿಕಾ, ಫಿಲಿಪ್ಸ್‌, ನೆಲ್ಕೋ , ಕಿಯೋನಿಕ್ಸ್‌, ಕ್ರೌನ್‌ ಬಳಿಕ ಸೋನಿ, ಸ್ಯಾಮ್‌ಸಂಗ್‌, ಎಲ್‌ಜಿ, ಶಾರ್ಪ್‌, ಪ್ಯಾನಸೋನಿಕ್‌, ಅಕಾಯ್‌, ಐವಾ, ಸ್ಯಾನ್‌ಸುಯಿ, ಥಾಮ್‌ಸನ್‌ ಮತ್ತಿತರ ಬ್ರಾಂಡುಗಳದೇ ಕಾರುಬಾರು! ಈಗ ಹೇಗೆ ಮೊಬೈಲ್‌ ಪೋನ್‌ಗಳನ್ನು ಕೊಳ್ಳಲು ಆಸಕ್ತಿ ತೋರಿಸುತ್ತಾರೋ ಹಾಗೆ, ಬಣ್ಣದ ಟಿವಿಗಳನ್ನು ಕೊಳ್ಳಲು ಜನರು ಸಂಭ್ರಮಿಸುತ್ತಿದ್ದರು. ಬಳಿಕ ಡಬ್ಬದಂಥ ಸಾಂಪ್ರದಾಯಿಕ ಟಿವಿಗಳು ಹೋಗಿ ಎಲ್‌ಸಿಡಿ, ಎಲ್‌ಇಡಿ ಟಿವಿಗಳು ಬಂದವು. ಸ್ಮಾರ್ಟ್‌ ಫೋನ್‌ಗಳ ಕ್ರಾಂತಿಯಾದ ಬಳಿಕ, ಟಿವಿಗಳು ಸಹ ಸ್ಮಾರ್ಟ್‌ ಆದವು. ಮೊಬೈಲ್‌ನಲ್ಲಿ ಅಂಡ್ರಾಯ್ಡ ಇರುವಂತೆಯೇ ಟಿವಿಗಳಲ್ಲೂ ಅಂಡ್ರಾಯ್ಡ ಆಪರೇಟಿಂಗ್‌ ಸಿಸ್ಟಂ ಇರುವುದು ಈಗ ಟ್ರೆಂಡ್‌ ಆಗಿದೆ. ಸ್ಮಾರ್ಟ್‌ ಟಿವಿ ಎಂದರೆ, ಅದರಲ್ಲಿ ಅಂಡ್ರಾಯ್ಡ ಕಾರ್ಯಾಚರಣೆ ವ್ಯವಸ್ಥೆ ಇದೆಯೇ ಎಂದು ಖಚಿತಪಡಿಸಿಕೊಂಡು ಕೊಳ್ಳುವಂತಾಗಿದೆ.

ಎಲ್‌ಸಿಡಿ, ಎಲ್‌ಇಡಿ ಟಿವಿ ಮಾರುಕಟ್ಟೆಯಲ್ಲಿ ಸೋನಿ, ಸ್ಯಾಮ್‌ಸಂಗ್‌, ಎಲ್‌ಜಿ ಪ್ಯಾನಸೋನಿಕ್‌, ಶಾರ್ಪ್‌ ಇತ್ಯಾದಿ ಕಂಪೆನಿಗಳು ಪ್ರಾಬಲ್ಯ ಸಾಧಿಸಿದ್ದವು. ಟಿವಿಗಳು ಸ್ಮಾರ್ಟ್‌ ಆದ ಬಳಿಕ ಈ ಬ್ರಾಂಡ್‌ಗಳು ಮಂದಗತಿಯಲ್ಲಿ ಅದನ್ನು ಅಳವಡಿಸಿಕೊಂಡು ಸಾಗುತ್ತಿದ್ದವು. ಭಾರತದಲ್ಲಿ ಸ್ಮಾರ್ಟ್‌ ಟಿವಿ ಮಾರುಕಟ್ಟೆಯನ್ನು ಚಲನಶೀಲಗೊಳಿಸಿದ ಕೀರ್ತಿ ಮೊದಲಿಗೆ ವಿಯು ಬ್ರಾಂಡ್‌ಗೆ ಸಲ್ಲುತ್ತದೆ. ಫ್ಲಿಪ್‌ಕಾರ್ಟ್‌ ಮೂಲಕ ಅದು ಮಾರಾಟ ಆರಂಭಿಸಿದ ಬಳಿಕ 60-70 ಸಾವಿರ ರೂ. ಗಳಿದ್ದ ಸ್ಮಾರ್ಟ್‌ ಟಿವಿ ಬೆಲೆ 25 ಸಾವಿರಕ್ಕೆ ದೊರಕುವಂತಾಯಿತು.

ಅದಾದ ಬಳಿಕ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಭಾರತದಲ್ಲಿ ಚುರುಕು ಮುಟ್ಟಿಸಿ ಸ್ಯಾಮ್‌ಸಂಗ್‌ ಅನ್ನು ಹಿಂದಿಕ್ಕಿ ನಂ.1 ಆದ ಶಿಯೋಮಿ ಕಂಪೆನಿ, ಸ್ಮಾರ್ಟ್‌ ಟಿವಿ ಮಾರುಕಟ್ಟೆಗೂ ಲಗ್ಗೆ ಹಾಕಿ 12-13 ಸಾವಿರಕ್ಕೇ ಸ್ಮಾರ್ಟ್‌ ಟಿವಿ ದೊರಕುವಂತೆ ಮಾಡಿತು. ಎರಡೇ ವರ್ಷದಲ್ಲಿ ಭಾರತದ ಸ್ಮಾರ್ಟ್‌ ಟಿವಿ ಮಾರುಕಟ್ಟೆಯಲ್ಲೂ ನಂಬರ್‌ ಒನ್‌ ಆಯಿತು. ಇಂಟರ್‌ನೆಟ್‌ ಬಳಸಿಕೊಂಡು ಸ್ಮಾರ್ಟ್‌ ಟಿವಿ ಆನ್‌ ಮಾಡಿ, ತಮಗೆ ಬೇಕಾದ ಸಿನಿಮಾಗಳನ್ನು, ಧಾರಾವಾಹಿಗಳನ್ನು ತಮಗೆ ಬೇಕಾದ ಸಮಯದಲ್ಲಿ ನೋಡುವ ಅವಕಾಶ ಗ್ರಾಹಕರಿಗೆ ದೊರಕಿತು.

ಶಿಯೋಮಿ ಕಂಪೆನಿ ಸ್ಮಾರ್ಟ್‌ ಟಿವಿ ಕ್ಷೇತ್ರದಲ್ಲಿ ಸಕ್ಸಸ್‌ ಆಗುತ್ತಿದ್ದಂತೆಯೇ ಇತರ ಮೊಬೈಲ್‌ ಕಂಪೆನಿಗಳು ಸಹ ಸ್ಮಾರ್ಟ್‌ ಟಿವಿಗಳನ್ನು ಹೊರತರಲು ತುದಿಗಾಲಲ್ಲಿ ನಿಂತಿವೆ. ಒನ್‌ಪ್ಲಸ್‌, ಮೊಟೊರೊಲಾ, ಹುವಾವೇ ಕಂಪೆನಿಗಳು ಹೊಸ ಟಿವಿಗಳನ್ನು ಶೀಘ್ರವೇ ಬಿಡುಗಡೆ ಮಾಡುತ್ತಿವೆ.

Advertisement

ಒನ್‌ಪ್ಲಸ್‌ ಟಿವಿ: ಚೀನಾದ ಒನ್‌ಪ್ಲಸ್‌ ಕಂಪೆನಿ, ತನ್ನ ಮಾತೃದೇಶಕ್ಕಿಂತ ಮೊದಲು ಸ್ಮಾರ್ಟ್‌ ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ! ಉತ್ತಮ ಗುಣಮಟ್ಟ, ಮಿತವ್ಯಯದ ದರಕ್ಕೆ ಪ್ರೀಮಿಯಂ ಫೋನ್‌ಗಳನ್ನು ನೀಡುತ್ತಿರುವ ಒನ್‌ಪ್ಲಸ್‌, ಗ್ರಾಹಕರ ವಿಶ್ವಾಸಾರ್ಹತೆ ಗಳಿಸಿಕೊಂಡಿದೆ. ಅದೇ ಕಾರಣಕ್ಕೆ ಗ್ರಾಹಕರು ಒನ್‌ಪ್ಲಸ್‌ ಟಿವಿಯನ್ನು ಎದುರು ನೋಡುತ್ತಿದ್ದಾರೆ. ಸೆಪ್ಟೆಂಬರ್‌ 26ರಂದು ಒನ್‌ಪ್ಲಸ್‌ನ ಚೊಚ್ಚಲ ಟಿವಿ ಬಿಡುಗಡೆಯಾಗಲಿದೆ. ಇದು ಅಂಡ್ರಾಯ್ಡ ಟಿವಿಯಾಗಿದ್ದು, 55 ಇಂಚಿನ ಪರದೆ ಇರುತ್ತದೆ. 4ಕೆ ಕ್ಯೂಎಲ್‌ಇಡಿ ರೆಸುÂಲೇಶನ್‌ ಹೊಂದಿದೆ. ಡಾಲ್ಬಿ ವಿಷನ್‌ ಹಾಗೂ ಡಾಲ್ಬಿ ಅಟ್‌ಮೋಸ್‌ ಸೌಂಡ್‌ ಹೊಂದಿರಲಿದೆ. ಎಂಟು ಸ್ಪೀಕರ್‌ಗಳಿರಲಿದ್ದು, 50ವ್ಯಾಟ್‌ ಸೌಂಡ್‌ ಔಟ್‌ಪುಟ್‌ ಹೊಂದಿರಲಿದೆ!ದರದ ಬಗ್ಗೆ ಯಾವ ಸುಳಿವನ್ನೂ ಕಂಪೆನಿ ನೀಡಿಲ್ಲ. ಈಗ ಶಿಯೋಮಿಯ 55 ಇಂಚಿನ ಟಿವಿಗೆ 40 ಸಾವಿರ ರೂ. ದರವಿದೆ. ಸೋನಿ ಕಂಪೆನಿಯಲ್ಲಾದರೆ 55 ಇಂಚಿನ ಎಲ್‌ಇಡಿ ಟಿವಿಗೆ 85 ಸಾವಿರದಿಂದ 1 ಲಕ್ಷ ರೂ. ದರವಿದೆ. ಹೀಗಾಗಿ ಒನ್‌ಪ್ಲಸ್‌ ಟಿವಿಯ ದರ ಶಿಯೋಮಿಗಿಂತ ಹೆಚ್ಚು, ಸೋನಿಗಿಂತ ಕಡಿಮೆ ಇರುವುದಂತೂ ಖಚಿತ!

ಒನ್‌ಪ್ಲಸ್‌ ರಿಮೋಟ್‌ಗೆ ಚಾರ್ಜಿಂಗ್‌ ಸೌಲಭ್ಯ!
ಒನ್‌ಪ್ಲಸ್‌ ಟಿವಿಯ ವಿಶೇಷವೆಂದರೆ ಅದರ ರಿಮೋಟ್‌. ಇದರ ರಿಮೋಟ್‌ ಕಂಟ್ರೋಲ್‌ಗೆ ಇದುವರೆಗೆ ಇದ್ದ ಎಎಎ ಬ್ಯಾಟರಿಗಳನ್ನು ಹಾಕಬೇಕಾಗಿಲ್ಲ! ಮೊಬೈಲ್‌ ಫೋನ್‌ಗಳಲ್ಲಿರುವಂತೆಯೇ ಇನ್‌ಬಿಲ್ಟ್ ಬ್ಯಾಟರಿ ಇರಲಿದ್ದು, ಅದನ್ನು ನಾವೆಲ್ಲ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವ ಯುಎಸ್‌ಬಿ ಟೈಪ್‌ ಸಿ ಕೇಬಲ್‌ ಮೂಲಕ ಚಾರ್ಜ್‌ ಮಾಡಿಕೊಳ್ಳಬೇಕು!

ಮೋಟೋ ಟಿವಿ
ಲೆನೊವೋ ಒಡೆತನದ ಮೋಟೋರೊಲಾ ಕೂಡ ಸ್ಮಾರ್ಟ್‌ಟಿವಿ ಕ್ಷೇತ್ರಕ್ಕೆ ಲಗ್ಗೆಯಿಡುತ್ತಿದೆ. ತನ್ನ ಹೊಸ ಸ್ಮಾರ್ಟ್‌ ಟಿವಿಯನ್ನು ಇಂದು (ಸೆಪ್ಟೆಂಬರ್‌ 16) ರಂದು ಬಿಡುಗಡೆ ಮಾಡುತ್ತಿದೆ. ಮೋಟೋಕ್ಕೂ ಕೂಡ ಇದು ಚೊಚ್ಚಲ ಟಿವಿ. ತನ್ನ ಡೆಬ್ಯೂ ಟಿವಿಯ ಬಗ್ಗೆ ಮೋಟೋ ಯಾವುದೇ ಸುಳಿವು ನೀಡಿಲ್ಲ. ಸೆ.16ರಂದು ಮೋಟೋ ಇ6 ಮೊಬೈಲ್‌ ಬಿಡುಗಡೆಯಾಗಲಿದ್ದು, ಅದರ ಜೊತೆಗೇ ಟಿವಿಯನ್ನೂ ಬಿಡುಗಡೆ ಮಾಡಲಿದೆ. ಈ ಟಿವಿಯಲ್ಲಿ 30 ವ್ಯಾಟ್‌ ಸ್ಪೀಕರ್‌ ಇರಲಿದೆ ಎಂಬ ಸಣ್ಣ ಸುಳಿವಷ್ಟೇ ದೊರೆತಿದೆ. ಸೆ.29ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಬಿಲಿಯನ್‌ ಡೇ ಮಾರಾಟ ಮೇಲೆ ಆರಂಭವಾಗಲಿದ್ದು, ಆ ಸಂದರ್ಭದಲ್ಲಿ ಮೋಟೋ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ.

ಟೆಲಿವಿಷನ್‌ ಕ್ಷೇತ್ರಕ್ಕೆ ಶಿಯೋಮಿ!
ಒನ್‌ಪ್ಲಸ್‌, ಮೋಟೋ ಟಿವಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶಿಯೋಮಿ 65 ಇಂಚಿನ ಹೊಸ ಟಿವಿಯನ್ನು ಸೆ. 17ರಂದು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಇದರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ತನ್ನ ಹೊಸ ಟಿವಿ ಪ್ರಚಾರಕ್ಕೆ “ಸ್ಮಾರ್ಟ್‌ ಲಿವಿಂಗ್‌ 2020′ ಎಂಬ ಹ್ಯಾಶ್‌ಟ್ಯಾಗ್‌ ಬಳಸುತ್ತಿದೆ. ಹೊಸ “ಮಿ’ ಟಿವಿಯಲ್ಲಿ ಅಮೆಜಾನ್‌ ಪ್ರೈಂ ವಿಡಿಯೋ ಸೌಲಭ್ಯ ಇರುವುದು ವಿಶೇಷ. ಈ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ದೊರಕಲಿದ್ದು, ಬಿಡುಗಡೆಯ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿ ದೊರಕಲಿದೆ.

ಹುರ್ರೆà ಹುವಾವೆ ಟಿವಿ!
ಮೊಬೈಲ್‌ ಫೋನ್‌ ಮಾರಾಟದಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಚೀನಾಧ ಹುವಾವೇ ಕಂಪೆನಿ ಸೆ.19ರಂದು ಜರ್ಮನಿಯ ಮ್ಯೂನಿಚ್‌ನಲ್ಲಿ ತನ್ನ ಹೊಸ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡುತ್ತಿದೆ. ಈ ಟಿವಿ ತನ್ನದೇ ಹಾರ್ಮನಿ ಆಪರೇಟಿಂಗ್‌ ಸಿಸ್ಟಂ ಹೊಂದಿರಲಿದೆ. ಇದು 65 ಇಂಚಿನ ಪರದೆ ಹೊಂದಿದೆ. ಹುವಾವೇಯ ಉಪ ಬ್ರಾಂಡ್‌ ಆದ ಆನರ್‌ ಹೆಸರಿನಲ್ಲಿ 55 ಇಂಚಿನ ಎರಡು ಟಿವಿಗಳನ್ನು ಆಗಸ್ಟ್‌ ತಿಂಗಳಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ.

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next